×
Ad

ಜಮೀನು ಕಳೆದುಕೊಂಡ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಜಾಗ ತೋರಿಸಿ: ಹೈಕೋರ್ಟ್ ಆದೇಶ

Update: 2018-06-25 22:09 IST

ಬೆಂಗಳೂರು, ಜೂ.25: ಬೆಂಗಳೂರಿನ ಯಲಹಂಕ ಬಳಿ ಇರುವ ಸಿಂಗಾಪುರ ಗ್ರಾಮದಲ್ಲಿ ಖಾಸಗಿ ಜಮೀನನ್ನು ಕಬಳಿಸಿ ಸ್ಮಶಾನದ ಜಾಗವನ್ನಾಗಿ ಪರಿವರ್ತಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಜೂ.26ರಂದು ಯಾವ ಜಾಗದಲ್ಲಿ ಪರ್ಯಾಯ ಜಮೀನನ್ನು ನೀಡಲಿದೆ ಎಂಬುದನ್ನು ಜಮೀನು ಕಳೆದುಕೊಂಡಿರುವ ಮಾಲಕನನ್ನು ಖುದ್ದಾಗಿ ಕರೆದುಕೊಂಡು ಹೋಗಿ ತೋರಿಸಬೇಕೆಂದು ಹೈಕೋರ್ಟ್ ಜಿಲ್ಲಾಧಿಕಾರಿ ದಯಾನಂದ್‌ಗೆ ಆದೇಶಿಸಿದೆ.

ಎಸ್.ವಿ.ಯೋಗೆಶ್ವರ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನ್ಯಾಯಮೂರ್ತಿ ರಾಘವೇಂದ್ರ ಎಸ್. ಚೌಹಾಣ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಕೆ.ಎನ್.ಫಣೀಂದ್ರ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ನಮ್ಮ ಅರ್ಜಿದಾರರಾದ ಎಸ್.ವಿ.ಯೋಗೆಶ್ವರ್ ಅವರ 24.09 ಜಮೀನನ್ನು ಕಬಳಿಸಿ ಸ್ಮಶಾನವನ್ನಾಗಿ ಪರಿವರ್ತಿಸಿದ್ದಾರೆ. ಕೋರ್ಟ್ ಕೂಡ ಅರ್ಜಿದಾರನಿಗೆ ಪರ್ಯಾಯ ಜಮೀನನ್ನು ಒದಗಿಸಿಕೊಡಬೇಕೆಂದು ಆದೇಶಿಸಿದರೂ ಬಿಬಿಎಂಪಿ ಸೂಕ್ತ ಜಾಗವನ್ನು ಒದಗಿಸಿಕೊಟ್ಟಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ಜಿಲ್ಲಾಧಿಕಾರಿ ದಯಾನಂದ್‌ಗೆ ಜೂ.26ರಂದು ಅರ್ಜಿದಾರ ಎಸ್.ವಿ.ಯೋಗೆಶ್ವರ ಅವರಿಗೆ ನೀವು ಗುರುತಿಸಿರುವ ಜಾಗವನ್ನು ತೋರಿಸಬೇಕೆಂದು ಆದೇಶಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಪ್ರಮಾಣಪತ್ರದಲ್ಲಿ ಲೋಪ, ಕೋರ್ಟ್ ಅಸಮಾಧಾನ: ಜಿಲ್ಲಾಧಿಕಾರಿ ದಯಾನಂದ್ ಪ್ರಕರಣದ ಸಂಬಂಧ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಲೋಪಗಳಿದ್ದು, ನಿಖರ ಮಾಹಿತಿ ಇಲ್ಲವೆಂಬ ಕಾರಣಕ್ಕೆ ಆಕ್ರೋಶಗೊಂಡ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಏನಿದು? ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವ ರೀತಿ ಇದೇ ಏನು? ಎಷ್ಟು ವರ್ಷದಿಂದ ಸರಕಾರಿ ಸೇವೆಯಲ್ಲಿದ್ದೀರಿ? ಯಾವ ಬ್ಯಾಚ್? ಕೋರ್ಟ್‌ಗಳಿಗೆ ಹೇಗೆ ಪ್ರಮಾಣಪತ್ರ ಸಲ್ಲಿಸಬೇಕೆಂಬುದು ತಿಳಿದಿಲ್ಲವೆ? ಕೋರ್ಟ್ ಆದೇಶ ಪಾಲಿಸಲು ವಿಫಲರಾಗಿದ್ದೀರಿ. ಈಗ ನೋಡಿದರೆ ಅರೆಬರೆ ಮಾಹಿತಿ ಸಲ್ಲಿಸಿದ್ದೀರಾ? ಇದನ್ನೆಲ್ಲ ನ್ಯಾಯಾಲಯ ಸಹಿಸಬೇಕೆ ಎಂದು ತರಾಟೆಗೆ ತೆಗೆದುಕೊಂಡರು.

