ಅಂತರ್ ಧರ್ಮೀಯ ಜೋಡಿಗೆ ಪಾಸ್ ಪೋರ್ಟ್: ಸುಷ್ಮಾ ಸ್ವರಾಜ್ ಕೊಲೆಗೆ ಕರೆ ನೀಡಿದ ಬಿಜೆಪಿ ಪರ ಟ್ರೋಲ್ ಗಳು!

Update: 2018-06-25 07:40 GMT

ಹೊಸದಿಲ್ಲಿ, ಜೂ.25: ಇತ್ತೀಚೆಗೆ ಪಾಸ್ ಪೋರ್ಟ್ ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಅಂತರ್ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ದೊರೆಯಲು ಸಹಕರಿಸಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಫೇಸ್ ಬುಕ್ ಪುಟದಲ್ಲಿ ಸುಮಾರು 30,000  ಬಿಜೆಪಿ ಬೆಂಬಲಿಗರು ನಿಂದಿಸಿದ್ದಲ್ಲದೆ, ಸುಷ್ಮಾ ಫೇಸ್ಬುಕ್  ಪೇಜ್ ನ ರೇಟಿಂಗ್ ಕಡಿಮೆಗೊಳಿಸಿದ್ದಾರೆ. ಇದೇ ಮೊದಲ ಬಾರಿಗೆ ಸುಷ್ಮಾ ತಮ್ಮದೇ ಪಕ್ಷದ ಬೆಂಬಲಿಗರಿಂದ ಟ್ರೋಲ್ ಗೊಳಗಾಗಿದ್ದಾರೆ. 

ಲಕ್ನೋ ಪಾಸ್ ಪೋರ್ಟ್ ಅಧಿಕಾರಿ  ವಿಕಾಸ್ ಮಿಶ್ರಾ ಎಂಬಾತ ತನ್ವಿ ಸೇಠ್ ಮತ್ತಾಕೆಯ ಪತಿ ಅನಸ್ ಸಿದ್ದೀಕಿ ಪಾಸ್ ಪೋರ್ಟ್ ಅರ್ಜಿಯನ್ನು ಗಮನಿಸಿ ಅವರನ್ನು ನಿಂದಿಸಿದ್ದನ್ನು ತನ್ವಿ ಟ್ವೀಟ್ ಮೂಲಕ ಸಚಿವೆಯ ಗಮನ ಸೆಳೆದಿದ್ದರು. ಘಟನೆಯ ನಂತರ ಅಧಿಕಾರಿಯನ್ನು ತಕ್ಷಣ ಗೋರಖಪುರಕ್ಕೆ ವರ್ಗಾಯಿಸಲಾಗಿದ್ದ,ರೆ ದಂಪತಿಗೆ ಮರುದಿನವೇ ಪಾಸ್ ಪೋರ್ಟ್ ದೊರೆಯುವಂತೆ ಮಾಡಲಾಗಿತ್ತು.

ಕೆಲ ಕಿಡಿಗೇಡಿಗಳು ಈ ವಿಚಾರಕ್ಕೆ ಮತೀಯ ಬಣ್ಣ ಹಚ್ಚಿದ್ದವಲ್ಲದೆ ಸುಷ್ಮಾ ಸ್ವರಾಜ್ ವಿದೇಶ ಪ್ರವಾಸದಲ್ಲಿದ್ದಾಗ ಅವರ ಫೇಸ್ ಬುಕ್ ಪುಟದ ರೇಟಿಂಗ್ ಕುಸಿಯುವಂತೆ ಮಾಡಿದ್ದಾರೆ. ಪರಿಣಾಮ ಸಚಿವೆ ತಮ್ಮ ಪೇಜ್ ನ `ರಿವೀವ್ಸ್' ಬಟನ್  ಡಿಸೇಬಲ್ ಮಾಡಿದ್ದರು. ಟ್ರೋಲ್ ಗಳ ದ್ವೇಷದ ಪರಿಣಾಮ ಸುಷ್ಮಾ ಅವರ ಫೇಸ್ ಬುಕ್ ಪುಟದ ರೇಟಿಂಗ್ ಕೆಲವೇ ಗಂಟೆಗಳ ಅವಧಿಯಲ್ಲಿ 5ರಲ್ಲಿ 4.5 ಇದ್ದಿದ್ದು 1.4ಕ್ಕೆ ಇಳಿದಿತ್ತು.

ಆದರೆ ಪಕ್ಷದ ಬೆಂಬಲಿಗರ ಈ ಟ್ರೋಲಿಂಗ್ ಗೆ ಕಂಗೆಡದ ಸುಷ್ಮಾ ತಮ್ಮ ಇಟಲಿ, ಫ್ರಾನ್ಸ್, ಲಕ್ಸೆಮ್‍ಬರ್ಗ್, ಬೆಲ್ಜಿಯಂ ಹಾಗೂ ಯುರೋಪಿಯನ್ ಯೂನಿಯನ್ ಪ್ರವಾಸ ಮುಗಿಸಿದ ಕೂಡಲೇ ಮತ್ತೆ ಟ್ವಿಟರ್ ನಲ್ಲಿ ಸಕ್ರಿಯರಾಗಿ ತಾವು ಸ್ವದೇಶಕ್ಕೆ ಮರಳಿದ್ದಾಗಿ ತಿಳಿಸಿದರಲ್ಲದೆ, ತಮ್ಮ ಟ್ರೋಲ್ ಗಳನ್ನು ಹೆಸರಿಸಿ ತಿರುಗೇಟು ನೀಡಿದ್ದಾರೆ. ಆಕೆಯನ್ನು ಟ್ರೋಲ್ ಮಾಡಿದವರಲ್ಲಿ ಕೆಲವರನ್ನು ಪ್ರಧಾನಿ ನರೇಂದ್ರ ಮೋದಿ ಸಹಿತ ಉನ್ನತ ಬಿಜೆಪಿ ನಾಯಕರು ಫಾಲೋ ಮಾಡುತ್ತಿದ್ದಾರೆ.

