×
Ad

‘ರೈತರಿಗೆ ನ್ಯಾಯಯುತ ಬೆಲೆ ಒದಗಿಸುವ ಮಾದರಿ, ಪ್ರಾಯೋಗಿಕ ಯೋಜನೆ’

Update: 2018-07-02 18:36 IST

ಬೆಂಗಳೂರು, ಜು. 2: ರಾಜ್ಯದಲ್ಲಿನ ಅನ್ನದಾತನ ಬದುಕು ಹಸನುಗೊಳಿಸಬೇಕು. ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವುದನ್ನು ಜಾರಿಗೆ ತರುವುದು ನನ್ನ ಸರಕಾರದ ಪ್ರಮುಖ ಉದ್ದೇಶ ಎಂದು ರಾಜ್ಯಪಾಲ ವಜೂಬಾಯಿ ವಾಲಾ ಅವರು ಇಂದಿಲ್ಲಿ ಪ್ರಕಟಿಸಿದ್ದಾರೆ.

ಸೋಮವಾರ ವಿಧಾನ ಮಂಡಲ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ರೈತರು ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಬೇಕು. ರೈತರ ಬದುಕನ್ನು ಹಸನುಗೊಳಿಸಲು ಸರಕಾರ ಮಾನವೀಯ ಚೌಕಟ್ಟಿನಲ್ಲಿ ನಿರ್ಧಾರಗಳನ್ನು ಮತ್ತು ನಿಲುವುಗಳನ್ನು ತೆಗೆದುಕೊಳ್ಳಲಿದೆ ಎಂದರು.

ಹಿಂದಿನ ಸರಕಾರದ ಪರಿಣಾಮಕಾರಿ ಯೋಜನೆಗಳನ್ನು ಮುಂದುವರೆಸುವ ಜೊತೆಗೆ ಭವಿಷ್ಯದ ದೃಷ್ಟಿಯಲ್ಲಿ ಹೊಸ ಹೆಜ್ಜೆ ಇಡಲಿದೆ. ರೈತ ನಾಡಿನ ಬೆನ್ನೆಲುಬು. ಆತನ ರಕ್ಷಣೆಗೆ ಸದಾ ನಾವು ಚಿಂತಿಸುತ್ತೇವೆ. ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸುವುದು ಸರಕಾರದ ಆದ್ಯತೆಯಲ್ಲಿ ಪ್ರಮುಖವಾದುದು ಎಂದು ಉಲ್ಲೇಖಿಸಿದರು.

ಕೃಷಿ ಪದ್ಧತಿಯಲ್ಲಿ ನೀರಿನ ಲಭ್ಯತೆ ಆಧರಿಸಿ ಯಾವ ಋತುಮಾನಕ್ಕೆ ಯಾವ ಬೆಳೆ ಬೆಳೆಯಬೇಕೆಂಬ ಬಗ್ಗೆ ಅಧಿಕಾರಿಗಳು ರೈತರ ಜಮೀನಿಗೆ ಬಂದು ಸಲಹೆ ನೀಡಬೇಕು. ಕೃಷಿ ಪದ್ಧತಿ ಮತ್ತು ಕೃಷಿ ನೀತಿಯಲ್ಲಿ ಸಮಗ್ರ ಬದಲಾವಣೆ ತರಬೇಕು. ಅನ್ನದಾತನಿಗೆ ಅಧಿಕ ಆದಾಯ ಹಾಗೂ ಹೆಚ್ಚು ಲಾಭ ದೊರಕಿಸಿಕೊಡಬೇಕಾದರೆ ತೋಟಗಾರಿಕಾ ಬೆಳೆಗಳಿಗೆ ಒತ್ತು ನೀಡಬೇಕಿದೆ. ಅಲ್ಲದೆ, ರಫ್ತು ಆಧಾರಿತ ಮಾರುಕಟ್ಟೆ ವ್ಯವಸ್ಥೆ, ಪೊಟ್ಟಣೀಕರಣ ಹಾಗೂ ಸಂಗ್ರಹಣಾ ವ್ಯವಸ್ಥೆಯನ್ನು ರೂಪಿಸಬೇಕಿದೆ. ರೈತರಿಗೆ ನ್ಯಾಯಯುತ ಬೆಲೆ ಖಚಿತಪಡಿಸುವ ಮಾದರಿ ಹಾಗೂ ಪ್ರಾಯೋಗಿಕ ಯೋಜನೆಯನ್ನು ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲು ಸರಕಾರ ಚಿಂತನೆ ನಡೆಸಿದೆ. ರೈತರ ಆತಂಕದ ದಿನಗಳು ದೂರ ಆಗಬೇಕು. ಧ್ವನಿಯಿಲ್ಲದವರಿಗೆ ಧ್ವನಿಯಾಗಬೇಕು. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದ ಅವರು, ಮಳೆಯನ್ನೇ ಅವಲಂಬಿಸುವ ರೈತ ನೀರು ಲಭ್ಯತೆಯನ್ನು ಆಧರಿಸಿ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News