ಮೊರಾಕ್ಕೊ ವಿರುದ್ಧ ಡ್ರಾ ಸಾಧಿಸಿದ ಸ್ಪೇನ್ ಅಗ್ರಸ್ಥಾನಿ

Update: 2018-06-26 02:14 GMT
ಚಿತ್ರ ಕೃಪೆ : REUTERS

ಕಲಿನಿಂಗಾರ್ಡ್,ಜೂ.26: ಬದಲಿ ಆಟಗಾರ ಲಾಗೋ ಅಸ್ಪಾಸ್ ಕೊನೆಕ್ಷಣದಲ್ಲಿ ಹೊಡೆದ ಗೋಲಿನ ನೆರವಿನಿಂದ ಸ್ಪೇನ್ ತಂಡ ಮೊರಾಕ್ಕೊ ವಿರುದ್ಧ 2-2 ಗೋಲುಗಳ ಡ್ರಾ ಸಾಧಿಸಿ, ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ 16ರ ಘಟ್ಟಕ್ಕೆ ಮುನ್ನಡೆಯಿತು.

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಜಯದತ್ತ ಸಾಗಿದ್ದ ಮೊರಾಕ್ಕೊ ತಂಡಕ್ಕೆ ಲಾಗೋ ಅಸ್ಪಾಸ್ ಖಳನಾಯಕರಾದರು. 81ನೇ ನಿಮಿಷಲ್ಲಿ ಮೊರಾಕ್ಕೊ ಆಟಗಾರ ಯೂಸಫ್ ಎನ್ ನೆಸಿರಿ ಅವರು ಹೆಡ್ಡರ್ ಮೂಲಕ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟಿದ್ದರು. ಅಸ್ಪಾಸ್ ಹೊಡೆತದ ಬಗ್ಗೆ ವೀಡಿಯೊ ನೆರವಿನ ರೆಫ್ರಿ ಸುಧೀರ್ಘ ಪರಾಮರ್ಶೆ ನಡೆಸಿ ಗೋಲು ಘೋಷಿಸಿದರು.

ಇದುವರೆಗೆ ಅಗ್ರಸ್ಥಾನಿಯಾಗಿದ್ದ ಯುರೋಪಿಯನ್ ಚಾಂಪಿಯನ್ ಪೋರ್ಚ್‍ಗಲ್ ತಂಡ ಇರಾನ್ ವಿರುದ್ಧದ ಪಂದ್ಯದಲ್ಲಿ 1-1 ಸಮಬಲ ಸಾಧಿಸಿದ್ದರಿಂದ ಅಗ್ರಸ್ಥಾನ ಸ್ಪೇನ್ ಪಾಲಾಯಿತು.

ಮೊದಲ ಎರಡು ಪಂದ್ಯಗಳಲ್ಲಿ 1-0 ಗೋಲುಗಳ ಸೋಲಿನೊಂದಿಗೆ ಟೂರ್ನಿಯಿಂದ ನಿರ್ಗಮಿಸಿದ ಮೊದಲ ತಂಡ ಎನಿಸಿಕೊಂಡಿದ್ದ ಮೊರಾಕ್ಕೊ, ತನ್ನ ಕೊನೆಯ ಪಂದ್ಯವನ್ನು ಅದ್ಭುತವಾಗಿ ಆರಂಭಿಸಿತು. ಸ್ಪೇನ್‍ಗೆ ಸೋಲುಣಿಸಿ ಸ್ವದೇಶಕ್ಕೆ ಮರಳಬೇಕೆಂಬ ಛಲದಿಂದ ಮೈದಾನಕ್ಕಿಳಿದ ಮೊರಾಕ್ಕೊ ತಂಡಕ್ಕೆ ಖಾಲಿದ್ ಬುತಿಯಾದ್ 14ನೇ ನಿಮಿಷದಲ್ಲೇ ಮುನ್ನಡೆ ದೊರಕಿಸಿಕೊಟ್ಟರು.

ಸೆರ್ಗಿಯೊ ರೊಮಾಸ್ ಅವರಿಂದ ಚೆಂಡು ಕಸಿದುಕೊಂಡ ಮಿಡ್‍ಫೀಲ್ಡ್ ಆಟಗಾರ ಬುತಿಯಾದ್ ಏಕಾಂಗಿಯಾಗಿ ಡೇವಿಡ್ ಡೆ ಗೆಯಾ ಕಾಲಿನ ನಡುವಿನಲ್ಲಿ ಚೆಂಡನ್ನು ಒದ್ದು ವಿಶ್ವಕಪ್‍ನಲ್ಲಿ ಮೊರಾಕ್ಕೊ ತಂಡದ ಮೊದಲ ಗೋಲು ಬಾರಿಸಿದರು. ಈ ಆಘಾತದಿಂದ ಚೇತರಿಸಿಕೊಂಡ 2010ನೇ ವರ್ಷದ ಚಾಂಪಿಯನ್ನರು ಐದು ನಿಮಿಷ ಬಳಿಕ ಸಮಬಲ ಸಾಧಿಸಿದರು.

ಪ್ರಿಕ್ವಾರ್ಟರ್ ಫೈನಲ್‍ನಲ್ಲಿ ಸ್ಪೇನ್ ತಂಡ ರಷ್ಯಾವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News