ಹಜ್ ಭವನಕ್ಕೆ ಅಬ್ದುಲ್ ಕಲಾಂ ಹೆಸರಿಡಲಿ: ಯಡಿಯೂರಪ್ಪ

Update: 2018-06-24 13:28 GMT

ಬೆಂಗಳೂರು, ಜೂ.24: ಹಜ್ ಭವನಕ್ಕೆ ‘ಟಿಪ್ಪು ಸುಲ್ತಾನ್ ಘರ್’ ಎಂಬ ಹೆಸರಿಡುವ ಬದಲು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಸಲಹೆ ನೀಡಿದ್ದಾರೆ.

ರವಿವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರಕಾರದ ನಾಲ್ಕು ವರ್ಷದ ಸಾಧನೆಗಳ ಕುರಿತಾದ ಶುದ್ಧ ನಡೆ-ಸೂಕ್ತ ವಿಕಾಸ್ ಎಂಬ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಹಜ್ ಭವನದ ಹೆಸರು ಬದಲಿಸಲೇಬೇಕಾದರೆ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರ ಹೆಸರನ್ನು ಇಡಲಿ ಎಂದು ಸಲಹೆ ನೀಡಿದರು.

ನಾಲ್ಕು ವರ್ಷಗಳಲ್ಲಿ ಮೋದಿ ಸರಕಾರದ ಸಾಧನೆಗಳನ್ನು ತಿಳಿಸಲು ನಮ್ಮ ಕಾರ್ಯಕರ್ತರು ಈ ಪುಸ್ತಕವನ್ನು ಹೊರ ತಂದಿದ್ದಾರೆ. ಹತ್ತು ವರ್ಷ ಆಡಳಿತ ನಡೆಸಿದ ಯುಪಿಎ ಸರಕಾರವು ಅತ್ಯಂತ ಹೆಚ್ಚು ಭ್ರಷ್ಟಾಚಾರ ಮತ್ತು ಆಡಳಿತ ಕುಸಿತ ಕಂಡಿತ್ತು. ಆದರೆ, ಎನ್‌ಡಿಎ ಸರಕಾರದಲ್ಲಿ ದೇಶದ ಆರ್ಥಿಕತೆ ಸುಭದ್ರವಾಗಿದೆ. ರಕ್ಷಣೆ ವ್ಯವಸ್ಥೆ ಬಲಿಷ್ಠವಾಗಿದೆ. ಅಂತರರಾಷ್ಟ್ರೀಯ ಸಂಬಂಧದಲ್ಲಿ ವೃದ್ಧಿಯಾಗಿ ಜನರಲ್ಲಿ ಭರವಸೆ ಮೂಡಿಸಿದೆ ಎಂದು ತಿಳಿಸಿದರು.

ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರು ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ, ಇಂದು 20 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮೋದಿ ಅವರನ್ನು ಹೆದರಿಸಲು ಶಕ್ತಿ ಇಲ್ಲದೆ ವಿರೋಧ ಪಕ್ಷಗಳು ಒಂದಾಗಿದ್ದು, ಇದಕ್ಕೆ ಹೆದರುವ ಪ್ರಶ್ನೆಯೆ ಇಲ್ಲ. ಕೇಂದ್ರದ ಜನಪರ ಯೋಜನೆ ನಮ್ಮ ಶಕ್ತಿ ತುಂಬಲಿದೆ. ಹೀಗಾಗಿಯೇ ಸರಕಾರದ ಸಾಧನೆಗಳ ಪಟ್ಟಿಯನ್ನು ರೆಡಿ ಮಾಡಿದ್ದೇವೆ. ಕೈಪಿಡಿಯನ್ನು ಕೊಟ್ಟು ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ಹಲವು ಭರವಸೆಯನ್ನು ನೀಡಿದ್ದರು. ಹೀಗಾಗಿ, ಜೆಡಿಎಸ್‌ನಿಂದ 37 ಜನರು ಗೆದ್ದಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಲ್ಲ ಭರವಸೆಗಳನ್ನು ಜಾರಿ ಮಾಡುತ್ತೇನೆಂದು ಹೇಳಿದ್ದರು. ಆದರೆ, ಇನ್ನು ಏನೂ ಮಾಡಿಲ್ಲ. ಕಾದುನೋಡೋಣ ಅಂತ ಕಾರ್ಯಕರ್ತರಿಗೆ ಹೇಳಿದ್ದೇನೆ. ಅಲ್ಲದೆ, ರೈತರ ಹಿತದೃಷ್ಟಿಯಿಂದ ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದೇವೆ. ಈ ಮೊದಲು ಇದ್ದ ಸರಕಾರ, ಈಗ ಇರುವ ಸರಕಾರ ರೈತರ ವಿಚಾರದಲ್ಲಿ ತಪ್ಪು ಹೆಜ್ಜೆಗಳನ್ನು ಇಟ್ಟಿವೆ ಎಂದು ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಅವರು ತಮ್ಮ ಹತ್ತಿರ ಇರುವ ಡೈರಿಗಳನ್ನು ಬಿಡುಗಡೆ ಮಾಡಲಿ ಬೇಡ ಅಂದವರು ಯಾರು. ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಕುಂಟು ನೆಪ ಹೇಳುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಿಕಿತ್ಸೆಗಾಗಿ ಧರ್ಮಸ್ಥಳಕ್ಕೆ ಹೋಗಿದ್ದು, ಅತ್ತಕಡೆ ಹೆಚ್ಚಿನ ಗಮನ ಹರಿಸಲಿ. ಬಿ.ಜೆ.ಪುಟ್ಟಸ್ವಾಮಿ ಅವರು ಅಸಮಾಧಾನದಿಂದಾಗಿ ರಾಜೀನಾಮೆ ನೀಡುವ ಬಗ್ಗೆ ಹೇಳುತ್ತಿದ್ದಾರೆ. ಅವರನ್ನು ಕರೆದು ಮಾತುನಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News