×
Ad

ಚಿತ್ರಕಲೆಯಿಂದ ಬದುಕು ಕಟ್ಟಿಕೊಳ್ಳುವ ವಾತಾವರಣ ಸೃಷ್ಟಿಯಾಗಲಿ: ವಿ.ಆರ್.ಚಂದ್ರಶೇಖರ್

Update: 2018-06-25 19:42 IST

ಬೆಂಗಳೂರು, ಜೂ.25: ತೈಲವರ್ಣ, ಜಲವರ್ಣ ಸೇರಿದಂತೆ ಕೆಲ ಚಿತ್ರಕಲೆಗಳು ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಯುವ ಕಲಾವಿದರು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ವ್ಯಂಗ್ಯ ಚಿತ್ರಕಾರರ ಸಂಘದ ಅಧ್ಯಕ್ಷ ವಿ.ಆರ್.ಚಂದ್ರಶೇಖರ್ ಇಂದಿಲ್ಲಿ ಹೇಳಿದರು.

ಸೋಮವಾರ ಕನ್ನಡ ಭವನದ ವರ್ಣ ಆರ್ಟ್ ಗ್ಯಾಲರಿಯಲ್ಲಿ ನಡೆದ ತಿಂಗಳ ಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಹೊರರಾಜ್ಯ, ವಿದೇಶಗಳ ಕಲಾವಿದರ ಜೊತೆ ಸ್ಥಳೀಯರು ಬೆರೆತು ಚಿತ್ರಕಲೆಯಲ್ಲಿ ಬೆಳೆಯಬೇಕು. ಅದೇ ರೀತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದು, ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ಚಿತ್ರ ಕಲೆಗಳಿಂದಲೂ ಬದುಕು ಕಟ್ಟಿ ಕೊಳ್ಳುವುದು ಸಾಧ್ಯ ಎಂದಾದರೆ ಚಿತ್ರ ಕಲೆಗಳನ್ನು ಆಸಕ್ತಿಯಿಂದ ಕಲಿಯುವ ಮನಸ್ಸುಗಳಿವೆ. ಸರಕಾರ ಈ ಕಲಾವಿದರಿಗೆ ಹೆಚ್ಚಿನ ಸಹಾಯವನ್ನು ಕೊಡುವುದರ ಮೂಲಕ ಕಲೆಗಳನ್ನು ಉಳಿಸಬೇಕು ಎಂದರು.

ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಎಂ.ಜೆ. ಕಮಲಾಕ್ಷಿ ಮಾತನಾಡಿ, ಕಲಾವಿದರಿಗೆ ಪ್ರೋತ್ಸಾಹ, ಉತ್ತೇಜನ ನೀಡಲು ಅಕಾಡೆಮಿಯಿಂದ ತಿಂಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 22ನೇ ತಿಂಗಳ ಚಿತ್ರಕ್ಕೆ ಬೆಂಗಳೂರು, ಉಡುಪಿ, ದಾವಣಗೆರೆ, ಧಾರವಾಡದಿಂದ ಕಲಾವಿದರ ಕಲಾಕೃತಿ ಆಯ್ಕೆ ಮಾಡಿ ಪ್ರದರ್ಶನ ಮಾಡಲಾಗಿದೆ. ಯುವ ಕಲಾವಿದರೆ ಪ್ಲಾಟ್‌ಫಾರ್ಮ್ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಕಡಿಮೆ ಇದ್ದು, ಹೆಚ್ಚಾಗಬೇಕಿದೆ. ಚಿತ್ರಕಲೆ ಪ್ರಾದೇಶಿಕ ಸಂಸ್ಕೃತಿ ಬಗ್ಗೆ ತಿಳಿಸುತ್ತದೆ. ಒಬ್ಬೊಬ್ಬರೂ ಒಂದೊಂದು ಶೈಲಿಯಲ್ಲಿ ಚಿತ್ರ ಬಿಡಿಸುತ್ತಾರೆ. ಪ್ರಸ್ತುತ ರಾಜ್ಯದಲ್ಲಿ 120 ಕಲಾ ಶಾಲೆಗಳಿದ್ದು, ಸರಕಾರದ ಅಗತ್ಯ ಸಹಕಾರದೊಂದಿಗೆ ಶಾಲೆಗಳ ಸಂಖ್ಯೆ ಹೆಚ್ಚಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್ ಇಂದ್ರಮ್ಮ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News