‘ಹಿಂದೂ ಚೋರ್’ ನಾಟಕದ ವಿರುದ್ಧ ಕೇಸರಿ ಆಕ್ರೋಶ

Update: 2018-06-23 18:35 GMT

‘ಹಿಂದೂ ಚೋರ್’ ಎಂಬ ಹೆಸರಿನ ನಾಟಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕೋಲ್ಕತಾದ ಫೇಸ್‌ಬುಕ್ ಬಳಕೆದಾರರೊಬ್ಬರು ಕೋಲ್ಕತಾ ಪೊಲೀಸರಿಗೆ ದೂರು ನೀಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ನಾಟಕದ ಬಗ್ಗೆ ವಿವಾದ ಭುಗಿಲೆದ್ದು, ಇಡೀ ಪಶ್ಚಿಮ ಬಂಗಾಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ದಾರಿ ಮಾಡಿಕೊಟ್ಟಿತ್ತು. ನಾಟಕದ ಶೀರ್ಷಿಕೆಯು ತನ್ನ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆಯೆಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಹಿಂದೂಚೋರ್ ನಾಟಕದ ಶೀರ್ಷಿಕೆಯ ವಿವಾದವು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವಾರು ಫೇಸ್‌ಬುಕ್ ಬಳಕೆದಾರರು ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ನಾಟಕದ ನಿಷೇಧ ಹೇರಬೇಕೆಂದು ಅವರು ಮಮತಾ ಬ್ಯಾನರ್ಜಿ ಸರಕಾರವನ್ನು ಆಗ್ರಹಿಸಿದ್ದರು. ಮುಕ್ತ ವಾಕ್‌ಸ್ವಾತಂತ್ರದ ಹೆಸರಿನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳ ಸರಕಾರವು ಹಿಂದೂಗಳ ವಿರುದ್ಧ ದ್ವೇಷವನ್ನು ಹರಡುತ್ತಿದೆಯೆಂದು ಒಬ್ಬರು ಟ್ವೀಟ್ ಮಾಡಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಫಾಲೋ ಕೂಡಾ ಮಾಡಿದ್ದರು. ಆದರೆ ಈ ನಾಟಕದ ಕಥಾವಸ್ತು ಬಾಂಗ್ಲಾದಲ್ಲಿ ಹಿಂದೂಗಳು ಎದುರಿಸುತ್ತಿರುವ ದೌರ್ಜನ್ಯ ಹಾಗೂ ಯಾತನೆಗಳ ಕಥಾವಸ್ತುವಿನಿಂದ ಕೂಡಿದೆಯೆಂದು ಕೆಲವು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ ಬಳಿಕ ಪ್ರತಿಭಟನಾಕಾರರು ಮುಜುಗರಕ್ಕೀಡಾಗಬೇಕಾಯಿತು.

ಸಾಮಾಜಿಕ ಜಾಲತಾಣಗಳಲ್ಲಿ ಈ ಏಕಪಾತ್ರಾಭಿನಯದ ನಾಟಕದ ಕುರಿತಾದ ವಿವಾದವು ಉಲ್ಬಣಿಸಿದಂತೆಯೇ, ಎಚ್ಚೆತ್ತುಗೊಂಡ ಕೋಲ್ಕತಾ ಪೊಲೀಸರು ಕೋಲ್ಕತಾ ನಗರಾದ್ಯಂತ ಅಂಟಿಸಲಾಗಿದ್ದ ಹಿಂದೂ ಚೋರ್ ನಾಟಕದ ಪೋಸ್ಟರನ್ನು ತೆಗೆಸಿದ್ದಾರೆ ಮತ್ತು ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಡಲು ಪ್ರಯತ್ನಿಸಿದ ಆರೋಪದಲ್ಲಿ ನಾಟಕದೊಂದಿಗೆ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಬಿಜೆಪಿಯ ಮಾಹಿತಿತಂತ್ರಜ್ಞಾನ ವಿಭಾಗದ ಉಸ್ತುವಾರಿಯಾದ ಅಕ್ಷಯ್ ಸಿಂಗ್ ಕೂಡಾ ಹಿಂದೂ ಚೋರ್ ನಾಟಕವು ಹಿಂದೂ ಸಮುದಾಯದ ಭಾವನೆಗಳಿಗೆ ಹಾನಿಯುಂಟು ಮಾಡುತ್ತದೆ ಮತ್ತು ವಿವಿಧ ಧಾರ್ಮಿಕ ಪಂಗಡಗಳ ನಡುವೆ ದ್ವೇಷದ ಭಾವನೆಯನ್ನು ಕೆರಳಿಸುತ್ತದೆಯೆಂದು ಆರೋಪಿಸಿದ್ದರು.