ಉಗ್ರರ ದಾಳಿಯಾದರೆ ಸುಮ್ಮನಿರುತ್ತೀರಾ: ರಾಜ್ಯ ವಿಧಾನಸಭಾ ಚುನಾವಣೆಯ ಕಾರಣದಿಂದಾಗಿ ಕೋರ್ಟ್ ಆದೇಶ ಪಾಲನೆ ವಿಳಂಬವಾಯಿತು ಎಂದು ಜಿಲ್ಲಾಧಿಕಾರಿ ನೀಡಿದ ಹೇಳಿಕೆಯನ್ನೊಪ್ಪದ ನ್ಯಾಯಪೀಠ, ಚುನಾವಣೆ ಎಂದ ಮಾತ್ರಕ್ಕೆ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುವುದಿಲ್ಲವೆ? ಬೆಂಗಳೂರಿಗೆ ಉಗ್ರರು ದಾಳಿ ಮಾಡಿದರೆ, ನಿಮ್ಮ ಕೆಲಸ ಮಾಡದೆ ಕೈಕಟ್ಟಿ ಕುಳಿತುಕೊಳ್ಳುತ್ತೀರಾ? ಎಂದು ಪ್ರಶ್ನಿಸಿತು.

ಚುನಾವಣೆ ಎಂದು ಅಧಿಕಾರಿಗಳು ಊಟ, ತಿಂಡಿ, ನಿದ್ರೆ ಮಾಡುವುದಿಲ್ಲವೆ? ಮದುವೆ ಇನ್ನಿತರ ಶುಭಕಾರ್ಯಗಳಿಗೆ ಹೋಗುವುದಿಲ್ಲವೇ? ಸಿಎಂ ಆದೇಶಗಳನ್ನು ಪಾಲನೆ ಮಾಡಿಲ್ಲವೇ? ಜನರು ಅಧಿಕಾರಿಗಳ ಬಳಿ ಬಂದು ಬೇಡಿಕೊಳ್ಳಬೇಕೆ? ನೀವು ಏನು ಮಾಡುತ್ತಿರೋ ಗೊತ್ತಿಲ್ಲ. ಕೋರ್ಟ್ ಆದೇಶಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.

ನುಣುಚಿಕೊಳ್ಳಲು ನೂರೆಂಟು ನೆಪ: ಅಧಿಕಾರಿಗಳಿಗೆ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ನೂರೆಂಟು ನೆಪಗಳು ಸಿಗುತ್ತವೆ. ನಿವೃತ್ತ ಅಧಿಕಾರಿಯೊಬ್ಬರು ಸಾವಿರದೊಂದು ನೆಪಗಳ ಕುರಿತು ಪುಸ್ತಕ ಬರೆದಿದ್ದಾರೆ. ಅದರಲ್ಲಿ ಇನ್ನೇನು ನೆಪಗಳು ಇವೆ ಎಂದು ಒಮ್ಮೆ ನೋಡಿಕೊಳ್ಳಿ ಎಂದು ನ್ಯಾಯಪೀಠ ವ್ಯಂಗ್ಯವಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News