ಉನ್ನತ ಶಿಕ್ಷಣ: ಕೇಂದ್ರೀಕರಣ, ಖಾಸಗೀಕರಣ ಮತ್ತು ಮತೀಯವಾದೀಕರಣ

Update: 2018-06-28 18:27 GMT

ಭಾಗ 1

 ಮೋದಿ ಸರಕಾರವು ಕೇಂದ್ರ ವಿಶ್ವವಿದ್ಯಾನಿಲಯಗಳಲ್ಲಿ ಹಣವನ್ನು ಹೂಡುವುದನ್ನು ಹಿಂಪಡೆಯುವ ಮೂಲಕ, ಹಣಕಾಸಿನ ಅನುದಾನವನ್ನು ಕಡಿತಗೊಳಿಸುವುದರ ಮೂಲಕ, ಆರ್ಥಿಕ ನೆರವನ್ನು ರದ್ದುಗೊಳಿಸುವುದರ ಮೂಲಕ ಸರಕಾರಿ ಸಂಸ್ಥೆಗಳನ್ನು ದುರ್ಬಲಗೊಳಿಸುವ ಕಾರ್ಯತಂತ್ರವನ್ನು ಹೆಣೆದಿದೆ. ಮತ್ತೊಂದು ಕಡೆ ಮುಕ್ತವಾಗಿ, ಲಿಬರಲ್ ಆಗಿ ತನ್ನ ದೇಸಿಯತೆಯ ಸೊಗಡನ್ನು ಉಳಿಸಿಕೊಂಡು ವೈಜ್ಞಾನಿಕವಾದ, ಅನ್ವೇಷಣೆ ಮಾರ್ಗದ ಆಧುನಿಕ ಶಿಕ್ಷಣಕೇಂದ್ರಗಳಾಗಬೇಕಿದ್ದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತನ್ನ ವಿವಿಧ ಕರಾಳ ಶಾಸನಗಳ ಮೂಲಕ ಅವುಗಳ ಸ್ವಾಯತ್ತೆೆಯನ್ನು ಕತ್ತರಿಸುತ್ತಿದೆ