ಸ್ವಾರಸ್ಯಕರವೆಂದರೆ, ವಾಸ್ತವಿಕವಾಗಿ ಈ ನಾಟಕವು ಹಿಂದೂ ಸಮುದಾಯವನ್ನು ನಿಂದಿಸುವ ಕಥೆಯನ್ನು ಹೊಂದಿಲ್ಲ. ಬಾಂಗ್ಲಾದೇಶದಲ್ಲಿ ಹಿಂದೂಗಳು ನಿರಂತರವಾಗಿ ಎದುರಿಸುತ್ತಿರುವ ಬವಣೆ ಹಾಗೂ ದೌರ್ಜನ್ಯಗಳನ್ನು ಆಧರಿಸಿ ಈ ನಾಟಕವನ್ನು ರಚಿಸಲಾಗಿದೆಯೆಂದು ಪಶ್ಚಿಮ ಬಂಗಾಳದ ಬಿಜೆಪಿ ಶಾಸಕಿ ಅಪರಾಜಿತ ಚಕ್ರವರ್ತಿ ಆನಂತರ ಫೇಸ್‌ಬುಕ್‌ನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.

 ಜೂನ್ 25ರಂದು ನಾಟಕ ಪ್ರದರ್ಶನಗೊಳ್ಳಲಿದ್ದು, ಆನಂತರವಷ್ಟೇ ಪ್ರತಿಭಟನೆ ಅಗತ್ಯವೇ ಎಂಬ ಬಗ್ಗೆ ನಿರ್ಧರಿಸಬೇಕು ಎಂದವರು ಪ್ರತಿಭಟನೆ ವ್ಯಕ್ತಪಡಿಸುತ್ತಿರುವ ಕೇಸರಿಗುಂಪುಗಳಿಗೆ ಕರೆ ನೀಡಿದ್ದಾರೆ. ‘‘ಬಾಂಗ್ಲಾದಲ್ಲಿ ಪ್ರಸ್ತುತ ಹಿಂದೂಗಳು ಎದುರಿಸುತ್ತಿರುವ ದಯನೀಯ ಸ್ಥಿತಿಯ ಬಗ್ಗೆ ಯಾರಿಗೂ ಅರಿವಿಲ್ಲ. ಅಲ್ಲಿ ಅವರನ್ನು ಬೆಂಬಲಿಸಲು ಯಾರೂ ಇಲ್ಲ’’ ಎಂದು ಆಕೆ ಹೇಳಿದ್ದಾರೆ. ಈ ಮಧ್ಯೆ ಬಿಜೆಪಿಯ ಮಾಜಿ ಸಾಮಾಜಿಕ ಜಾಲತಾಣ ವ್ಯೆಹತಜ್ಞ ದೇಬಶೀಶ್ ಅಯ್ಯರ್ ಕೂಡಾ ಈ ನಾಟಕವು ಹಿಂದೂಪರವೆಂದು ಹೇಳಿದ ಬಳಿಕ ವಿರೋಧ ವ್ಯಕ್ತಪಡಿಸಿದವರು ಪೇಚಿಗೆ ಸಿಲುಕಿಬಿಟ್ಟರು. ಆದಾಗ್ಯೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ಎದುರಾಗಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಪ್ರೊಬಿರ್ ಮಂಡಲ್ ಅವರು ತಮ್ಮ ನಾಟಕದ ಹೆಸರನ್ನು ‘ಗಿರೇನ್ ಚೋರ್’ ಎಂದು ಬದಲಿಸಲು ನಿರ್ಧರಿಸಿದ್ದಾರೆ.

