ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಪೋಸ್ಟ್ ಮಾಡಬೇಡಿ: ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಕರೆ

Update: 2018-06-22 09:25 GMT

ಹೊಸದಿಲ್ಲಿ, ಜೂ.22: ಆನ್‍ಲೈನ್ ನಲ್ಲಿ ನಕಲಿ ಸುದ್ದಿ ಪೋಸ್ಟ್ ಮಾಡಿ ಪ್ರಮಾದವೆಸಗದಂತೆ ಹಾಗೂ ಪಕ್ಷವು ಜನರ ವಿಶ್ವಾಸಾರ್ಹತೆ ಕಳೆದುಕೊಳ್ಳದಂತೆ ಎಚ್ಚರ ವಹಿಸಲು ಬಿಜೆಪಿಯ ಸೋಶಿಯಲ್ ಮೀಡಿಯಾ ನಿರ್ವಾಹಕರು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆಯೊಂದರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.

ಮೋದಿ ಸರಕಾರದ ನಾಲ್ಕು ವರ್ಷಗಳ ಆಡಳಿತದ ಸಾಧನೆಗಳನ್ನು ಜನರ ಬಳಿ ಕೊಂಡೊಯ್ಯುವಂತೆಯೂ  ಅವರು ಸಲಹೆ ನೀಡಿದ್ದಾರೆ. ಮೋದಿ ಸರಕಾರದ ಹಾಗೂ ಹಿಂದಿನ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ತುಲನೆ ಮಾಡುವಂತೆಯೂ ಅವರು ಹೇಳಿದರಲ್ಲದೆ, ತಮ್ಮ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿ ಪೋಸ್ಟ್ ಗಳನ್ನು ಹೆಚ್ಚಿನ ಜನರು ನೋಡುವಂತೆ ಮಾಡಬೇಕೆಂದೂ ತಿಳಿಸಿದರು.

"ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ, ಫೋಟೋ, ಅಂಕಿ ಸಂಖ್ಯೆ ಹಾಗು ಸಂದೇಶಗಳನ್ನು ಪೋಸ್ಟ್ ಮಾಡದಂತೆ ಪಕ್ಷದ ಅಧ್ಯಕ್ಷರು ಎಚ್ಚರಿಸಿದ್ದಾರೆ" ಎನ್ನುವುದನ್ನು ಸಭೆಯಲ್ಲಿ ಭಾಗವಹಿಸಿದ ಹೆಸರು ಹೇಳಲಿಚ್ಛಿಸದ ಕಾರ್ಯಕರ್ತರೊಬ್ಬರು ದೃಢಪಡಿಸಿದ್ದಾರೆ.

ಎನ್‍ಡಿಎಂಸಿ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಸಭೆಯಲ್ಲಿ ಸುಮಾರು 300 ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದು ಇವರೆಲ್ಲರಿಗೂ ಸಾಮಾಜಿಕ ಜಾಲತಾಣಗಳಲ್ಲಿ 10,000ಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಪಕ್ಷದ ದಿಲ್ಲಿ ಘಟಕದ ಎಸ್‍ಸಿ ಮೋರ್ಚಾ ಹಾಗೂ ಕೋರ್ ಸಮಿತಿ ಸಭೆಗಳನ್ನೂ ಉದ್ದೇಶಿಸಿ ಮಾತನಡಿದ ಶಾ ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಪಕ್ಷದ ರೂಪರೇಷೆಯ ಬಗ್ಗೆ ಚರ್ಚಿಸಿದರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News