×
Ad

ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸಿದ್ದೇವೆ: ಸಿಎಂ ಕುಮಾರಸ್ವಾಮಿ

Update: 2018-07-05 15:26 IST

ಬೆಂಗಳೂರು, ಜು. 5: ‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ 2018-19ನೆ ಸಾಲಿನ ಆಯವ್ಯಯ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಬಜೆಟ್. ಈ ಬಗ್ಗೆ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ತಪ್ಪಾಗಿ ಗ್ರಹಿಸುವ ಅಗತ್ಯವಿಲ್ಲ’ ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ತಮ್ಮ ಚೊಚ್ಚಲ ಬಜೆಟ್ ಮಂಡನೆ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸಂಪುಟ ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರ ಸರಕಾರ ಘೋಷಿಸಿದ್ದ ಎಲ್ಲ ಯೋಜನೆಗಳು ಮುಂದುವರಿಯಲಿವೆ. ಹೀಗಾಗಿ ಯಾವುದೇ ಜಿಲ್ಲೆಗೆ ಅನ್ಯಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಆಯವ್ಯಯ ಬಗ್ಗೆ ಅನ್ಯಥಾ ಭಾವಿಸಬೇಕಿಲ್ಲ. ಹಿಂದಿನ ಸರಕಾರದ ಬಜೆಟ್‌ನ ಯೋಜನೆಗಳ ಜೊತೆ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಮೈತ್ರಿ ಸರಕಾರದ ಎರಡೂ ಪಕ್ಷಗಳ ಪ್ರಣಾಳಿಕೆಯ ಯೋಜನೆಗಳ ಆಯವ್ಯಯ ಇದಾಗಿದೆ ಎಂದು ಅವರು ತಿಳಿಸಿದರು.

ಗಾತ್ರ ಹೆಚ್ಚಳ : ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ 2,09,181 ಕೋಟಿ ರೂ.ಆಗಿತ್ತು. ಇದೀಗ ಅದು 2,18,488 ಕೋಟಿ ರೂ.ಗಳಾಗಿದ್ದು ಒಟ್ಟಾರೆ 9,307 ಕೋಟಿ ರೂ. ಹೆಚ್ಚುವರಿಯಾಗಿ ಮಂಡಿಸಲಾಗಿದೆ. ಆಯವ್ಯಯ ಸಂಪೂರ್ಣ ಶಾಸನಬದ್ಧವಾಗಿದ್ದು ಆರ್ಥಿಕ ನಿಯವಳಿಗಳಾನುಸಾರ ಕ್ರಮಬದ್ಧವಾಗಿದೆ ಎಂದು ಸಮರ್ಥಿಸಿಕೊಂಡರು.

ರೈತರ 2ಲಕ್ಷ ರೂ.ವರೆಗಿನ ಬೆಳೆ ಸಾಲಮನ್ನಾದಿಂದ 34ಸಾವಿರ ಕೋಟಿ ರೂ. ಗಳೆಂದು ಅಂದಾಜಿಸಲಾಗಿದೆ. ಪಡೆದ ಸಾಲವನ್ನು ಹಿಂತಿರುಗಿಸಿ ಬ್ಯಾಂಕ್‌ನೊಂದಿಗೆ ಉತ್ತಮ ವ್ಯವಹಾರವನ್ನು ಹೊಂದಿರುವ ರೈತರಿಗೆ 25 ಸಾವಿರ ರೂ.ಪ್ರೋತ್ಸಾಹದ ರೂಪದಲ್ಲಿ ನೀಡಲಾಗುವುದು.

ಬೆಂಗಳೂರು ನಗರಕ್ಕೆ ಎಲೆವೇಟೆಡ್ ರಸ್ತೆ ನಿರ್ಮಾಣಕ್ಕೆ 15,825 ಕೋಟಿ ರೂ. ಮೊತ್ತದ ಯೋಜನೆಯನ್ನು ಘೋಷಿಸಿದ್ದು, ಮುಂದಿನ 4 ವರ್ಷಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಿದ್ದೇವೆ ಎಂದ ಅವರು, ಇದು ನಮ್ಮ ಬದ್ಧತೆ. ಇದು ಸಮಗ್ರ ಕರ್ನಾಟಕದ ಬಜೆಟ್ ಎಂದು ಹೇಳಿದರು.

