ಉತ್ತರಾಖಂಡದ ಪೌರಿಯಲ್ಲಿ ಕಮರಿಗೆ ಉರುಳಿದ ಬಸ್: 48 ಮಂದಿ ಸಾವು; 11 ಮಂದಿ ಗಂಭೀರ

Update: 2018-07-01 17:05 GMT

ಉತ್ತರಾಖಂಡ, ಜು. 1: ಉತ್ತರಾಖಂಡದ ಪೌರಿ ಗರ್ಹ್‌ವಾಲ್ ಜಿಲ್ಲೆಯಲ್ಲಿ ರವಿವಾರ ಬಸ್ಸೊಂದು 80 ಮೀಟರ್ ಅಡಿ ಆಳದ ಕಮರಿಗೆ ಉರುಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 48 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದಾರೆ ಹಾಗೂ 11 ಮಂದಿ ಗಾಯಗೊಂಡಿದ್ದಾರೆ.

 ಈ ಅಪಘಾತ ಪೌರಿ ಗರ್ಹ್‌ವಾಲ್ ಜಿಲ್ಲೆಯ ಕುಯಿನ್ ಗ್ರಾಮದ ಸಮೀಪ, ನೈನಿದಂಡ ಬ್ಲಾಕ್‌ನ ಪಿಪಾಲಿ-ಭೋನ್ ಮೋಟಾರ್‌ವೇಯಲ್ಲಿ ಬೆಳಗ್ಗೆ 8:45ಕ್ಕೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

28 ಸೀಟ್‌ನ ಮಿನಿ ಬಸ್‌ನಲ್ಲಿ 50 ಮಂದಿ ಪ್ರಯಾಣಿಸುತ್ತಿದ್ದರು. ಈ ಬಸ್ ಭೋನ್‌ನಿಂದ ರಾಮ್‌ನಗರದ ಕಡೆಗೆ ತೆರಳುತ್ತಿತ್ತು. ಅಪಘಾತಕ್ಕೆ ಖಚಿತ ಕಾರಣ ಇದುವರೆಗೆ ತಿಳಿದು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಪ್ರಯಾಣಿಸಿದ ಕಾರಣ ಮಿನಿ ಬಸ್ 200 ಮೀಟರ್ ಆಳದ ಕಮರಿಗೆ ಉರುಳಿ ಬಿತ್ತು ಎಂದು ಪೌರಿ ಪೊಲೀಸ್ ಅಧೀಕ್ಷಕ ಜಗತ್ ರಾಮ್ ಜೋಷಿ ಅವರು ಹೇಳಿದ್ದಾರೆ. ‘‘48 ಮಂದಿ ಪ್ರಯಾಣಿಕರು ಮೃತಪಟ್ಟಿರುವುದು ದೃಢಪಟ್ಟಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ರಾಮ್‌ನಗರ್‌ಕ್ಕೆ ಚಿಕಿತ್ಸೆಗೆ ಕೊಂಡೊಯ್ಯಲಾಗಿದೆ. ಇತರ 9 ಮಂದಿಗೆ ಧುಮಾಕೋಟ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ’’ ಎಂದು ಅವರು ತಿಳಿಸಿದ್ದಾರೆ. 

ಪರಿಹಾರ ಧನ ಘೋಷಣೆ

ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಂಭೀರ ಗಾಯಗೊಂಡವರಿಗೆ 50,000 ರೂ. ಪರಿಹಾರ ಧನವನ್ನು ಅವರು ಘೋಷಿಸಿದ್ದಾರೆ. ಅಲ್ಲದೆ ಘಟನೆಯ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News