ಯಾವುದೇ ಮಾಫಿಯಾಗಳ ಜೊತೆ ಪೊಲೀಸರು ಕೈ ಜೋಡಿಸಿ ತಪ್ಪು ಮಾಡಬಾರದು: ಎಚ್.ಡಿ.ಕುಮಾರಸ್ವಾಮಿ

Update: 2018-06-22 13:18 GMT

ಬೆಂಗಳೂರು, ಜೂ.22: ರಿಯಲ್ ಎಸ್ಟೇಟ್ ವ್ಯವಹಾರ ಸೇರಿ ಯಾವುದೇ ರೀತಿಯ ಮಾಫಿಯಾಗಳ ಜೊತೆ ಪೊಲೀಸರು ಕೈ ಜೋಡಿಸಿ ತಪ್ಪು ಮಾಡಬಾರದೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ನಗರ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಪೊಲೀಸ್ ಹಿರಿಯ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗಳು, ಇತ್ತೀಚಿಗೆ ನಡೆದ ಭೀಮತೀರದ ಗಂಗಾಧರ ಚಡಚಣ ನಿಗೂಢ ಸಾವು ಪ್ರಕರಣ ಪ್ರಸ್ತಾಪಿಸಿ, ಮಾಫಿಯಾ ಜೊತೆ ಪೊಲೀಸರು ಕೈಜೋಡಿಸಬಾರದೆಂದು ಕಟ್ಟನಿಟ್ಟಿನ ಸೂಚನೆ ನೀಡಿ, ಇಂತಹ ಪ್ರಕರಣಗಳು ಮರುಕಳಿಸಿದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು ಎಂದು ಮೂಲಗಳು ತಿಳಿಸಿವೆ.

ಸಭೆ ನಂತರ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರವಿದ್ದು, ತಮ್ಮ ಮೇಲೆ ಒತ್ತಡಗಳು ಬರಬಹುದು. ಆದರೆ, ಯಾವುದೇ ಒತ್ತಡಗಳಿಗೆ ಮಣಿಯದಂತೆ ತಮ್ಮ ಪಾಲಿನ ಕರ್ತವ್ಯವನ್ನು ದಕ್ಷತೆಯಿಂದ ನಿರ್ವಹಿಸಿ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿ ಶಾಂತಿ-ಸೌಹಾರ್ದತೆ ಕಾಪಾಡಿ, ಜನಸ್ನೇಹಿಯಾಗಿರಬೇಕೆಂದು ನುಡಿದರು.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸುವಲ್ಲಿ ತೋರಿದ ಪರಿಶ್ರಮವನ್ನು ಇತರ ಪ್ರಕರಣಗಳಲ್ಲೂ ತೋರುವಂತೆ ಪೊಲೀಸರಿಗೆ ಸಲಹೆ ಮಾಡಿದ ಅವರು, ರಾಜ್ಯವು ಉತ್ತಮ ಕಾನೂನು ಸುವ್ಯವಸ್ಥೆಗೆ ಹೆಸರಾಗಿದೆ. ಅಷ್ಟೇ ಅಲ್ಲದೆ, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿಯೂ ರಾಜ್ಯದ ಪೊಲೀಸರು ದೇಶದಲ್ಲಿ ಖ್ಯಾತಿಗೆ ಪಾತ್ರರಾಗಿದ್ದಾರೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಉತ್ತಮ ಎಂದು ಹೇಳಿದರು.

ರೌಡಿ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ನಿಯಂತ್ರಿಸಿ, ಭೂಗತ ಚಟುವಟಿಕೆಗಳನ್ನು ಮಟ್ಟ ಹಾಕಿ, ನಕ್ಸಲ್ ಚಟುವಟಿಕೆಗಳನ್ನು ತಲೆ ಎತ್ತದಂತೆ ಮಾಡಿ, ಕೋಮು ಸಂಘರ್ಷ ನಡೆಯದಂತೆ ನೋಡಿಕೊಂಡು ಸಮಾಜ ಶಾಂತಿಯುತವಾಗಿ ಇರುವಂತೆ ಮಾಡಬೇಕಾದ ಜವಾಬ್ದಾರಿ ತಮ್ಮ ಮೇಲಿದೆ. ತಾವು ಅಹರ್ನಿಶಿಯಾಗಿ ಕೆಲಸ ಮಾಡಬೇಕು. ಈ ಮೂಲಕ ಸರಕಾರಕ್ಕೆ ಒಳ್ಳೆಯ ಹೆಸರನ್ನು ತರಬೇಕೆಂದು ತಿಳಿಸಿದರು.

ಕಳೆದ ಚುನಾವಣೆಗಳನ್ನು ನ್ಯಾಯಸಮ್ಮತವಾಗಿ ಪೊಲೀಸರು ಉತ್ತಮ ಪರಿಶ್ರಮ ತೋರಿದ್ದು ಬದಲಾವಣೆಗೆ ತಕ್ಕಂತೆ ಸಂಘಟಿತ ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಪೊಲೀಸರು ಸಜ್ಜಾಗಬೇಕು. ಇಲಾಖೆಗೆ ಬೇಕಾಗಿರುವ ಎಲ್ಲ ರೀತಿಯ ಸಹಕಾರ ನೀಡಲು ತಾವು ಸಿದ್ಧನಿದ್ದೇನೆ ಎಂದ ಅವರು, ಸಮಸ್ಯೆ ಇಟ್ಟುಕೊಂಡೇ ಬರುವ ದೂರುದಾರರಿಗೆ ಪೊಲೀಸ್ ಠಾಣೆಗಳಲ್ಲಿ ಮೊದಲು ಪೊಲೀಸರೆಂದರೆ ಭಯ ಇಲ್ಲ ಎನ್ನುವ ವಾತಾವರಣ ಸೃಷ್ಟಿಸಬೇಕು ಎಂದರು.

ಜೈಲಿನಲ್ಲಿ ನಡೆಯುವ ಅಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದ್ದಾಗಿ ತಿಳಿದು ಬಂದಿದ್ದು, ಗಾಂಜಾ, ಅಫೀಮು ಇತ್ಯಾದಿ ವಸ್ತುಗಳ ಪೂರೈಕೆಯಲ್ಲಿ ಪೊಲೀಸರ ಶಾಮೀಲು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಡಿಜಿಪಿ ನೀಲಮಣಿರಾಜು, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೇರಿ ಹಿರಿಯ ಅಧಿಕಾರಿಗಳಿದ್ದರು.

‘ಗೌರಿ ಹತ್ಯೆ ಪ್ರಕರಣದಲ್ಲಿ ಮುಲಾಜಿಲ್ಲದೆ ಕ್ರಮ: ಎಚ್.ಡಿ.ಕುಮಾರಸ್ವಾಮಿ

 ಸಭೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರ ಪಡೆದ ಮುಖ್ಯಮಂತ್ರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಯಾವುದೇ ಸಂಘಟನೆಗೆ ಸೇರಿದ್ದರೂ, ಮುಲಾಜಿಲ್ಲದೆ, ಕ್ರಮ ಜರುಗಿಸಿ ಎಂದು ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News