ಸಬ್ಸಿಡಿ ರದ್ದತಿಯಿಂದ ಹಜ್ ಯಾತ್ರೆ ದುಬಾರಿಯಾಗದು: ನಖ್ವಿ

Update: 2018-06-30 16:58 GMT

ಹೊಸದಿಲ್ಲಿ, ಜೂ.30: ಭಾರತೀಯ ಹಜ್ ಸಮಿತಿ ಮುಖಾಂತರ ಹಜ್‌ಗೆ ತೆರಳುವ ಯಾತ್ರಾರ್ಥಿಗಳು ಹಜ್ ಸಬ್ಸಿಡಿ ರದ್ದುಗೊಳಿಸಿದ ನಂತರವೂ ವೈಮಾನಿಕ ಸಂಸ್ಥೆಗೆ 57 ಕೋಟಿ ರೂ. ಕಡಿಮೆ ಪಾವತಿಸಲಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಶನಿವಾರ ತಿಳಿಸಿದ್ದಾರೆ.

ಹಜ್ ಸಬ್ಸಿಡಿ ರದ್ದು ಹಾಗೂ ಸೌದಿ ಅರೇಬಿಯ ಹೇರಿರುವ ಇತರ ಹೊಸ ತೆರಿಗೆಗಳ ಹೊರತಾಗಿಯೂ ಭಾರತೀಯ ಹಜ್ ಯಾತ್ರಾರ್ಥಿಗಳು ಯಾವುದೇ ಹೆಚ್ಚುವರಿ ಹೊರೆಯಿಲ್ಲದೆ ಯಾತ್ರೆಗೆ ತೆರಳಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಹಜ್ ಸಮನ್ವಯಕಾರರು ಮತ್ತು ಸಹಾಯಕ ಹಜ್ ಅಧಿಕಾರಿ ಅಥವಾ ಹಜ್ ಸಹಾಯಕರಿಗಾಗಿ ಹೊಸದಿಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಸ್ವಾತಂತ್ರದ ನಂತರ ಮೊದಲ ಬಾರಿ ದಾಖಲೆಯ 1,75,025 ಭಾರತೀಯರು ಈ ವರ್ಷ ಹಜ್‌ಗೆ ತೆರಳುತ್ತಿದ್ದಾರೆ. ಈ ಪೈಕಿ ಶೇ.47 ಮಹಿಳೆಯರು ಎಂದು ತಿಳಿಸಿದ್ದಾರೆ. ಕಳೆದ ವರ್ಷ 1,24,852 ಹಜ್ ಯಾತ್ರಾರ್ಥಿಗಳಿಗೆ ವೈಮಾನಿಕ ಸಂಸ್ಥೆಗೆ 1,030 ಕೋಟಿ ರೂ. ಪಾವತಿಸಲಾಗಿತ್ತು. ಆದರೆ ಈ ವರ್ಷ ಭಾರತೀಯ ಹಜ್ ಸಮಿತಿಯ ಮೂಲಕ ತೆರಳುವ 1,28,702 ಹಜ್ ಯಾತ್ರಿಗಳಿಗೆ 973 ಕೋಟಿ ರೂ. ಪಾವತಿಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ವರ್ಷದಿಂದ ಹಜ್ ಯಾತ್ರೆಗೆ ನೀಡಲಾಗುವ ಸಬ್ಸಿಡಿಯನ್ನು ರದ್ದು ಮಾಡಲಾಗುತ್ತಿದೆ. ಈ ಹಣವನ್ನು ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶೈಕ್ಷಣಿಕ ವೆಚ್ಚಕ್ಕೆ ಬಳಸಲಾಗುವುದು ಎಂದು ಸರಕಾರ ಜನವರಿಯಲ್ಲಿ ಘೋಷಿಸಿತ್ತು. 2012ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸಬ್ಸಿಡಿಯನ್ನು ರದ್ದು ಮಾಡುವಂತೆ ಸರಕಾರಕ್ಕೆ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಸರಕಾರ ಈ ಆದೇಶವನ್ನು ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News