ಮಾನವ ದೇಹದಿಂದಲೇ ಮೊಬೈಲ್ ಬ್ಯಾಟರಿ ಚಾರ್ಜ್: ವಿದ್ಯಾರ್ಥಿಗಳ ಆವಿಷ್ಕಾರ

Update: 2018-07-04 13:55 GMT

ಬೆಂಗಳೂರು, ಜು.4: ನಗರದ ಸಾಯಿರಾಂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕೊಳವೆ ಬಾವಿಗೆ ಬಿದ್ದ ಮಗುವನ್ನು ಮೇಲೆತ್ತುವ ಯಂತ್ರ, ಮಾನವನ ದೇಹದಿಂದಲೇ ಮೊಬೈಲ್ ಬ್ಯಾಟರಿ ಚಾರ್ಜ್ ಸೇರಿದಂತೆ 9 ಯಂತ್ರಗಳನ್ನು ಆವಿಷ್ಕರಿಸಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಯಿರಾಂ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್, ನಮ್ಮ ವಿದ್ಯಾರ್ಥಿಗಳು ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗುವ ದಿ ಫ್ಯೂಚರ್ ಕಾರ್ ಪೆಡ್ಲಿಂಗ್ ಯಂತ್ರ, ಕುಳಿತಲ್ಲಿಯೇ ಯಂತ್ರದ ಒಳಭಾಗಗಳನ್ನು ನೋಡಬಹುದಾದ ಎಡುವಿಸ್ತಾ ಕನ್ನಡಕ, ರೇಡಿಯೋ ತರಂಗಗಳನ್ನು ಆಧರಿಸಿ ಮೆಟ್ರೋ ನಿಲ್ದಾಣದಲ್ಲಿ ಸ್ವಯಂಚಾಲಿತವಾಗಿ ಬಾಗಿಲು ತೆರೆಯುವ ಯಂತ್ರ, ಕೊಳಚೆ, ಮರಳು, ಮಣ್ಣಿನಲ್ಲಿ ಚಲಿಸಬಲ್ಲ ಟರೇನ್ ವೈಕಲ್, ಫಾರ್ಮುಲಾ ವೆಹಿಕಲ್, ಸ್ಟೇಷನ್ ರೋಬೋಟಿಂಗ್ ಯಂತ್ರಗಳನ್ನು ಆವಿಷ್ಕರಿಸಿದ್ದಾರೆಂದು ವಿವರಿಸಿದರು.

ಬೋರ್ವೆಲ್ ರೆಸ್ಕೂ ರೊಬೋಟ್: ಕೊಳವೆಬಾವಿಗಳಲ್ಲಿ ಮಕ್ಕಳು ಬಿದ್ದಾಗ ಮಕ್ಕಳನ್ನು ಮೇಲೆತ್ತುವುದು ಅತ್ಯಂತ ಕಷ್ಟದ ಕೆಲಸ. ಹೀಗಾಗಿ, ಅನೇಕ ಪ್ರಕರಣಗಳಲ್ಲಿ ಕೊಳವೆಬಾವಿಗೆ ಬಿದ್ದ ಮಕ್ಕಳನ್ನು ಜೀವಂತವಾಗಿ ಮೇಲೆತ್ತಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ‘ಬೋರ್ವೆಲ್ ರೆಸ್ಕ್ಯೂ ರೋಬೋಟ್’ ಎನ್ನುವ ವಿಶೇಷ ಸಾಧನ ಆವಿಷ್ಕರಿಸಲಾಗಿದೆ. ಇದೀಗ ಪ್ರಾಯೋಗಿಕವಾಗಿ ಈ ಯಂತ್ರವನ್ನು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಆಳಕ್ಕೆ ಬಿದ್ದ ಮಗುವನ್ನು ಸಹ ಸುಲಭವಾಗಿ ಎತ್ತುವಂತೆ ಈ ರೋಬೋಟ್ ಅನ್ನು ಮಾರ್ಪಾಡುಗೊಳಿಸಲಾಗುವುದು ಎಂದು ತಿಳಿಸಿದರು.

ಸ್ವಯಂ ಚಾಲಿತ ಕುರ್ಚಿ: ಅಂಗವಿಕಲರು ಕುಳಿತುಕೊಳ್ಳುವ ಕುರ್ಚಿಯ ಗಾಲಿಯನ್ನು ಅವರೇ ಕೈಯಿಂದ ತಿರುಗಿಸಿಕೊಳ್ಳಬೇಕಿತ್ತು. ಆದರೀಗ ಹೊಸದಾಗಿ ಆವಿಷ್ಕರಿಸಿರುವ ಕುರ್ಚಿಯಲ್ಲಿ ಬಳಕೆದಾರರ ತಲೆಗೆ ಹೆಡ್‌ಬ್ಯಾಂಡ್ ತಯಾರಿಸಲಾಗಿದೆ. ಅದನ್ನು ತಲೆಗೆ ಧರಿಸಿದರೆ ಅವರು ಯಾವ ದಿಕ್ಕಿಗೆ ಮುಖ ತಿರುಗಿಸುತ್ತಾರೋ ಆ ದಿಕ್ಕಿಗೆ ಕುರ್ಚಿ ಸಾಗುವಂತಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಬಿ.ಷಡಕ್ಷರಪ್ಪ, ಆಡಳಿತ ಮಂಡಳಿಯ ಡಾ.ಅರುಣ್‌ಕುಮಾರ್, ಕೆ. ಪಟೇಲ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News