‘ಹಸಿರು ಜಯನಗರ’ ಅಭಿಯಾನಕ್ಕೆ ಶಾಸಕಿ ಸೌಮ್ಯರೆಡ್ಡಿ ಚಾಲನೆ

Update: 2018-06-25 14:50 GMT

ಬೆಂಗಳೂರು, ಜೂ.25: ಜಯನಗರದಲ್ಲಿ ಹಸಿರು ಪರಿಸರವನ್ನು ಮರಳಿ ಸೃಷ್ಟಿಸುವ ನಿಟ್ಟಿನಲ್ಲಿ ‘ಹಸಿರು ಜಯನಗರ’ ಎಂಬ ಅಭಿಯಾನ ಆರಂಭಿಸಲಾಗಿದೆ ಎಂದು ಶಾಸಕಿ ಸೌಮ್ಯರೆಡ್ಡಿ ತಿಳಿಸಿದರು.

ಸೋಮವಾರ ಜಯನಗರ 4ನೇ ಬ್ಲಾಕ್‌ನಲ್ಲಿ ಶಾಸಕರ ಕಚೇರಿ ಉದ್ಘಾಟಿಸಿದ ನಂತರ, ‘ಹಸಿರು ಜಯನಗರ’ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲು ಜಯನಗರ ಹಸಿರುಮಯವಾಗಿತ್ತು. ಆ ದಿನವನ್ನು ಮರಳಿ ತರಬೇಕೆನ್ನುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

ದಿನದಿಂದ ದಿನಕ್ಕೆ ಜಯನಗರ ಕ್ಷೇತ್ರಾದ್ಯಂತ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಪರಿಸರ ಮಾಲಿನ್ಯವಾಗುತ್ತಿದೆ. ಅಲ್ಲದೆ, ಗಿಡ ನೆಟ್ಟ ಬಳಿಕ ಅವುಗಳ ನಿರ್ವಹಣೆ ಮಾಡದಿರುವುದರಿಂದ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ, ಜಯನಗರ ಕ್ಷೇತ್ರದ ಎಲ್ಲ ವಾರ್ಡ್ ವ್ಯಾಪ್ತಿಯಲ್ಲಿ ಅಧಿಕಾರಿಗಳ ಜತೆ ಸೇರಿ ಅಭಿಯಾನ ಆರಂಭಿಸುತ್ತಿರುವುದಾಗಿ ತಿಳಿಸಿದ ಅವರು, ಕ್ಷೇತ್ರದ ಜನತೆ, ಪಾಲಿಕೆ ಸದಸ್ಯರು ಸಹಕಾರ ನೀಡಿದರೆ, ಹಳೆಯ ಜಯನಗರವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಈಗಾಗಲೇ ಕಿತ್ತೂರು ರಾಣಿ ಚೆನ್ನಮ್ಮ ಮೈದಾನ, ಜಯನಗರ, ತಿಲಕ್ ನಗರ ಸೇರಿದಂತೆ ಹಲವೆಡೆ 600ಕ್ಕೂ ಹೆಚ್ಚಿನ ಗಿಡಗಳನ್ನು ನೆಡಲಾಗಿದೆ. ಇನ್ನು, ಖಾಲಿ ಜಾಗಗಳು, ರಸ್ತೆ ಬದಿ, ಮೈದಾನಗಳು ಹಾಗೂ ಸರಕಾರಿ ಶಾಲಾ-ಕಾಲೇಜುಗಳ ಕಟ್ಟಡಗಳು, ಕಚೇರಿಗಳು ಸೇರಿ, ಮರಗಳು ಬಿದ್ದಿರುವ ಜಾಗಗಳನ್ನು ಗುರುತಿಸಿ ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಭೈರಸಂದ್ರ ವಾರ್ಡ್ ಪಾಲಿಕೆ ಸದಸ್ಯ ಎನ್.ನಾಗರಾಜು ಮಾತನಾಡಿ, ಬಾಂಧವ್ಯ ಸಂಸ್ಥೆ ವತಿಯಿಂದ 6ತಿಂಗಳ ಕಾಲ ಗಿಡಗಳನ್ನು ಪೋಷಣೆ ಮಾಡಲಾಗುವುದು. ನಂತರ ಸಂಬಂಧಪಟ್ಟವರಿಗೆ ವರ್ಗಾಯಿಸಲಾಗುವುದು ಎಂದ ಅವರು ಶಾಸಕಿ ಸೌಮ್ಯರೆಡ್ಡಿ ಉತ್ತಮ ಕೆಲಸಗಳನ್ನು ಮಾಡಲು ಮುಂದಾಗಿದ್ದಾರೆ. ಕ್ಷೇತ್ರದ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಅಧಿಕಾರಿಗಳು, ಸರಕಾರಿ ಶಾಲೆ ಮಕ್ಕಳು ಹಾೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News