'ಬಿಜೆಪಿಯಿಂದ ಮುಸ್ಲಿಮ್ ಸಮುದಾಯ ಒಡೆಯುವ ಹುನ್ನಾರ'

Update: 2018-07-02 14:36 GMT

ಬೆಂಗಳೂರು, ಜು.2: ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಬದಲು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡಿ ಎಂದು ಮುಸ್ಲಿಮ್ ಸಮುದಾಯವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸಿವೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಪ್ರೊ.ಎನ್.ವಿ.ನರಸಿಂಹಯ್ಯ, ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಹಜ್ ಭವನಕ್ಕೆ ಸಹಾಯ ಮಾಡಬಹುದು. ಆದರೆ, ಹಜ್‌ ಭವನಕ್ಕೆ ಮರುನಾಮಕರಣ ಮಾತ್ರ ಮಾಡಬಾರದು. ಇದ್ಯಾವ ನ್ಯಾಯ? ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿನ ಬದಲು ಕಲಾಂ ಅವರ ಹೆಸರಿಡಿ ಅಂತ ಹೇಳಿ ಸಮುದಾಯದ ಮಧ್ಯೆ ಬಿರುಕು ಮೂಡಿಸಲಾಗುತ್ತಿದೆ. ಸಮ್ಮಿಶ್ರ ಸರಕಾರ ಹಜ್ ಭವನಕ್ಕೆ ಹಜರತ್ ಟಿಪ್ಪು ಸುಲ್ತಾನರ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಮಹಾನ್ ಸೇನಾನಿ ಎಂಬ ಹೆಸರು ಪಡೆದ ಟಿಪ್ಪು ಮತಾಂಧ ಅನ್ನೋದು ಎಷ್ಟು ಸರಿ? ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕನ್ನಡ ವಿರೋಧಿ ಟಿಪ್ಪು ಎಂದು ಬಿಂಬಿಸಿದ್ದಾರೆ. ಕೆಜೆಪಿ ಪಕ್ಷ ಕಟ್ಟುವ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಟಿಪ್ಪು ಪೇಟ ಧರಿಸಿ, ಖಡ್ಗ ಹಿಡಿದು ಸಂಭ್ರಮಿಸಿದರು. ಟಿಪ್ಪುನನ್ನು ವಿರೋಧಿಸುವವರು ಮನುಷ್ಯರಲ್ಲ ಎಂದಿದ್ದ ಬಿಜೆಪಿ ಮುಖಂಡರು, ಈಗ ನಾಟಕ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಝಮೀರ್ ಅಹ್ಮದ್ ಹಜ್ ಭವನಕ್ಕೆ ಟಿಪ್ಪು ಹೆಸರಿಡಬೇಕೆಂದು ಮನವಿ ಕೊಟ್ಟಿದ್ದನ್ನೇ ಇವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಯಾರೇ ಆಗಲೀ ಇತಿಹಾಸ ತಿಳಿಯದೆ ಮಾತನಾಡೋದು ಸರಿಯಲ್ಲ. ಟಿಪ್ಪು ಮತಾಂಧನಲ್ಲ ಎಂಬುದರ ಕುರಿತಂತೆ ಚಿದಾನಂದ ಮೂರ್ತಿ, ಶೋಭಾ ಕರಂದ್ಲಾಜೆ, ಯಡಿಯೂರಪ್ಪ ನೇರ ಚರ್ಚೆಗೆ ಬರುವಂತೆ ಪ್ರೊ.ಎನ್.ವಿ.ನರಸಿಂಹಯ್ಯ ಆಹ್ವಾನ ನೀಡಿದರು.

ಟಿಪ್ಪು ಪ್ರಚಾರ ಸಮಿತಿ ಉಪಾಧ್ಯಕ್ಷ ಜನಾಬ್ ಸೈಯದ್ ಷಫೀವುಲ್ಲಾ ಮಾತನಾಡಿ, ಹಜ್ ಭವನಕ್ಕೆ ಕಲಾಂ ಅವರ ಹೆಸರು ಇಡಬೇಕು ಅಂದರೆ, ಪ್ರತ್ಯೇಕ ಹಜ್ ಭವನ ನಿರ್ಮಿಸಲಿ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೆಸರಿಡಲು ನಮಗೆ ವಿರೋಧ ಇಲ್ಲ. ಆದರೆ, ಒಂದು ಪ್ರಸ್ತಾವನೆ ಸಲ್ಲಿಸಿದಾಗ ಅದಕ್ಕೆ ಅಡ್ಡಿಯುಂಟು ಮಾಡಲಾಗುತ್ತಿದೆ. ಆರೆಸ್ಸೆಸ್ ಕಚೇರಿಯಲ್ಲಿ ದೇಶದ ಬಾವುಟ ಹಾರಿಸಲು ಸಾಧ್ಯವಿಲ್ಲ. ಇಂಥವರು ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಪ್ರಶ್ನಿಸುತ್ತಾರೆ ಎಂದು ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಸಮತ ಸೈನಿಕ ದಳ (ಕೆಎಸ್‌ಎಸ್‌ಡಿ) ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ, ಡಿಎಸ್‌ಎಸ್ ಸಂಚಾಲಕ ಅಣ್ಣಯ್ಯ, ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ ವೀರಸಂಗಯ್ಯ, ಟಫ್ ಪ್ರಧಾನ ಕಾರ್ಯದರ್ಶಿ ಜನಾಬ್ ದಾವುದ್ ಇಕ್ಬಾಲ್, ವಿವೇಕಾನಂದ ವಿಚಾರ ವೇದಿಕೆ ಅಧ್ಯಕ್ಷ ಸಿ.ಕೆ.ರವಿಚಂದ್ರ ಉಪಸ್ಥಿತರಿದ್ದರು.

ಹಜ್ ಭವನ ನಮ್ಮದು. ಯಾರ ಹೆಸರನ್ನು ಬೇಕಾದರೂ ಇಟ್ಟುಕೊಳ್ಳುತ್ತೇವೆ. ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಕಳಂಕ ಹೇರಲಾಗುತ್ತಿದೆ. ಯಾವುದೇ ವಿಚಾರಕ್ಕೂ ಉಗ್ರ ಹೋರಾಟ ಅನ್ನುತ್ತಾರೆ. ನಮಗೂ ಹೋರಾಟ ಮಾಡಲು ಬರುತ್ತದೆ. ನಾವೇನು ಕೈಗೆ ಬಳೆ ಹಾಕಿಲ್ಲ. ರೈತರ ಸಾಲ ಮನ್ನಾ, ಇತರೆ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಯೋಗ್ಯತೆ ಇಲ್ಲ. ಆದರೆ, ಬೇಡದ ವಿಚಾರಕ್ಕೆ ಕೋಮು ದ್ವೇಷ ಬಿತ್ತಲು ಮುಂದಿರುತ್ತಾರೆ.
-ಅಹಮದ್ ಖುರೇಷಿ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News