 ಉನ್ನತ ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ ತರುತ್ತೇವೆ ಎಂದು ಹೊರಟ ಮೋದಿ-ಆರೆಸ್ಸೆಸ್ ಸರಕಾರ 27, ಜೂನ್ 2018ರಂದು ‘ಯುಜಿಸಿ’ (ವಿಶ್ವ ವಿದ್ಯಾಲಯ ಧನಸಹಾಯ ಆಯೋಗ) ಬದಲಿಸಿ ಅದರ ಜಾಗದಲ್ಲಿ ‘ಭಾರತೀಯ ಉನ್ನತ ಶಿಕ್ಷಣ ಆಯೋಗ’ವನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದೆ. ಈ ಮೂಲಕ ತಪಾಸಣೆ ರಾಜ್ ಅನ್ನು ಕೊನೆಗೊಳಿಸುತ್ತೇವೆ ಎಂದೂ ಹೇಳಿದೆ. ಕೇವಲ ಶೈಕ್ಷಣಿಕ ವಿಷಯಗಳಿಗೆ ಮಾತ್ರ ಈ ಉನ್ನತ ಶಿಕ್ಷಣ ಆಯೋಗದ ಜವಾಬ್ದಾರಿಯಾಗಿರುತ್ತದೆ. ಇದರ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ, ಮುಚ್ಚುವಂತಹ ಆಡಳಿತಾತ್ಮಕ ನಿರ್ಧಾರಗಳನ್ನು ಸಹ ಈ ಆಯೋಗಕ್ಕೆ ವಹಿಸಲಾಗಿದೆ. ಇನ್ನುಳಿದಂತೆ ಧನ ಸಹಾಯದ ಎಲ್ಲಾ ಜವಾಬ್ದಾರಿಯು ಮಾನವ ಸಂಪನ್ಮೂಲ ಇಲಾಖೆಯ ವ್ಯಾಪ್ತಿಗೆ ಬರಲಿದೆ ಎಂದು ಪ್ರಕಟಿಸಿದೆ. ಆದರೆ ಈ ಹಿಂದೆ ಏಕಗವಾಕ್ಷಿ ನಿಯಂತ್ರಣದ ಅಡಿಯಲ್ಲಿ ನಿರ್ಧರಿಸಿದಂತೆ ‘ಆಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್’ (ಎಐಸಿಟಿಇ) ಮತ್ತು ‘ರಾಷ್ಟ್ರೀಯ ಶಿಕ್ಷಕರ ಪರಿಷತ್’ ಅನ್ನು ಈ ಭಾರತೀಯ ಉನ್ನತ ಶಿಕ್ಷಣ ಆಯೋಗದಲ್ಲಿ ವಿಲೀನಗೊಳಿಸದೆ ಪ್ರತ್ಯೇಕವಾಗಿ ಉಳಿಸಿಕೊಳ್ಳಲಾಗಿದೆ. ಯುಜಿಸಿ ಆ್ಯಕ್ಟ್, 1956 ಅನ್ನು ಹಿಂಪಡೆಯುವ ಕರಡನ್ನು ಬಹಿರಂಗ ಚರ್ಚೆಗೆ ಬಿಡಲಾಗಿದೆ. ಶಿಕ್ಷಣ ತಜ್ಞರು, ಸಾರ್ವಜನಿಕರು ಜುಲೈ 7ರ ಒಳಗೆ ತಮ್ಮ ಅಭಿಪ್ರಾಯವನ್ನು ಸಲ್ಲಿಸಬೇಕೆಂದು ಅಂತಿಮ ಗಡುವು ನೀಡಿದೆ. ಉನ್ನತ ಶಿಕ್ಷಣದಲ್ಲಿ ಮತ್ತಷ್ಟು ಸ್ವಾಯತ್ತತೆಯನ್ನು ತರಲು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ತಿಳಿಸಿದೆ.