ಸುಷ್ಮಾ ಸ್ವರಾಜ್ ವಿರುದ್ಧ ದ್ವೇಷ ಕಾರಿದ್ದವರಲ್ಲಿ ಒಬ್ಬನಾದ ಕ್ಯಾಪ್ಟನ್ ಸರ್ಬಜಿತ್ ಧಿಲ್ಲಾನ್ ಟ್ವೀಟ್ ಮಾಡಿ, "ಆಕೆ ಒಂದು ಕಿಡ್ನಿಯಲ್ಲಿ (ಇನ್ನೊಬ್ಬರಿಂದ ಎರವಲು ಪಡೆದ) ಬದುಕುತ್ತಿರುವುದರಿಂದ ಹಾಗೂ ಅದು ಯಾವ ಕ್ಷಣದಲ್ಲೂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದಾದುದರಿಂದ ಆಕೆ ವಸ್ತುಶಃ ಸತ್ತಿದ್ದಾರೆ'' ಎಂದಿದ್ದಾನೆ. ಭಾರತೀಯ ಸೇನೆಯ ಭಾಗವಾಗಿದ್ದ ಧಿಲ್ಲಾನ್ ಪಂಜಾಬ್ ಬಿಜೆಪಿಯ ಭಾಗವಾಗಿದ್ದಾರಲ್ಲದೆ ಸುಷ್ಮಾ ಅವರು 2016ರಲ್ಲಿ ನಡೆದ ಕಿಡ್ನಿ ಕಸಿಯನ್ನು ಉಲ್ಲೇಖಿಸಿದ್ದರು.

ಹರಿದ್ವಾರ್ ನಿವಾಸಿ ಇಂದ್ರ ಬಾಜಪೇಯಿ ತನ್ನ ಟ್ವೀಟ್ ನಲ್ಲಿ 'ಶೇಮ್ ಆನ್ ಯು ಮ್ಯಾಮ್' ಎಂದು ಹೇಳಿ, "ಇದು ನಿಮ್ಮ ಇಸ್ಲಾಮಿಕ್ ಕಿಡ್ನಿಯ ಪ್ರಭಾವವೇ ?'' ಎಂದು ಪ್ರಶ್ನಿಸಿದ್ದಾಳೆ. ಬಾಜಪೇಯಿ ತಾನೊಬ್ಬ ಕಲಾವಿದೆ ಎಂದು ಪರಿಚಯಿಸಿಕೊಂಡಿದ್ದಾರೆ.

ಭಾರತಿ1 ಎಂಬಾತ ಸಚಿವೆಯ ತಿರುಚಿದ ಫೋಟೋ ಬಳಸಿ, "ಆಕೆ ಯಾವತ್ತಾದರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ, ಆಕೆಯನ್ನು ಆದಷ್ಟು ಬೇಗ ಮುಗಿಸಬೇಕು'' ಎಂದು ಟ್ವೀಟ್ ಮಾಡಿ ಕೊಲೆಗೆ ಕರೆ ನೀಡಿದ್ದಾನೆ.

ಈ ಟ್ವಿಟ್ಟರಿಗ ಸಚಿವೆಯನ್ನು ಕೊಲ್ಲಬೇಕೆಂದು ಬಹಿರಂಗವಾಗಿ ಹೇಳಿದ್ದರಿಂದ ಹಲವರು ಉತ್ತರ ಪ್ರದೇಶ ಮತ್ತು ದಿಲ್ಲಿ ಪೊಲಿಸರಿನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಸುಷ್ಮಾ ಸ್ವರಾಜ್, "ನಾನು ಜೂನ್ 17ರಿಂದ 23ರ ತನಕ ಭಾರತದಿಂದ ಹೊರಗಿದ್ದೆ. ನನ್ನ ಅನುಪಸ್ಥಿತಿಯಲ್ಲಿ ಏನು ನಡೆಯಿತೆಂದು ನನಗೆ ತಿಳಿದಿಲ್ಲ. ಆದರೆ ಕೆಲವೊಂದು ಟ್ವೀಟ್ ಗಳಿಂದ ನಾನು ಧನ್ಯಳಾಗಿದ್ದೇನೆ. ಅವುಗಳನ್ನು  ನಾನು ಶೇರ್ ಮಾಡಿದ್ದೇನೆ. ಇದರರ್ಥ ಅವುಗಳು ನನಗೆ ಇಷ್ಟವಾಗಿವೆ'' ಎಂದಿದ್ದಾರೆ.

ತಮ್ಮ ಪಕ್ಷದ ಟ್ರೋಲ್ ಗಳನ್ನು ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಸುಷ್ಮಾ ಸ್ವರಾಜ್ ರನ್ನು ಶ್ಲಾಘಿಸಿ ಅವರ ಪರವಾಗಿ ನಿಂತಿದೆ. 

ಕೃಪೆ: jantakareporter.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News