ಹಜ್‌ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ವಿರೋಧವೇಕೆ ?

Update: 2018-06-22 13:05 GMT

ಬೆಂಗಳೂರು, ಜೂ.22: ರಾಜ್ಯದ ಹಜ್‌ ಭವನಕ್ಕೆ ಹಝ್ರತ್ ಟಿಪ್ಪು ಸುಲ್ತಾನ್ ಹೆಸರಿಡಲು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದೇಕೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್‌ ಖಾನ್ ಪ್ರಶ್ನಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಜ್‌ ಭವನ ಉದ್ಘಾಟನೆ ಸಂದರ್ಭದಲ್ಲಿಯೇ ನಮ್ಮ ಸಮುದಾಯದ ಧಾರ್ಮಿಕ ಗುರುಗಳು ಹಾಗೂ ಜನತೆ ಹಜ್‌ ಭವನಕ್ಕೆ ಹಝ್ರತ್ ಟಿಪ್ಪುಸುಲ್ತಾನ್ ಹಜ್ ಭವನ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿದ್ದರು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ ಎಂದರು.

ಹಜ್‌ ಭವನಕ್ಕೆ ಟಿಪ್ಪುಸುಲ್ತಾನ್ ಹೆಸರಿಡುವುದರಲ್ಲಿ ತಪ್ಪೇನಿದೆ. ಅದು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಭವನ, ಅದೊಂದು ಧಾರ್ಮಿಕ ಕಟ್ಟಡವಾಗಿದೆಯೇ ಹೊರತು, ಸರಕಾರಿ ಕಟ್ಟಡವಲ್ಲ. ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಅಧಿಕಾರಿಗಳ ಸಭೆಯಲ್ಲಿ, ಹೆಸರು ಬದಲಾವಣೆ ಸಂಬಂಧ ಧಾರ್ಮಿಕ ಗುರುಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಮನವಿ ಕುರಿತು ಅಧಿಕಾರಿಗಳು ನನಗೆ ಮಾಹಿತಿ ನೀಡಿದರು ಎಂದು ಅವರು ಹೇಳಿದರು.

ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಿದ್ದೆ. ಟಿಪ್ಪು ಜಯಂತಿಗೂ ಈ ಭವನಕ್ಕೆ ನಾಮಕರಣ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಹಲವು ಕಾರಣಗಳಿಂದ ಟಿಪ್ಪು ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ವಿರೋಧ ವ್ಯಕ್ತವಾಗಿತ್ತು. ಆದರೆ, ಹಜ್‌ ಭವನಕ್ಕೆ ನಾಮಕರಣ ಮಾಡುವ ವಿಚಾರದಲ್ಲಿ ಬಿಜೆಪಿಯವರು ವಿರೋಧ ಮಾಡಲಾರರು ಎಂಬುದು ನನ್ನ ಅಭಿಪ್ರಾಯ ಎಂದು ಅವರು ತಿಳಿಸಿದರು.

ವಿಮಾನ ನಿಲ್ದಾಣ, ರೈಲು ನಿಲ್ದಾಣ, ಉದ್ಯಾನವನ, ರಸ್ತೆ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ನಾವು ಟಿಪ್ಪು ಸುಲ್ತಾನ್ ಹೆಸರು ನಾಮಕರಣ ಮಾಡಲು ಬಯಸಿದರೆ ಬಿಜೆಪಿಯವರು ವಿರೋಧ ಮಾಡಬಹುದು. ಆದರೆ, ಈ ಕಟ್ಟಡವು ಸಮುದಾಯದ ಆಸ್ತಿಯಾಗಿರುವುದರಿಂದ ಅದಕ್ಕೆ ನಾವು ನಾಮಕರಣ ಮಾಡಿದರೆ ಬಿಜೆಪಿಯವರೇಕೆ ವಿರೋಧ ಮಾಡುತ್ತಾರೆ ಎಂದು ಝಮೀರ್‌ ಅಹ್ಮದ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News