ನಯಾಪೈಸೆ ಕೊಡಿಸುವ ಯೋಗ್ಯತೆ ಇಲ್ಲ: ರಾಜ್ಯದ ರೈತರ 34 ಸಾವಿರ ಕೋಟಿ ರೂ.ಸಾಲಮನ್ನಾ ಘೋಷಣೆ ಮಾಡಿದ್ದು, ಬಿಜೆಪಿ ಕನಿಷ್ಠ ಕೃತಜ್ಞತೆ ಸಲ್ಲಿಸುವ ಸೌಜನ್ಯ ಅವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಕೇಂದ್ರದಿಂದ ರೈತರ ಸಾಲಮನ್ನಾಕ್ಕೆ ನಯಾಪೈಸೆ ಅನುದಾನ ಕೊಡಿಸುವ ಯೋಗ್ಯತೆ ಇವರಿಗಿಲ್ಲ ಎಂದು ಕೆಂಡಕಾರಿದರು. ಬ್ಯಾಂಕುಗಳ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಬಾಂಡ್ ಮೂಲಕ ಸಂಗ್ರಹಿಸುತ್ತಿರುವ 2 ಲಕ್ಷ ಕೋಟಿ ರೂ.ಗಳ ಪೈಕಿ ಸಾಲಮನ್ನಾಕ್ಕೆ 25 ಸಾವಿರ ಕೋಟಿ ರೂ.ನೆರವು ನೀಡಿ ಎಂದು ಪ್ರಧಾನಿ ಮೋದಿಗೆ ನಾನೇ ಮನವಿ ಮಾಡಿದ್ದೇ. ಆದರೆ, ಅವರು ಈ ಬಗ್ಗೆ ಏನೂ ಮಾತನಾಡಲಿಲ್ಲ ಎಂದು ಟೀಕಿಸಿದರು.

ಋಣಮುಕ್ತ ಪತ್ರ: ಈಗಾಗಲೇ ಬ್ಯಾಂಕುಗಳ ಜೊತೆ ಚರ್ಚೆ ನಡೆಸಿದ್ದು, ರೈತರಿಗೆ ಋಣಮುಕ್ತ ಪತ್ರ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದ ಅವರು, ಹಿಂದಿನ ಸರಕಾರ ಘೋಷಿಸಿದ್ದ ಸಾಲಮನ್ನಾ ಬಾಕಿ 10,650 ಕೋಟಿ ರೂ.ಒದಗಿಸಲಾಗುವುದು ಎಂದು ತಿಳಿಸಿದರು.

ರೈತರ ಸಾಲಮನ್ನಾದ ಎಲ್ಲ ಮೊತ್ತವನ್ನು ಒಮ್ಮೆಗೆ ಬಿಡುಗಡೆ ಮಾಡುವುದಿಲ್ಲ. ಒಟ್ಟು ನಾಲ್ಕು ಹಂತಗಳಲ್ಲಿ ಬಿಡುಗಡೆ ಮಾಡಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಸಾಲಮನ್ನಾ ಆಗಲಿದೆ ಎಂದ ಅವರು, ಸಾಲಮನ್ನಾ ಕೇವಲ ಘೋಷಣೆಯಲ್ಲ. ಇದು ನಮ್ಮ ಬದ್ಧತೆ ಎಂದು ಪ್ರಕಟಿಸಿದರು.

ಬೇಡ ಎಂದರೆ ವಾಪಸ್: ಹಾಸನದಲ್ಲಿ 30 ಕೋಟಿ ರೂ.ವೆಚ್ಚದಲ್ಲಿ ವರ್ತುಲ ರಸ್ತೆ ನಿರ್ಮಾಣ ಯೋಜನೆಗೆ ಹಾಸನ ನಗರ ಕ್ಷೇತ್ರದ ಬಿಜೆಪಿ ಶಾಸಕರು ವಿರೋಧ ಇರುವುದಾದರೆ ಕೂಡಲೇ ಆ ಯೋಜನೆ ಹಿಂಪಡೆಯುವ ಎಂದು ಎಚ್ಚರಿಸಿದ ಕುಮಾರಸ್ವಾಮಿ, ಬಿಜೆಪಿಯವರ ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದು ಟೀಕಿಸಿದರು.

ನಾವೇನು ಹಣ ಪ್ರಿಂಟ್ ಮಾಡ್ತೀವಾ: ಈ ಹಿಂದೆ ರೈತರ ಸಾಲಮನ್ನಾ ಬಗ್ಗೆ ನಾನೇನು ಪ್ರಿಂಟಿಂಗ್ ಮಿಷಿನ್ ಇಟ್ಟುಕೊಂಡಿಲ್ಲ ಎಂದಿದ್ದರು. ಇದೀಗ ನಾನು ಮತ್ತು ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್ ಅವರು ಹಣ ಪ್ರಿಂಟಿಂಗ್ ಮಾಡ್ತೀವಾ ಎಂದು ಖಾರವಾಗಿ ಪ್ರಶ್ನಿಸಿದರು.

