ಮೀಸಲಾತಿ ಬಗ್ಗೆ ಮಹಿಳೆಯರು ಜಾಗೃತರಾಗಿ: ಶಾಸಕಿ ಸೌಮ್ಯಾರೆಡ್ಡಿ

Update: 2018-07-03 13:35 GMT

ಬೆಂಗಳೂರು, ಜು.3: ದೇಶದ ಇತಿಹಾಸದಲ್ಲಿ ಮಹಿಳೆಯರಿಗೆ ತನ್ನದೆ ಆದ ಸ್ಥಾನಮಾನವಿದೆ. ಮಹಿಳಾ ಮೀಸಲಾತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಮಹಿಳೆಯರು ಜಾಗೃತರಾಗಬೇಕಿದೆ ಎಂದು ಜಯನಗರ ಶಾಸಕಿ ಸೌಮ್ಯಾರೆಡ್ಡಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸಮತಾ ಲೇಡಿಸ್ ಕ್ಲಬ್ ಮತ್ತು ಅಖಿಲ ಭಾರತ ಗ್ರಾಹಕರ ರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಮಹಿಳಾ ಮೀಸಲಾತಿ ಯಶಸ್ವಿಯಾಗಿ ಜಾರಿಗೆ ಬಂದಿದೆಯೇ’ ಎಂಬ ವಿಚಾರ ಸಂಕಿರಣದಲ್ಲಿ ಮಹಿಳೆಯರು ಮೀಸಲಾತಿ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಹುರಿದುಂಬಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದ ಅವರು, ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಮಹಿಳಾ ಸಂಕುಲದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಿ ಮೀಸಲಾತಿ ಪಡೆಯಬೇಕು ಎಂದರು.

ನಗರದ ಯಾವುದೇ ಭಾಗದ ಮಹಿಳೆಯರಿಗೆ ಕುಂದು-ಕೊರತೆಗಳಿದ್ದರೆ ನನ್ನ ಬಳಿ ಬನ್ನಿ, ಸಾಧ್ಯವಾದ ಮಟ್ಟಿಗೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಅವರು, ನನಗೆ ಮೊದಲಿನಿಂದಲೂ ಸಮಾಜ ಸೇವೆಯೆಂದರೆ ಅಚ್ಚು ಮೆಚ್ಚು. ಜಯನಗರ ಕ್ಷೇತ್ರದ ಜನತೆ ನನ್ನನ್ನು ಶಾಸಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ಹೇಳಿದರು.

ರಾಜ್ಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಣಕಾಸು ನಿಗಮದ ಉಪ ಮಹಾ ಪ್ರಬಂಧಕಿ ರೂಪಾ.ಆರ್ ಮಾತನಾಡಿ, ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಮಹಿಳೆಯರ ಸಹಭಾಗಿತ್ವ ಅತ್ಯಗತ್ಯ. ಆದರೆ, ಮಹಿಳೆಯರಿಗೆ ಪೂರ್ಣ ಪ್ರಮಾಣದ ಮೀಸಲಾತಿ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ, ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ಹಾಗಾಗಿ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿಯೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ಲಬ್‌ನ ಸದಸ್ಯೆ ನಿರ್ಮಲ ಪ್ರಕಾಶ್, ಮಹಿಳಾ ಹೋರಾಟಗಾರ್ತಿ ಲಲಿತಾ ಮೇರಿ, ಕ್ಲಬ್‌ನ ಅಧ್ಯಕ್ಷೆ ಸುವರ್ಣಾ ಅಮರನಾಥ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News