ಬೆಂಗಳೂರು: ರಸ್ತೆ ಅಪಘಾತ; ಇಬ್ಬರು ಬೈಕ್ ಸವಾರರು ಮೃತ್ಯು
ಬೆಂಗಳೂರು, ಜು.2: ಶರವೇಗವಾಗಿ ಮುನ್ನುಗ್ಗಿದ ಬೈಕ್‌ವೊಂದು, ಗೂಡ್ಸ್ ವಾಹನಕ್ಕೆ ಅಪ್ಪಳಿಸಿ ನಂತರ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಕೆ.ಎಸ್.ಲೇಔಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಿರುಪಾಳ್ಯದ ಪ್ರಕಾಶ್ (28) ಮತ್ತು ಮೂಲತಃ ದಾವಣಗೆರೆ ಜಿಲ್ಲೆಯ ಆಂಜನೇಯ (22) ಮೃತಪಟ್ಟ ಬೈಕ್ ಸವಾರರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರವಿವಾರ ರಾತ್ರಿ 11:45ರ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ನಗರದ ಹೊರವಲಯದ ನೈಸ್‌ರಸ್ತೆಯ ಅಂಜನಾಪುರ ಬಳಿ ನಿಯಂತ್ರಣ ತಪ್ಪಿ ನಿಂತಿದ್ದ ಬುಲೆರೋ ಗೂಡ್ಸ್ ವಾಹನಕ್ಕೆ ಅಪ್ಪಳಿಸಿ ನಂತರ ರಸ್ತೆ ಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಕೆಳಕ್ಕೆ ಬಿದ್ದು ಗಂಭೀರ ಪೆಟ್ಟಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೆಎಸ್ ಲೇಔಟ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಸವಾರರಿಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.