7ನೆ ದಿನಕ್ಕೆ ಕಾಲಿಟ್ಟ ಹಾಸ್ಟೆಲ್ ಹೊರಗುತ್ತಿಗೆದಾರರ ಧರಣಿ: 20 ಮಹಿಳಾ ನೌಕರರು ಅಸ್ವಸ್ಥ
ಬೆಂಗಳೂರು, ಜು.2: ಸರಕಾರಿ ವಸತಿ ಶಾಲೆ ಹೊರಗುತ್ತಿಗೆ ನೌಕರರನ್ನು ಏಕಾಏಕಿ ಹುದ್ದೆಗಳಿಂದ ವಜಾ ಮಾಡುತ್ತಿರುವ ಕ್ರಮವನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ 7ನೆ ದಿನಕ್ಕೆ ಕಾಲಿಟ್ಟಿದ್ದು, 20 ಮಹಿಳಾ ನೌಕರರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರವೂ ಮುಂದುವರೆದ ಧರಣಿಯಲ್ಲಿ ಭಾಗಿಯಾಗಿದ್ದ ಚಿಂತಾಮಣಿಯ ಮಂಜಮ್ಮ, ಕಲುಬರ್ಗಿಯ ಸಾರಾಭಾಯಿ ಎಂಬುವರು ಸೇರಿದಂತೆ 20 ಮಹಿಳೆಯರು ಅಸ್ವಸ್ಥರಾಗಿದ್ದು, ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿನ ಚಳಿ, ತುಂತುರು ಮಳೆಯಿಂದಾಗಿ ಪ್ರತಿಭಟನಾಕಾರರಲ್ಲಿ ಜ್ವರ, ನೆಗಡಿ, ಕೆಮ್ಮು ಹಾಗೂ ನಿಶಕ್ತಿ ಕಾಣಿಸಿಕೊಂಡು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಧರಣಿ ಸ್ಥಳದಲ್ಲಿಯೇ ಆಂಬ್ಯುಲೆನ್ಸ್ ವಾಹನವೊಂದನ್ನು ನಿಲ್ಲಿಸಿ, ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಸ್ವಾತಂತ್ರ ಉದ್ಯಾನವನ ಮೈದಾನದಲ್ಲಿಯೇ ಉಳಿದಿರುವ ನೂರಾರು ಮಹಿಳಾ ಪ್ರತಿಭಟನಾಕಾರರಿಗೆ ರಾತ್ರಿ ವೇಳೆ ಹೆಚ್ಚು ಚಳಿ ಆಗುತ್ತಿದ್ದು, ಯಾವುದೇ ಸುರಕ್ಷತೆ ಇಲ್ಲ. ಕುಡಿಯುವ ನೀರಿನ ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲ. ಜೊತೆಗೆ ಸೊಳ್ಳೆ ಕಾಟವೂ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ರೈತ ಸಂಘದ ಮುಖಂಡ ವೀರಸಂಗಯ್ಯ, ಜನಶಕ್ತಿ ಸಂಘಟನೆಯ ಡಾ.ಎಚ್.ವಿ.ವಾಸು ಸೇರಿದಂತೆ ಪ್ರಮುಖರು ಪಾಲ್ಗೊಂಡು, ರಾಜ್ಯ ಸರಕಾರವೂ ಸರಕಾರಿ ವಸತಿ ಶಾಲೆ ಹೊರಗುತ್ತಿಗೆ ನೌಕರರನ್ನು ಏಕಾಏಕಿ ಹುದ್ದೆಗಳಿಂದ ವಜಾ ಮಾಡುತ್ತಿರುವ ಕ್ರಮವನ್ನು ನಿಲ್ಲಿಸಬೇಕು. ಜೊತೆಗೆ, ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಸಹ ಕಾರ್ಯದರ್ಶಿ ಕೆ. ಹನುಮೇಗೌಡ ಮಾತನಾಡಿ, ಅನಿರ್ದಿಷ್ಟಾವಧಿ ಹೋರಾಟ ಸ್ಥಳಕ್ಕೆ ಸಚಿವರು, ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಸೂಕ್ತ ರೀತಿಯಲ್ಲಿ ಭರವಸೆ ನೀಡದ ಕಾರಣ ಧರಣಿ ಮುಂದುವರೆಸಲಾಗಿದೆ ಎಂದು ತಿಳಿಸಿದರು.
ಹೋರಾಟಗಾರರೊಂದಿಗೆ ಈಗಾಗಲೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುವುದನ್ನು ಕೂಡಲೇ ನಿಲ್ಲಿಸುವ ಕುರಿತು ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ, ನಮಗೆ ಆಶ್ವಾಸನೆ ಬೇಡ, ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಹಾಸ್ಟೆಲ್ ನೌಕರರಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಬ್ಬರು ಸಚಿವರು ಸೂಕ್ತ ರೀತಿಯಲ್ಲಿ ಭರವಸೆ ನೀಡಬೇಕು. ಜೊತೆಗೆ ಶೀಘ್ರದಲ್ಲಿಯೇ ರಾಜ್ಯ ಸರಕಾರದಿಂದ ಆದೇಶ ಹೊರಡಿಸಬೇಕು’
-ಚೇತನ್, ನಟ, ಹೋರಾಟಗಾರ