ಇದು ಅನಿರೀಕ್ಷಿತವಾಗಿರಲಿಲ್ಲ. ಕೇಂದ್ರದಲ್ಲಿ ಮೋದಿ-ಆರೆಸ್ಸಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಉನ್ನತ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣಕ್ಕೆ ಉತ್ತೇಜನ ದೊರಕಿದೆ. ನಾಲ್ಕು ವರ್ಷಗಳ ಹಿಂದೆಯೇ ಉನ್ನತ ಶಿಕ್ಷಣದ ಬಲವರ್ಧನೆಗಾಗಿ 10 ಸರಕಾರಿ ಸಂಸ್ಥೆಗಳು ಮತ್ತು 10 ಖಾಸಗಿ ಸಂಸ್ಥೆಗಳನ್ನು ಗುರುತಿಸಬೇಕೆಂದು ಸೂಚಿಸಿದೆ. ಅಂದರೆ ಸರಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಹ ತನ್ನ ಸಾರ್ವಜನಿಕ ಶಿಕ್ಷಣ ಇಲಾಖೆಯ ಸುಪರ್ದಿಯಲ್ಲಿ ಅಭಿವೃದ್ಧಿಗೆ ಮುಂದಾಗಿರುವುದು ವಿಪರ್ಯಾಸವೇ ಸರಿ. ಸಾರ್ವಜನಿಕ ಶಿಕ್ಷಣದ ಮೂಲಕ ಲಭ್ಯವಿದ್ದ ಉನ್ನತ ಶಿಕ್ಷಣವನ್ನು ಕ್ರಮೇಣ ಖಾಸಗೀಕರಣಗೊಳಿಸುತ್ತಿದೆ. ಮೂಲಭೂತ ಹಕ್ಕಾದ ಶಿಕ್ಷಣವನ್ನು ಕೊಡುವ ತನ್ನ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸುತ್ತಿದೆ. ಅದರ ಮೊದಲ ಹಂತವಾಗಿ ಉನ್ನತ ಶಿಕ್ಷಣಕ್ಕಾಗಿ ಮೀಸಲಿಟ್ಟ ಸುಮಾರು 5000 ಕೋಟಿ ರೂ. ಗಳನ್ನು ಮೋದಿ ಸರಕಾರ ರದ್ದುಗೊಳಿಸಿದೆ. ಮೋದಿ ಸರಕಾರವು ಕೇಂದ್ರ ವಿಶ್ವವಿದ್ಯಾನಿಲಯಗಳಲ್ಲಿ ಹಣವನ್ನು ಹೂಡುವುದನ್ನು ಹಿಂಪಡೆಯುವ ಮೂಲಕ, ಹಣಕಾಸಿನ ಅನುದಾನವನ್ನು ಕಡಿತಗೊಳಿಸುವುದರ ಮೂಲಕ, ಆರ್ಥಿಕ ನೆರವನ್ನು ರದ್ದುಗೊಳಿಸುವುದರ ಮೂಲಕ ಸರಕಾರಿ ಸಂಸ್ಥೆಗಳನ್ನು ದುರ್ಬಲಗೊಳಿಸುವ ಕಾರ್ಯತಂತ್ರವನ್ನು ಹೆಣೆದಿದೆ. ಮತ್ತೊಂದು ಕಡೆ ಮುಕ್ತವಾಗಿ, ಲಿಬರಲ್ ಆಗಿ ತನ್ನ ದೇಸಿಯತೆಯ ಸೊಗಡನ್ನು ಉಳಿಸಿಕೊಂಡು ವೈಜ್ಞಾನಿಕವಾದ, ಅನ್ವೇಷಣೆ ಮಾರ್ಗದ ಆಧುನಿಕ ಶಿಕ್ಷಣಕೇಂದ್ರಗಳಾಗಬೇಕಿದ್ದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತನ್ನ ವಿವಿಧ ಕರಾಳ ಶಾಸನಗಳ ಮೂಲಕ ಅವುಗಳ ಸ್ವಾಯತ್ತತೆಯನ್ನು ಕತ್ತರಿಸುತ್ತಿದೆ

