ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಮುಸ್ಲಿಮರಿಗೆ ಅನ್ಯಾಯ: ಲೋಪ ಸರಿಪಡಿಸುವಂತೆ ಅವಕಾಶ ವಂಚಿತರ ಆಗ್ರಹ
ಬೆಂಗಳೂರು, ಜು.2: ಅನುದಾನಿತ ಖಾಸಗಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ರೋಸ್ಟರ್ ಪದ್ಧತಿಯ ಮೀಸಲಾತಿಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ, ವಿಷಯವಾರು ಮೀಸಲಾತಿಯನ್ನು ಅಳವಡಿಸುವವರೆಗೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಅವಕಾಶ ವಂಚಿತರು ಆಗ್ರಹಿಸಿದ್ದಾರೆ.
ಅನುದಾನಿತ ಖಾಸಗಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ 2015ರ ಡಿ.31ರೊಳಗೆ ನಿವೃತ್ತಿ, ಮೃತ್ಯು ಮತ್ತು ಇತರೆ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯಿಂದ ಆರಂಭಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ ಹುದ್ದೆ ನೀಡಲಾಗುತ್ತಿಲ್ಲ. ಪ್ರತಿ ಒಂದು ಪದವಿ ಕಾಲೇಜಿನಲ್ಲಿ ಅಲ್ಪಸಂಖ್ಯಾತ(ಪ್ರವರ್ಗ 2ಬಿ) ಹುದ್ದೆ ಇದ್ದರೂ ಮುಸ್ಲಿಮ್ ಸಮುದಾಯಕ್ಕೆ ಹುದ್ದೆಗಳ ನೇಮಕಾತಿಯಿಂದ ವಂಚಿತಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ರೋಸ್ಟರ್ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ಆಗಿರುವ ತಪ್ಪುಗಳಿಂದ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಆದುದರಿಂದ, ರೋಸ್ಟರ್ ಪದ್ಧತಿಯ ಅಳವಡಿಕೆಯ ಸಂದರ್ಭದಲ್ಲಿ ವಿಷಯವಾರು ರೋಸ್ಟರ್, ವೃಂದ ಪದ್ಧತಿಯಡಿಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ಮೀಸಲಾತಿ ನೀಡಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಅವಕಾಶ ವಂಚಿತರು ಒತ್ತಾಯಿಸಿದ್ದಾರೆ.
ಎಲ್ಲೆಲ್ಲಿ ನೇಮಕಾತಿಯ ಪ್ರಕ್ರಿಯೆ ಆರಂಭಗೊಂಡಿದೆಯೋ ಅಲ್ಲಲ್ಲಿ ರೋಸ್ಟರ್ ವಿಷಯವಾರು ವೃಂದ ಪದ್ಧತಿಯನ್ನು ಅಳವಡಿಸಿ ನೇಮಕಾತಿ ಮಾಡಿ, ಇಲ್ಲವೆ ಈ ಅನ್ಯಾಯ ಸರಿಪಡಿಸುವವರೆಗೆ ನೇಮಕಾತಿ ಪ್ರಕ್ರಿಯೆಯನ್ನು ಈ ತಕ್ಷಣವೆ ಸ್ಥಗಿತಗೊಳಿಸಬೇಕೆಂದು ಅವಕಾಶ ವಂಚಿತರು ಆಗ್ರಹಿಸಿದ್ದಾರೆ.
ಒಂದು ಶಿಕ್ಷಣ ಸಂಸ್ಥೆಯಲ್ಲಿ 100 ಮಂದಿ ನೇಮಕವಾದಲ್ಲಿ ಮೀಸಲಾತಿ ಪ್ರಕಾರ 4 ಮಂದಿ ಮುಸ್ಲಿಮರಿಗೆ ಅವಕಾಶ ಸಿಗಲೇಬೇಕು. ಆದರೆ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸಿ, ಇದರ ಬಗ್ಗೆ ಕೂಡಲೆ ಕ್ರಮ ಕೈಗೊಂಡು ಆಗುತ್ತಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ನ್ಯಾಯ ಒದಗಿಸಿ ದೇಶದ ಭವಿಷ್ಯವನ್ನು ರೂಪಿಸಬೇಕೆಂದು ರಾಜ್ಯ ಸರಕಾರಕ್ಕೆ ಅವಕಾಶ ವಂಚಿತರು ಆಗ್ರಹಿಸಿದ್ದಾರೆ.