×
Ad

ಡಿಸಿಬಿ ಬ್ಯಾಂಕ್‌ಗಳಲ್ಲಿ 3,118 ಕೋಟಿ ಜಮಾವಣೆ ಪ್ರಕರಣ: ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ

Update: 2018-06-25 22:02 IST

ಬೆಂಗಳೂರು, ಜೂ.25: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸಿದ ನಂತರದ 5 ದಿನಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಅಹ್ಮದಾಬಾದ್‌ನ ಜಿಲ್ಲಾ ಸಹಕಾರಿ ಬ್ಯಾಂಕ್ ಸೇರಿದಂತೆ, ಬಿಜೆಪಿ ಜೊತೆ ಸಂಬಂಧವಿರುವ 11 ಡಿಸಿಬಿ ಬ್ಯಾಂಕ್‌ಗಳಲ್ಲಿ 3,118 ಕೋಟಿ ರೂ. ಮೊತ್ತದ ಹಳೆ ನೋಟುಗಳು ಜಮಾವಣೆಯಾಗಿರುವುದನ್ನು ಖಂಡಿಸಿ, ಯುವ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಯುವ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತರು ಮೌರ್ಯ ವೃತ್ತದಲ್ಲಿ ಜಮಾಯಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಗರಿಷ್ಠ ಮುಖಬೆಲೆಯ ನೋಟು ಅಮಾನ್ಯಗೊಳಿಸಿದ 5 ದಿನಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಅಹ್ಮದಾಬಾದ್‌ನ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ 745 ಕೋಟಿ ರೂ. ಜಮೆಯಾಗಿದೆ. ಜೊತೆಗೆ, ಬಿಜೆಪಿ ಜೊತೆ ಸಂಬಂಧವಿರುವ 11 ಡಿಸಿಬಿ ಬ್ಯಾಂಕ್‌ಗಳಲ್ಲಿ 3,118 ಕೋಟಿ ರೂ. ಮೊತ್ತದ ಹಳೆ ನೋಟುಗಳು ಜಮಾವಣೆಯಾಗಿದೆ ಎಂಬುದು ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ ಎಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವೂ ಘೋಷಣೆ ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್‌ನ ಬಸನಗೌಡ ಬಾದರ್ಲಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಅಹ್ಮದಾಬಾದ್‌ನ ಜಿಲ್ಲಾ ಸಹಕಾರಿ ಬ್ಯಾಂಕ್, ಸೂರತ್ ಜಿಲ್ಲಾ ಸಹಕಾರಿ ಬ್ಯಾಂಕ್ ಸೇರಿದಂತೆ ಇನ್ನಿತರ 9 ಬ್ಯಾಂಕ್‌ಗಳಲ್ಲಿ ಅತಿಹೆಚ್ಚು ಹಳೆ ನೋಟುಗಳು ಜಮೆಯಾಗಿವೆ. ಬಿಜೆಪಿಯವರು ಅಕ್ರಮವಾಗಿ ಸಂಗ್ರಹಿಸಿದ್ದ ಹಳೇ ನೋಟುಗಳನ್ನು ಬದಲಿಸುವ ಸ್ವಾರ್ಥದಿಂದ ಜನ ಸಾಮಾನ್ಯರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಮೂರ್ಖರನ್ನಾಗಿಸಿದ್ದಾರೆ ಎಂದು ದೂರಿದರು.

ನೋಟು ನಿಷೇಧದಿಂದ ಭಾರತೀಯ ಸಾಮಾನ್ಯ ಪ್ರಜೆಗಳ ಜೀವನದ ಮೇಲೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಕ್ರಮವಾಗಿ ಹಳೆ ನೋಟುಗಳನ್ನು ಬದಲಾವಣೆ ಮಾಡಿರುವ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿ ಸಚಿವರು, ಶಾಸಕರು, ಸಂಸದರ ವಿರುದ್ದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News