  ಸಾರ್ವಜನಿಕ ಉದ್ಯಮಗಳು, ಆರೋಗ್ಯ, ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಉದ್ದೇಶದೊಂದಿಗೆೆ ಅಧಿಕಾರವನ್ನು ವಹಿಸಿಕೊಂಡ ಮೋದಿ ಸಾರ್ವಜನಿಕ ನೀತಿಗಳ ಗುರುತ್ವ ಕೇಂದ್ರವನ್ನು ಇಂದು ಸಂಪೂರ್ಣವಾಗಿ ಕದಲಿಸಿದ್ದಾರೆ. ತೊಂಬತ್ತರ ದಶಕದ ಉದಾರೀಕರಣ, ಖಾಸಗೀಕರಣ, ಜಾಗತೀಕರಣ (ಎಲ್‌ಪಿಜಿ)ಕ್ಕೆ ತೆರೆದುಕೊಂಡ ಆನಂತರ ಇಂದು ಇಂಡಿಯಾದ ಶಿಕ್ಷಣ ನೀತಿ ಒಂದು ಉದ್ಯಮವಾಗಿರುವುದು ಮೋದಿಯಂತಹ ಖಾಸಗಿ ಬಂಡವಾಳಶಾಹಿಗಳ ವಕ್ತಾರರಿಗೆ ಮುಂದಿನ ಹಾದಿ ಸುಗಮಗೊಳಿಸಿದಂತಿದೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಅನುದಾನವನ್ನು ಹಂತ ಹಂತವಾಗಿ ಕಡಿತಗೊಳಿಸುತ್ತಲೇ ಇದೆ. ಮೋದಿ ಸರಕಾರವು ಶಿಕ್ಷಣಕ್ಕಾಗಿ 2014ರಲ್ಲಿ ಕೇಂದ್ರ ಬಜೆಟ್‌ನ ಶೇ. 4.77 ಪ್ರಮಾಣದಲ್ಲಿ ಜಿಡಿಪಿಯ 0.7 ಪ್ರಮಾಣದಲ್ಲಿ ಮೊತ್ತವನ್ನು ಮೀಸಲಿಟ್ಟಿದೆ. 2015ರಲ್ಲಿ ಕೇಂದ್ರ ಬಜೆಟ್‌ನ ಶೇ. 4.61 ಪ್ರಮಾಣದಲ್ಲಿ ಜಿಡಿಪಿಯ 0.67 ಪ್ರಮಾಣದಲ್ಲಿ, 2016ರಲ್ಲಿ ಕೇಂದ್ರ ಬಜೆಟ್‌ನ ಶೇ. 3.89 ಪ್ರಮಾಣದಲ್ಲಿ ಜಿಡಿಪಿಯ 0.5 ಪ್ರಮಾಣದಲ್ಲಿ, 2017ರಲ್ಲಿ ಕೇಂದ್ರ ಬಜೆಟ್‌ನ ಶೇ. 3.66 ಪ್ರಮಾಣದಲ್ಲಿ ಜಿಡಿಪಿಯ 0.48 ಪ್ರಮಾಣದಲ್ಲಿ, 2018ರಲ್ಲಿ ಕೇಂದ್ರ ಬಜೆಟ್‌ನ ಶೇ. 3.17 ಪ್ರಮಾಣದಲ್ಲಿ ಜಿಡಿಪಿಯ 0.47 ಪ್ರಮಾಣದಲ್ಲಿ, 2018-19ರಲ್ಲಿ ಕೇಂದ್ರ ಬಜೆಟ್‌ನ ಶೇ. 3.48 ಪ್ರಮಾಣದಲ್ಲಿ ಜಿಡಿಪಿಯ 0.45 ಪ್ರಮಾಣದಲ್ಲಿ ಮೊತ್ತವನ್ನು ಮೀಸಲಿಟ್ಟಿದೆ.