ಹಿಂದಿನ ಸರಕಾರದ ಯೋಜನೆಗಳಲ್ಲಿ ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಭಾಗಕ್ಕೂ ಆದ್ಯತೆ ನೀಡಿದೆ. ಅಲ್ಲದೆ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಕಲಬುರಗಿ ಯಾವ ಜಿಲ್ಲೆಯನ್ನೂ ಮರೆತಿಲ್ಲ. ಆದರೆ, ಬಿಜೆಪಿಯವರಿಗೆ ಕಾಮಾಲೆ ಕಣ್ಣು ಎಂದು ಲೇವಡಿ ಮಾಡಿದರು.

ದಿಲ್ಲಿಯಲ್ಲಿ ಮೇಜು ಕುಟ್ಟಲಿಲ್ಲ: ಸರಕಾರ ತೆರಿಗೆ ಏರಿಕೆ ಮಾಡಿದ ಬಳಿಕವೂ ಪೆಟ್ರೋಲ್, ಡಿಸೇಲ್ ಬೆಲೆ ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಕಡಿಮೆ ಇದೆ. ಆದರೂ ಬಿಜೆಪಿ ಸದಸ್ಯರು ಮೇಜು ಕುಟ್ಟುತ್ತಾರೆ. ಬಜೆಟ್ ಚರ್ಚೆ ವೇಳೆ ಇದಕ್ಕೆ ಉತ್ತರ ನೀಡುವೆ ಎಂದು ಕುಮಾರಸ್ವಾಮಿ ಸವಾಲು ಹಾಕಿದರು. ಕೇಂದ್ರದ ಮೋದಿ ಸರಕಾರ ಒಟ್ಟು ಶೇ.238 ರಷ್ಟು ಇಂಧನ ಬೆಲೆ ಏರಿಕೆ ಮಾಡಿದೆ. ಆಗ ದಿಲ್ಲಿಯಲ್ಲಿನ ಬಿಜೆಪಿಯ ಯಾವೊಬ್ಬ ನಾಯಕರೂ ಮೇಜು ಕುಟ್ಟಲಿಲ್ಲ. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ವೇಳೆ ವ್ಯಾಟ್ ದರ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿದ್ದ ಎಂಬುದನ್ನು ಹೇಳಬೇಕು. ಹೀಗಾಗಿ ಬಿಜೆಪಿಯವರಿಂದ ತಾನು ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

ಆ ಚಕ್ರವರ್ತಿ ಕೊಡುಗೆ ಏನು: ಈ ಹಿಂದೆ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ ಅಶೋಕ ಚಕ್ರವರ್ತಿಯಿಂದ ಬೆಂಗಳೂರಿಗೆ ನೀಡಿದ ಕೊಡುಗೆ ಏನು ಎಂಬುದನ್ನು ಹೇಳಬೇಕು ಎಂದು ಪ್ರಶ್ನಿಸಿದ ಅವರು, ಬೆಂಗಳೂರು ನಗರದ ಅಭಿವೃದ್ಧಿಗೆ ನಮ್ಮ ಸರಕಾರ ವಿಶೇಷ ಆಸ್ಥೆ ವಹಿಸಿದೆ. ಕನಿಷ್ಠ ಎರಡು ತಿಂಗಳಾದರೂ ಕಾಲಾವಕಾಶ ನೀಡಿ ಎಂದು ಕುಮಾರಸ್ವಾಮಿ ವಿಪಕ್ಷ ಬಿಜೆಪಿಗೆ ಮನವಿ ಮಾಡಿದರು.

‘ಸಾಲಮನ್ನಾ, ಹಣಕಾಸಿನ ಹೊಂದಾಣಿಕೆ ಏರಿಳಿತಗಳ ನಡುವೆಯೂ ಕೊರತೆ ಬಜೆಟ್ ಬದಲಿಗೆ ಹೆಚ್ಚುವರಿ ಆಯವ್ಯಯ ಮಂಡನೆ ಮಾಡಿದ್ದು, ನನಗೆ ಬಿಜೆಪಿ ಸರ್ಟಿಫಿಕೆಟ್‌ಗಿಂತ ಜನತೆ ಮೆಚ್ಚುಗೆ ಪತ್ರ ಬೇಕು. ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಬಿಜೆಪಿಯವರನ್ನು ನಂಬುವುದು ಬೇಡ. ಬಜೆಟ್ ಅನುಷ್ಟಾನ ಮೈತ್ರಿ ಸರಕಾರದ ಬದ್ಧ, ಸಂಶಯ ಬೇಡ’
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News