ಬೈಕ್ ಉತ್ಪಾದನೆ ಅಮೆರಿಕದಿಂದ ಹೊರಕ್ಕೆ: ಹ್ಯಾರ್ಲೆ-ಡೇವಿಡ್‌ಸನ್

Update: 2018-06-26 16:23 GMT

ವಾಶಿಂಗ್ಟನ್, ಜೂ. 26: ಐರೋಪ್ಯ ಒಕ್ಕೂಟಕ್ಕೆ ಕಳುಹಿಸಲಾಗುವ ಮೋಟರ್‌ಸೈಕಲ್‌ಗಳ ಉತ್ಪಾದನೆಯನ್ನು ಅಮೆರಿಕದಿಂದ ಹೊರಗೆ ಸ್ಥಳಾಂತರಿಸುವುದಾಗಿ ಹ್ಯಾರ್ಲೆ-ಡೇವಿಡ್‌ಸನ್ ಇಂಕ್ ಸೋಮವಾರ ಹೇಳಿದೆ. ಐರೋಪ್ಯ ಒಕ್ಕೂಟದ ಪ್ರತೀಕಾರಾತ್ಮಕ ತೆರಿಗೆಗಳಿಂದಾಗಿ ಕಂಪೆನಿಗೆ ವರ್ಷಕ್ಕೆ 100 ಮಿಲಿಯ ಡಾಲರ್ (683 ಕೋಟಿ ರೂಪಾಯಿ) ಹೊರೆ ಬೀಳುತ್ತದೆ ಎಂದು ಅದು ಅಂದಾಜಿಸಿದೆ.

 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ತಿಂಗಳ ಆದಿ ಭಾಗದಲ್ಲಿ ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಲಾಗುವ ಉಕ್ಕಿನ ಮೇಲೆ ಆಮದು ಸುಂಕವನ್ನು ವಿಧಿಸಿದ್ದರು. ಅಮೆರಿಕದ ಉದ್ಯೋಗಗಳನ್ನು ರಕ್ಷಿಸುವ ಉದ್ದೇಶದಿಂದ ಅವರು ಆ ರೀತಿ ಮಾಡಿದ್ದರು. ಈಗ ಆ ಕ್ರಮದ ಅನಿರೀಕ್ಷಿತ ಪರಿಣಾಮವೆಂಬಂತೆ, ಅಮೆರಿಕದ ಪ್ರಸಿದ್ಧ ಮೋಟರ್‌ಸೈಕಲ್ ಉತ್ಪಾದಕ ಕಂಪೆನಿ ತನ್ನ ಉತ್ಪಾದನಾ ಸ್ಥಳವನ್ನೇ ಬದಲಾಯಿಸಿದೆ.

ಅಮೆರಿಕದ ಕ್ರಮಕ್ಕೆ ಪ್ರತಿಯಾಗಿ ಐರೋಪ್ಯ ಒಕ್ಕೂಟವು ಜೂನ್ 22ರಿಂದ ಜಾರಿಗೆ ಬರುವಂತೆ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹಲವಾರು ವಸ್ತುಗಳ ಮೇಲೆ 25 ಶೇಕಡ ಆಮದು ಸುಂಕ ವಿಧಿಸಿದೆ. ಇದರ ವ್ಯಾಪ್ತಿಯಲ್ಲಿ ಹ್ಯಾರ್ಲೆ-ಡೇವಿಡ್‌ಸನ್ ಮೋಟರ್‌ಸೈಕಲ್‌ಗಳೂ ಬರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News