‘‘ಇದೊಂದು ‘ಹಿಂದೂ ಚೋರ್’ ಎಂದು ಕರೆಸಿಕೊಳ್ಳುವಾತನ ದಿಟ್ಟತನದ ಕಥೆಯಾಗಿದೆ. ನಾನು ಯಾರದೇ ಧಾರ್ಮಿಕ ಸಂವೇದನೆಗಳಿಗೆ ನೋವುಂಟು ಮಾಡಲು ಬಯಸುವುದಿಲ್ಲ. ಆದರೆ ಗೊತ್ತಿಲ್ಲದೆ ಹಾಗಾಗಿದ್ದಲ್ಲಿ ಆ ಬಗ್ಗೆ ನಾನು ಕ್ಷಮೆಯಾಚಿಸುತ್ತೇನೆ’’ ಎಂದಿದ್ದರು ಅವರು. ಪ್ರೊಬಿರ್ ಮಂಡಲ್ ಅವರ ಫೇಸ್‌ಬುಕ್ ಪ್ರೊಫೈಲ್ ಗಮನಿಸಿದರೆ, ಅವರೊಬ್ಬ ಹಿಂದೂ ಬಲಪಂಥೀಯ ವಿಚಾರಧಾರೆಗಳ ಬಗ್ಗೆ ಒಲವುಳ್ಳವರೆಂಬುದನ್ನು ಸುಲಭವಾಗಿ ಅರಿಯಬಹುದಾಗಿದೆ. ಬಿಜೆಪಿಯ ಬೆಂಬಲಿಗರಾಗಿದ್ದರೂ ಅವರನ್ನು ಈ ವಿವಾದದಲ್ಲಿ ಎಳೆದುತರಲಾಗಿತ್ತು ಹಾಗೂ ಕೇಸರಿಸಂಘಟನೆಗಳ ನಾಯಕರು ಅವರನ್ನು ವಾಚಾಮಗೋಚರವಾಗಿ ನಿಂದಿಸಿದ್ದರು. ರಜೀಬ್ ರಾಯ್ ಎಂಬ ಬಲಪಂಥೀಯ ಹಿಂದುತ್ವವಾದಿಯೊಬ್ಬ, ಮಂಡಲ್‌ರ ದೂರವಾಣಿ ಸಂಖ್ಯೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ‘‘ಎಲ್ಲಾ ಹೆಮ್ಮೆಯ ಹಿಂದೂಗಳು’’ ಅವರಿಗೆ ದೂರವಾಣಿ ಕರೆ ಮಾಡಿ ಪ್ರತಿಭಟನೆ ವ್ಯಕ್ತಪಡಿಸಬೇಕೆಂದು ಕರೆ ಕೊಟ್ಟಿದ್ದರು. ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಕೂಡಾ ಈ ವಿವಾದದಲ್ಲಿ ಎಳೆದುತರಲು ಕೋಮುವಾದಿ ಶಕ್ತಿಗಳು ಪ್ರಯತ್ನಿಸಿದ್ದರು.

ಮಮತಾ ಅವರು ರಾಜ್ಯವನ್ನು ಹಿಂದೂಗಳ ವಿರುದ್ಧ ಆಕ್ಷೇಪಕಾರಿಯಾದ ಹೇಳಿಕೆಗಳನ್ನು ಪ್ರಚಾರ ಮಾಡುವವರಿಗೆ ಸುರಕ್ಷಿತ ಸ್ವರ್ಗವಾಗಿ ಮಾಡಿದ್ದಾರೆಂದು, ಕೇಸರಿ ಸಂಘಟನೆಗಳು ಆಪಾದಿಸಿದ್ದವು. ಕಳೆದ ಕೆಲವು ಸಮಯದಿಂದ ಸಂಘ ಪರಿವಾರದ ಬೆಂಬಲಿಗರು ಮಮತಾರನ್ನು ಮುಸ್ಲಿಂ ಪರ ಪಕ್ಷಪಾತಿಯೆಂದು ಹಾಗೂ ಬಾಂಗ್ಲಾದೇಶದ ಬಗ್ಗೆ ಸಹಾನೂಭೂತಿ ಹೊಂದಿರುವರೆಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ. ಕೋಮು ಆಧಾರದಲ್ಲಿ ದ್ವೇಷವನ್ನು ಹರಡುವ ಪ್ರಯತ್ನದೊಂದಿಗೆ ಆರಂಭಗೊಂಡ ಈ ಇಡೀ ಪ್ರಕರಣವು, ಕೊನೆಗೆ ಸಮಾನ ರಾಜಕೀಯ ಚಿಂತನೆಯ ವ್ಯಕ್ತಿಗಳ ನಡುವಿನ ಚಿಂತನೆಯೊಂದಿಗೆ ಕೊನೆಗೊಂಡಿತು.

Writer - -ಆರ್.ಎನ್.

contributor

Editor - -ಆರ್.ಎನ್.

contributor

Similar News