ಚುಂಬನದ ವಿಚಾರದಲ್ಲಿ ಎಲ್ಲರೂ ಪರಿಣಿತರು: ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಜು. 2: ‘ಚುಂಬನದ ವಿಚಾರದಲ್ಲಿ ಎಲ್ಲರೂ ಬಹಳ ಪರಿಣಿತರು’ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್, ಬಿಜೆಪಿ ಸದಸ್ಯರೊಬ್ಬರು ಮಂಡಿಸಿದ ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಹಾಸ್ಯದ ದಾಟಿಯಲ್ಲೆ ಚಟಾಕಿ ಹಾರಿಸಿದ ಪ್ರಸಂಗ ನಡೆಯಿತು.
ಸೋಮವಾರ ಸಂತಾಪ ಸೂಚನೆ ಕಲಾಪದ ವೇಳೆ ಮಧ್ಯಪ್ರವೇಶಿಸಿದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಮಾಧುಸ್ವಾಮಿ, ವಿಧಾನಸಭೆ ಅಧಿವೇಶನ ಕಲಾಪ ಬಗ್ಗೆ ಸದಸ್ಯರಿಗೆ 15ದಿನ ಮೊದಲೇ ನೋಟಿಸ್ ಮೂಲಕ ಮಾಹಿತಿ ನೀಡಬೇಕು.
ಆದರೆ, ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ನಮ್ಮ ಹಕ್ಕಿಗೆ ಚ್ಯುತಿ ಬಂದಿದೆ. ಹೀಗೆ ಆದರೆ, ನಾವು ಜನಪ್ರತಿನಿಧಿಗಳಾಗಿ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಮೊದಲ ಅಧಿವೇಶನ ಇದು, ಸಹಕರಿಸಿ. ಇನ್ನು ಮುಂದೆ ಹೀಗೆ ಆಗುವುದಿಲ್ಲ ಎಂದರು.
ಈ ಹಂತದಲ್ಲಿ ಮಧ್ಯೆಪ್ರವೇಶಿಸಿದ ಮಾಧುಸ್ವಾಮಿ, ‘ಪ್ರಥಮ ಚುಂಬನಂ ದಂತ ಭಗ್ನಂ’ ಎಂಬ ಮಾತಿನಂತೆ ಮೊದಲ ಅಧಿವೇಶನದ ಸಂದರ್ಭದಲ್ಲೆ ಹೀಗೆ ಆದರೆ ಹೇಗೆ ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಹಾಸ್ಯದ ದಾಟಿಯಲ್ಲೇ ರಮೇಶ್ ಕುಮಾರ್, ‘ಚುಂಬನ ವಿಚಾರದಲ್ಲಿ ಎಲ್ಲರೂ ಪರಿಣಿತರು’ ಎಂದು ಚಟಾಕಿ ಹಾರಿಸಿದರು.
ಇದು ಗಂಭೀರವಾದ ವಿಚಾರ, ಅಷ್ಟೊಂದು ಹಗುರವಾಗಿ ಪರಿಗಣಿಸಬೇಡಿ ಎಂದು ಮಾಧುಸ್ವಾಮಿ ಹೇಳಿದರು. ಇನ್ನು ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸುತ್ತೇವೆ. ಎಲ್ಲ ಸದಸ್ಯರು ಸಹಕರಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಮನವಿ ಮಾಡುವ ಮೂಲಕ ಚರ್ಚೆಗೆ ವಿರಾಮ ಹಾಡಿದರು.