 ಮೋದಿಯ ಈ ಖಾಸಗೀಕರಣದ ನೀತಿಗೆ ಪೂರಕವಾಗಿ ಇಂದಿನ ಉನ್ನತ ಶಿಕ್ಷಣವೇ ಒಂದು ಸರಕಾಗಿ ಪ್ರಾಧ್ಯಾಪಕರು ಮಾರಾಟಗಾರರಾಗಿ ವಿದ್ಯಾರ್ಥಿ ಗಳು ಗ್ರಾಹಕರಾಗಿ ಪರಿವರ್ತಿತರಾಗಿದ್ದಾರೆ. ನವಉದಾರೀಕರಣದ ಇಂಡಿಯಾದಲ್ಲಿ ಆದರ್ಶ ಶಿಕ್ಷಣ ಎನ್ನುವುದು ಲಾಭ ತಂದುಕೊಡುವ ವ್ಯಾಪಾರವಾಗಿರುವಾಗ ಇಲ್ಲಿ ಸರಕಾರದ ಪಾತ್ರ ಸಂಪೂರ್ಣವಾಗಿ ಕುಂಠಿತಗೊಂಡಿದೆ. ಜಾಗತೀಕರಣದ ಕಾಲದಲ್ಲಿ ಪರಿಣತಿ ಎನ್ನುವ ಮರೆ ಮೋಸದ ಮೂಲಕ ಜಾಗತಿಕ ಮಾರುಕಟ್ಟೆಯೊಂದಿಗೆ ನೇರ ಸಂಪರ್ಕ ಕಲ್ಪಿಸುತ್ತೇವೆ ಎಂದು ಖಾಸಗಿ ಬಂಡವಾಳಶಾಹಿಗಳು ಉನ್ನತ ಶಿಕ್ಷಣದಲ್ಲಿ ಪ್ರವೇಶಿಸುತ್ತಿದ್ದಾರೆ. ಈಗಿನ ಸರಕಾರದ ಶಿಕ್ಷಣ ನೀತಿಗಳೂ ಈ ಬಂಡವಾಳಶಾಹಿಗಳಿಗೆ ಅನುಕೂಲಕರವಾಗಿವೆ. ಒಮ್ಮೆ ಶಿಕ್ಷಣವನ್ನು ವಶಪಡಿಸಿಕೊಂಡ ಆನಂತರ ಮೊದಲು ಈ ಬಂಡವಾಳಶಾಹಿಗಳು ಸಾಮಾಜಿಕ ನ್ಯಾಯದ ಎಲ್ಲಾ ಆಶಯಗಳನ್ನು ನಾಶ ಮಾಡುತ್ತಾರೆ. ಇಲ್ಲಿ ಶಿಕ್ಷಣದ ಖಾಸಗೀಕರಣದಿಂದ ವ್ಯಾಸಂಗವು ದುಬಾರಿಯಾಗುವುದು ಮಾತ್ರವಲ್ಲ ಇಲ್ಲಿನ ಬಹುಸಂಸ್ಕೃತಿ, ಬಹುತ್ವವು ತನ್ನ ನೆಲೆ ಕಳೆದುಕೊಳ್ಳತ್ತದೆ. ಸಂವಿಧಾನದ ಸಮಾನತೆಯ ಆಶಯಗಳು ಮೂಲೆಗುಂಪಾಗುತ್ತವೆ. ಜ್ಞಾನವೇ ಶಕ್ತಿ ಎನ್ನುವ ನೀತಿಯಡಿಯಲ್ಲಿ ಸಮಾಜ ಶಾಸ್ತ್ರಜ್ಞರು, ಇತಿಹಾಸಕಾರರು, ಸಂಶೋಧಕರು, ರಾಜಕೀಯ ಶಾಸ್ತ್ರಜ್ಞರು, ಭಾಷಾಶಾಸ್ತ್ರಜ್ಞರು, ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು ಹೀಗೆ ದೇಶದ ನೈತಿಕತೆಯ, ಜ್ಞಾನದ ಹಕ್ಕುದಾರರು ರೂಪುಗೊಳ್ಳಬೇಕಾದ ಸಂದರ್ಭದಲ್ಲಿ ಈ ಉನ್ನತ ಶಿಕ್ಷಣವನ್ನು ಸರಕಾಗಿಸಿದಾಗ ಕೇವಲ ಮಾರಾಟಗಾರರು ಹೊರಹೊಮ್ಮುತ್ತಾರೆ.

