ನಾಲ್ಕು ವಲಯಗಳಿಂದ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಿದ ರೈಲ್ವೇ

Update: 2018-06-30 14:25 GMT

ಹೊಸದಿಲ್ಲಿ, ಜೂ.30: ನಾಲ್ಕು ವಲಯಗಳಲ್ಲಿರುವ ಎಲ್ಲ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕಲಾಗಿದ್ದು 2018ರ ಸೆಪ್ಟೆಂಬರ್ ವೇಳೆಗೆ ಎಲ್ಲ ಹನ್ನೊಂದು ವಲಯಗಳಲ್ಲಿರುವ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕಲಾಗುವುದು ಎಂದು ರೈಲ್ವೇ ಸಚಿವಾಲಯ ಶುಕ್ರವಾರ ತಿಳಿಸಿದೆ. ಪಶ್ಚಿಮ ಕೇಂದ್ರ ರೈಲ್ವೆ, ಕೇಂದ್ರ ರೈಲ್ವೆ, ಪೂರ್ವ ರೈಲ್ವೆ ಹಾಗೂ ಆಗ್ನೇಯ ಕೇಂದ್ರ ರೈಲ್ವೆಯ 11,545 ಕಿ.ಮೀ ಉದ್ದದ ಬ್ರಾಡ್ ಗೇಜ್ ಮಾರ್ಗವು ಇದೀಗ ಸಂಪೂರ್ಣ ಮಾನವರಹಿತ ಲೆವೆಲ್‌ ಕ್ರಾಸಿಂಗ್ ಮುಕ್ತ ಮಾರ್ಗವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸೆಪ್ಟೆಂಬರ್ ವೇಳೆಗೆ 3,497 ಮಾನವರಹಿತ ಲೆವೆಲ್‌ಕ್ರಾಸಿಂಗ್‌ಗಳನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಗಂಟೆಗೆ ನೂರು ಕಿ.ಮೀ.ಗಿಂತ ಅಧಿಕ ವೇಗದ ಹಳಿಗಳು ಮತ್ತು ಉಪನಗರಗಳ ಮಾರ್ಗಗಳಲ್ಲಿರುವ ಎಲ್ಲ ಮಾನವರಹಿತ ಲೆವೆಲ್‌ಕ್ರಾಸಿಂಗ್‌ಗಳನ್ನು ತೆಗೆದು ಹಾಕಲಾಗಿದೆ. ಈ ಪೈಕಿ ದಕ್ಷಿಣ ಕೇಂದ್ರ ರೈಲ್ವೆಯ ಹದಿಮೂರು ಲೆವೆಲ್ ಕ್ರಾಸಿಂಗ್‌ಗಳು ಬಾಕಿಯುಳಿದಿದ್ದು ಅವುಗಳನ್ನು ಜುಲೈ ತಿಂಗಳಲ್ಲಿ ತೆಗೆಯಲಾಗುವುದು. ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆಸಿದ ಮೊದಲ ಸಭೆಯಲ್ಲಿ ಪಿಯೂಶ್ ಗೋಯಲ್, ದೇಶದ ಹನ್ನೊಂದು ರೈಲ್ವೆ ವಲಯಗಳಲ್ಲಿರುವ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕುವಂತೆ ಸೂಚಿಸಿದ್ದರು. ಉಳಿದ ವಲಯಗಳ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು 2020ರ ಒಳಗೆ ತೆರವುಗೊಳಿಸುವ ಗುರಿ ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News