ಟಿಪ್ಪು ವಿರುದ್ಧ ಅಸಹನೆ ಯಾಕೆ ?

Update: 2018-06-24 18:32 GMT

ಮಾನ್ಯರೇ,

ಇವತ್ತು ಟಿಪ್ಪು ಹೆಸರು ಎತ್ತಿದರೆ ಸಾಕು ಕೆಲವರು ಎಗರಾಡುತ್ತಾರೆ. ಟಿಪ್ಪು ಹೆಸರಲ್ಲಿ ದೊಂಬಿ, ಹತ್ಯೆಗಳು ಸಹ ಆದವು. ಕೇವಲ ಮುಸ್ಲಿಂ ಅನ್ನೋ ಕಾರಣಕ್ಕೆ ಕೆಲವರು ಹೊತ್ತು ಮೆರೆಸಿದರು, ಇನ್ನು ಕೆಲವರು ವಿರೋಧಿಸಿದರು. ಅಂದಿನ ಕಾಲಘಟ್ಟಕ್ಕೆ ತಕ್ಕಂತೆ ಯೋಚಿಸಿದಾಗ ಮಾತ್ರ ಟಿಪ್ಪುವನ್ನು ಅರಿಯಲು ಸಾಧ್ಯ. ಟಿಪ್ಪುವಿನಿಂದ ಎಷ್ಟು ತಪ್ಪುಗಳಾಗಿವೆಯೋ ಅದರ ದುಪ್ಪಟ್ಟು ಲಾಭಗಳಾಗಿವೆ. ಕೇವಲ ಒಂದನ್ನು ಮಾತ್ರ ತೋರಿಸೋದು ರಾಜಕೀಯ. (ಎಡ, ಬಲ ಯಾರದ್ದೇ ಇರಲಿ)ಇವೆಲ್ಲವನ್ನೂ ಬದಿಗಿರಿಸಿ ಒಮ್ಮೆ ಆ ಕಾಲದ ಇತಿಹಾಸ ಗಮನಿಸಿ.

ಅಂದು ಕೇವಲ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ನಿಧಾನವಾಗಿ ನಮ್ಮ ಒಂದೊಂದೇ ಭೂಭಾಗಗಳನ್ನು ಆಕ್ರಮಿಸಿಕೊಳ್ಳುತ್ತಿದ್ದರು. ನಮ್ಮ ಜನರ ಉದ್ಯಮಗಳನ್ನು ನಾಶ ಮಾಡತೊಡಗಿದ್ದರು. ನಮ್ಮ ರಾಜರುಗಳ ನಡುವಿನ ಬಿರುಕನ್ನು ಚೆನ್ನಾಗಿ ಉಪಯೋಗಿಸಿಕೊಂಡು ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟಿ ಒಂದೊಂದೇ ರಾಜ್ಯ ಕಬಳಿಸುತ್ತಿದ್ದರು. ನಮ್ಮ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡರು. ನಮ್ಮ ರಾಜರುಗಳನ್ನು ತಮ್ಮ ಚೇಲಾಗಳನ್ನಾಗಿ ಮಾಡಿಕೊಂಡರು. ಪ್ರತಿಭಟಿಸಿದವರನ್ನು ಕೊಂದರು.

 ನಮ್ಮ ನೆಲಕ್ಕೆ ವ್ಯಾಪಾರಕ್ಕೆ ಬಂದ ಬ್ರಿಟಿಷರ್ ಕೊನೆಗೆ ಅವರ ಒಪ್ಪಿಗೆ ಇಲ್ಲದೆ ಏನೂ ಮಾಡುವಂತಿಲ್ಲ ಎನ್ನುವ ಹಂತಕ್ಕೆ ಹೋದರು. ಭಾರತೀಯರ ನಡುವಿನ ವ್ಯಾಪಾರ, ವಹಿವಾಟಿಗೆ ಸಹ ನಾವು ಅವರಿಗೆ ತೆರಿಗೆ ಕಟ್ಟುವಂತಾಯಿತು. ನಮ್ಮ ನೆಲದ ರಾಜರುಗಳಿಗೆ ಸಂದಾಯವಾಗುತ್ತಿದ್ದ ಆದಾಯ ಬ್ರಿಟಿಷರ ಖಜಾನೆ ಸೇರುವಂತಾಯಿತು. ನಮ್ಮ ರಾಜರೆಲ್ಲಾ ಒಗ್ಗಟ್ಟಾಗಿ ಸೇರಿ ಇವರನ್ನು ಎದುರಿಸಬಹುದಿತ್ತು ಬದಲಾಗಿ ಒಬ್ಬರ ಗುಂಡಿ ಇನ್ನೊಬ್ಬರು ತೋಡುವ ಕೆಲಸ ಮಾಡಿದರು.ಇನ್ನೂ ಕೆಲವರು ಹೇಡಿಗಳಂತೆ ಬ್ರಿಟಿಷರ ಪಾದಕ್ಕೆ ಎಲ್ಲವನ್ನೂ ಅರ್ಪಿಸಿ ಕೈಚೆಲ್ಲಿದ್ದರು.

 ಬ್ರಿಟಿಷರು ತಂದಿದ್ದ ಸಹಾಯಕ ಸೈನ್ಯ ಪದ್ಧ್ದತಿ (subsidiary alliance) ಒಪ್ಪಿ ನಿಜಾಮ, ಪೇಶ್ವ, ಆವಾಧ್ನಂತಹ ಅನೇಕ ರಾಜರು ಅವರಿಗೆ ಶರಣಾದರು. ಆದರೆ, ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತ ಧೀರ ಟಿಪ್ಪು ಸುಲ್ತಾನ್. ಆತ ಸಹ ಬ್ರಿಟಿಷರಿಗೆ ಇತರ ರಾಜರುಗಳಂತೆ ಕಪ್ಪ ಕಾಣಿಕೆ ಸಲ್ಲಿಸಿ ಶರಣಾಗಿದ್ದರೆ ತನ್ನ ರಾಜ್ಯವನ್ನ್ನು ಉಳಿಸಿಕೊಳ್ಳಬಹುದಿತ್ತು, ಆರಾಮವಾಗಿ ರಾಜ್ಯಭಾರ ಮಾಡಬಹುದಿತ್ತು. ಕೊನೆಗೆ ತನ್ನ ಮಕ್ಕಳನ್ನೇ ಅಡ ಇಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ, ಟಿಪ್ಪು ಮಾತ್ರ ಬ್ರಿಟಿಷರ ಒಂದೇ ಒಂದು ಮಾತಿಗೂ ಸೊಪ್ಪು ಹಾಕಲಿಲ್ಲ . ಬದಲಾಗಿ ಬ್ರಿಟಿಷರನ್ನು ಸೋಲಿಸಲು ಕೊನೆಯ ಉಸಿರಿರುವವರೆಗೂ ಹೋರಾಡಿದ. 

Writer - ಅಮರ್ ಪಾಟೀಲ್, ರಾಯಚೂರು

contributor

Editor - ಅಮರ್ ಪಾಟೀಲ್, ರಾಯಚೂರು

contributor

Similar News