ಇಂಡಿಯಾದ ಇಂದಿನ ಉನ್ನತ ಶಿಕ್ಷಣ ಮತ್ತು ಸರಕಾರದ ನೀತಿಗಳು

19ನೇ ಶತಮಾನದಲ್ಲಿನ ಬ್ರಿಟಿಷ್ ಆಡಳಿತವು ಮದ್ರಾಸ್ (ಚೆನ್ನೈ) ಯೂನಿವರ್ಸಿಟಿ, ಬಾಂಬೆ(ಮುಂಬೈ) ಯೂನಿವರ್ಸಿಟಿ, ಕಲ್ಕತ್ತ (ಕೋಲ್ಕತಾ) ಯೂನಿವರ್ಸಿಟಿಗಳನ್ನು ಸ್ಥಾಪಿಸುವುದರ ಮೂಲಕ ಈ ವಿಶ್ವವಿದ್ಯಾನಿಲಯಗಳ ನೀಳ್ಗತೆಗೆ ನಾಂದಿ ಹಾಡಿತು. ಎಕನಾಮಿಕ್ಸ್ ಆ್ಯಂಡ್ ಪಾಲಿಟಿಕಲ್ ವೀಕ್ಲಿ, (ಜೂನ್ 16, 2018) ಯಲ್ಲಿ ವರದಿಯಾದಂತೆ 2017ರ ಅಂಕಿ ಅಂಶಗಳ ಪ್ರಕಾರ ಇಂಡಿಯಾದಲ್ಲಿ ಸುಮಾರು 850 ವಿಶ್ವವಿದ್ಯಾನಿಲಯಗಳಿವೆ. 38,948 ಉನ್ನತ ಶಿಕ್ಷಣದ ಕಾಲೇಜುಗಳಿವೆ. 31 ಮಿಲಿಯನ್‌ಗೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ ಶೇ.83 ಪ್ರಮಾಣದಲ್ಲಿ ಪದವಿ ವಿದ್ಯಾಭ್ಯಾಸ, ಶೇ. 11 ಪ್ರಮಾಣದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ. ಶೇ. 0.7 ಪ್ರಮಾಣದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 37.1 ಪ್ರಮಾಣ, ವಿಜ್ಞಾನ ವಿಭಾಗದಲ್ಲಿ ಶೇ. 18.64 ಪ್ರಮಾಣ, ವಾಣಿಜ್ಯ ವಿಭಾಗದಲ್ಲಿ ಶೇ. 17.57 ಪ್ರಮಾಣ, ಇಂಜಿನಿಯರಿಂಗ್ / ತಂತ್ರಜ್ಞಾನ ವಿಭಾಗದಲ್ಲಿ ಶೇ. 16 ಪ್ರಮಾಣ, ವೈದ್ಯಕೀಯ ಶೇ. 3.5 ಪ್ರಮಾಣ, ವೃತ್ತಿಪರ ಶಿಕ್ಷಣ ವಿಭಾಗದಲ್ಲಿ ಶೇ. 3.6 ಪ್ರಮಾಣ, ಕಾನೂನು ವಿಭಾಗದಲ್ಲಿ ಶೇ. 1.84 ಪ್ರಮಾಣ, ಕೃಷಿ ವಿಭಾಗದಲ್ಲಿ 0.48 ಪ್ರಮಾಣ, ಪಶು ವೈದ್ಯಕೀಯ ವಿಭಾಗದಲ್ಲಿ 0.14 ಪ್ರಮಾಣದ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ

ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯ ಅಂಕಿಅಂಶಗಳ ಅನುಸಾರ(2016-17) ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪ್ರವೇಶಾತಿಯು ಶೇ. 25.2 ಪ್ರಮಾಣದಲ್ಲಿದೆ. ಅದರಲ್ಲಿ ವಿದ್ಯಾರ್ಥಿಗಳ ಪ್ರಮಾಣ ಶೇ. 26 ಪ್ರಮಾಣದಲ್ಲಿದ್ದರೆ, ವಿದ್ಯಾರ್ಥಿನಿಯರ ಪ್ರಮಾಣ ಶೇ. 24.5 ರಷ್ಟಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪ್ರಮಾಣ ಶೇ. 21 ರಷ್ಟಿದೆ. ಪರಿಶಿಷ್ಟ ಪಂಗಡದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪ್ರಮಾಣ ಶೇ. 15 ರಷ್ಟಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪ್ರಮಾಣ ಶೇ. 4.7ರಷ್ಟಿದೆ. ಯುಜಿಸಿಯ(12.4.2018) ವರದಿಯ ಅನುಸಾರ ಇಂಡಿಯಾದಲ್ಲಿ 47 ಕೇಂದ್ರೀಯ ವಿವಿಗಳಿವೆ, 384 ರಾಜ್ಯ ವಿವಿಗಳಿವೆ, 296 ಖಾಸಗಿ ವಿವಿಗಳಿವೆ, 123 ಡೀಮ್ಡ್ ವಿವಿಗಳಿವೆ. ಆದರೂ ಸಹ ಇಂದಿಗೂ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯಲು, ವ್ಯಾಸಂಗ ಮಾಡಲು ಇರುವ ತೊಡಕುಗಳು, ಅಸಮಾನತೆಗಳು, ವೈರುಧ್ಯಗಳು ನಮ್ಮ ಮುಂದೆ ಬಲು ದೊಡ್ಡ ಸವಾಲನ್ನು ಒಡ್ಡಿವೆ. 

