ನಾವು ಪಾರದರ್ಶಕವಾಗಿದ್ದೇವೆ: ಸಂಸದ ಡಿ.ಕೆ.ಸುರೇಶ್

Update: 2018-06-22 13:44 GMT

ಬೆಂಗಳೂರು, ಜೂ. 22: ರಾಜಕೀಯ ದುರುದ್ದೇಶದಿಂದ ಕೇಂದ್ರ ಸರಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ, ನಾವು ಇದನ್ನೆಲ್ಲ ಸಮರ್ಪಕವಾಗಿ ಎದುರಿಸುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಶುಕ್ರವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ‘ಹವಾಲಾ ಹಣ’ ಎಂದು ಅಪಪ್ರಚಾರ ಮಾಡುತ್ತಿದೆ. ನಮ್ಮ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಲಾಗುತ್ತಿದೆ. ಹವಾಲಾ ಹಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಹವಾಲಾ ಕೊಟ್ಟವರು ಯಾರು? ಅವರು ಯಾರಿಗೆ ಕೊಟ್ಟರು? ಎಂಬ ಮಾಹಿತಿಯೇ ಇಲ್ಲ. ಈ ಬಗ್ಗೆ ಸಾಕ್ಷಿ ಅಗತ್ಯ ಎಂದ ಅವರು, ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಕೆಡಿಸುವ ಉದ್ದೇಶದಿಂದ ಹವಾಲಾ ತಳುಕು ಹಾಕಲಾಗುತ್ತಿದೆ ಎಂದು ಸುರೇಶ್ ಆರೋಪಿಸಿದರು.

ಈ ಪ್ರಕರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬದ ಯಾರೊಬ್ಬರೂ ಭಾಗಿಯಾಗಿಲ್ಲ. ಇದು ಕೇವಲ ರಾಜಕೀಯ ಷಡ್ಯಂತ್ರ. ರಾಜಕೀಯ ಉದ್ದೇಶಕ್ಕಾಗಿ ಊಹಾಪೋಹ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಕುರಿತಂತೆ ಯಾವುದೇ ಆತಂಕ ಬೇಡ. ನಾವು ಪಾರದರ್ಶಕವಾಗಿದ್ದೇವೆ ಎಂದು ಸುರೇಶ್ ಹೇಳಿದರು.

ಕೇಂದ್ರ ಸರಕಾರ ತನ್ನ ಅಧೀನ ಸಂಸ್ಥೆಗಳ ಮೂಲಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಡಿ.ಕೆ.ಶಿವಕುಮಾರ್ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಅವರು, ರಾಮನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News