ಖಾಸಗೀಕರಣದ ಆರಂಭದ ದಿನಗಳು

ತೊಂಬತ್ತರ ದಶಕದ ಆರಂಭದ ವರ್ಷಗಳು. ವಿಶ್ವ ಬ್ಯಾಂಕ್ ಅಬಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮ ಸಾಮಾಜಿಕ ಯೋಜನೆಗಳಿಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುತ್ತಿದ್ದ ಕಾಲಘಟ್ಟ. ಶಿಕ್ಷಣ ತಜ್ಞ ಪ್ರೊ.  ವಿಜಯೇಂದ್ರ ಶರ್ಮ ಅವರು ‘ವಿಶ್ವ ಬ್ಯಾಂಕ್ ಉನ್ನತ ಶಿಕ್ಷಣ ಅನುಭವಗಳ ಪಾಠಗಳು’ (1995) ಎನ್ನುವ ತನ್ನ ಡಾಕ್ಯುಮೆಂಟ್‌ನಲ್ಲಿ ‘‘ವಿವಿಗಳು ತಮ್ಮ ಹಣಕಾಸಿನ ವ್ಯವಸ್ಥೆಯನ್ನು ತಾವೇ ಯೋಜಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ.

1995ರಲ್ಲಿ ಉನ್ನತ ಶಿಕ್ಷಣದಲ್ಲಿ ಸುಧಾರಣೆಯ ಕುರಿತಾದ ಸಮಗ್ರ ಪ್ರಸ್ತಾವದಲ್ಲಿ ಖಾಸಗಿ ಸಂಸ್ಥೆಗಳಿಗೆ ಒತ್ತಾಸೆಯಾಗುವಂತಹ, ವರದಾನವಾಗುವಂತಹ ವಾತಾವರಣ ನಿರ್ಮಿಸಬೇಕು, ಶಿಕ್ಷಣದ ವೆಚ್ಚವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಬೇಕು (ಉದಾ: ಶುಲ್ಕ ಹೆಚ್ಚಳವನ್ನು ದುಪ್ಪಟ್ಟುಗೊಳಿಸಬೇಕು), ವಿದ್ಯಾರ್ಥಿಗಳಿಗೆ ಶುಲ್ಕವನ್ನು ಪಾವತಿಸಲು ಸೂಕ್ತ ಸಾಲವನ್ನು ಕೊಡಬೇಕು, ರಾಜ್ಯ ವಿಶ್ವವಿದ್ಯಾನಿಲಯಗಳನ್ನು ಸ್ವಾಯತ್ತಗೊಳಿಸಬೇಕು ಎನ್ನುವ ಶರತ್ತುಗಳನ್ನು ವಿಧಿಸಿತು. ಸರಕಾರವು ವಿಶ್ವಬ್ಯಾಂಕ್‌ನ ಮರ್ಜಿಯಲ್ಲಿತ್ತು’’ ಎಂದು ವಿವರಿಸುತ್ತಾರೆ 80ರ ದಶಕದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಪ್ರಧಾನಿ ರಾಜೀವ್ ಗಾಂಧಿಯವರ ಮಹತ್ವ್ವಾಕಾಂಕ್ಷೆಯಾಗಿದ್ದ ಹೊಸ ಶಿಕ್ಷಣ ನೀತಿ (ಎನ್‌ಇಪಿ 86) ಮತ್ತು ಕಾರ್ಯಸೂಚಿ ಕ್ರಮಗಳು ಮೇ, 1986 ರಂದು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿತು ಮತ್ತು 1992ರಲ್ಲಿ ತಿದ್ದುಪಡಿಗೊಂಡಿತು. ಅದರಲ್ಲಿ ಆರ್ಥಿಕ ವ್ಯವಸ್ಥೆಯ ವಿವಿಧ ದರ್ಜೆಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಶಿಕ್ಷಣ ನೀತಿಯು ರೂಪಿಸುತ್ತದೆ. ಶಿಕ್ಷಣವು ವರ್ತಮಾನ ಮತ್ತು ಭವಿಷ್ಯದ ಹೂಡಿಕೆಯಾಗಿದೆ ಎನ್ನುವುದು ಎನ್‌ಇಪಿ 86ರ ಮುಖ್ಯ ವ್ಯಾಖ್ಯಾನವಾಗಿತ್ತು.

ವಿವಿಧ ಖಾಸಗಿ ಸಂಸ್ಥೆಗಳಿಂದ ಹಣಕಾಸಿನ ಅನುದಾನದ ಸಂಗ್ರಹಣೆ, ಶುಲ್ಕ ಹೆಚ್ಚಳ, ತೆರಿಗೆ ವಿಧಿಸುವುದು ಇನ್ನೂ ಮುಂತಾದವುಗಳ ಮೂಲಕ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಹಣಕಾಸನ್ನು ಕ್ರೋಡೀಕರಿಸಬೇಕೆಂದು ವಿವರಿಸಲಾಗಿತ್ತು. ಇದರ ಜೊತೆಗೆ ಒಟ್ಟು ರಾಷ್ಟ್ರೀಯ ಆದಾಯದ ಮೊತ್ತದ ಶೇ. 6 ಪ್ರಮಾಣಕ್ಕಿಂತಲೂ ಹೆಚ್ಚಿನ ಹಣವನ್ನು ಬಳಸಿಕೊಂಡು ಪಂಚವಾರ್ಷಿಕ ಯೋಜನೆಗಳಿಂದಲೇ ಶಿಕ್ಷಣಕ್ಕೆ ಬೇಕಾದ ಒಟ್ಟು ಖರ್ಚು ವೆಚ್ಚವನ್ನು ಭರಿಸಬೇಕೆಂದು ಸಹ ಪ್ರಸ್ತಾಪಿಸಿದೆ. ಆದರೆ ಇಲ್ಲಿಯವರೆಗೂ ಉನ್ನತ ಶಿಕ್ಷಣಕ್ಕಾಗಿ ಶೇ. 6 ಪ್ರಮಾಣ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಯಾವುದೇ ಸರಕಾರಗಳೂ ಮೀಸಲಿಟ್ಟಿಲ್ಲ. ಮೇಲಿನ ಅಂಕಿಅಂಶಗಳನ್ನು ಅವಲೋಕಿಸಿದಾಗ ಶಿಕ್ಷಣ ವಲಯದಲ್ಲಿ ಸರಕಾರದ ಆರ್ಥಿಕ ಅನುದಾನವು ಕಡಿತಗೊಳ್ಳುತ್ತಲೇ ಇರುವುದು ಇಂದಿನ ವಾಸ್ತವವಾಗಿದೆ.

ಈ ಕಾರಣಕ್ಕಾಗಿಯೇ ಕಳೆದ ಮುವತ್ತು ವಷರ್ಗಳಲ್ಲಿ ಖಾಸಗಿ ಶಾಲೆಗಳು ಅಣಬೆಗಳಂತೆ ಹುಟ್ಟಿಕೊಂಡಿವೆ ಮತ್ತು ಇಲ್ಲಿಯವರೆಗೂ ಇದನ್ನೇ ಮುಖ್ಯ ಶಿಕ್ಷಣ ನೀತಿಯನ್ನಾಗಿ ಪಾಲಿಸಲಾಗುತ್ತಿದೆ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News