ವಿದ್ಯಾರ್ಥಿನಿಯರ ಶೌಚಾಲಯ ವೀಡಿಯೊ ವೈರಲ್: ಪ್ರಾಚಾರ್ಯೆ ಬಂಧನ

Update: 2018-07-06 03:39 GMT

ಗೋರಖ್‌ಪುರ, ಜು. 6: ವಿದ್ಯಾರ್ಥಿನಿಯರು ಶಾಲಾ ಶೌಚಾಲಯದಲ್ಲಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲೆ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ.

ಸಮೀಪದ ಮಹಾರಾಜಗಂಜ್ ಪಟ್ಟಣದ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆ ಆರಂಭಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಎಸ್ಪಿ ಅಶುತೋಶ್ ಶುಕ್ಲಾ ಹೇಳಿದ್ದಾರೆ. ತಕ್ಷಣ ಪೊಲೀಸರು ಶಾಲೆಗೆ ಭೇಟಿ ನೀಡಿ ಪ್ರಾಚಾರ್ಯೆ, ಆಕೆಯ ಸಹೋದರ ಹಾಗೂ ಶಾಲೆಯಿಂದ ಹೊರಹಾಕಲ್ಪಟ್ಟ ಇಬ್ಬರು ಶಿಕ್ಷಕರನ್ನು ಬಂಧಿಸಿದ್ದಾರೆ. ಶಾಲೆಯ ಪ್ರಾಂಶುಪಾಲೆಯೇ ಶಾಲೆಯ ಮಾಲಕಿ ಎಂದು ಶುಕ್ಲಾ ಸ್ಪಷ್ಟಪಡಿಸಿದ್ದಾರೆ. ಐಟಿ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

"ಪ್ರಾಚಾರ್ಯೆಯ ಸಹೋದರ ಆರು ತಿಂಗಳ ಹಿಂದೆ ಹೆಣ್ಣುಮಕ್ಕಳ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿದ್ದ. ಇದನ್ನು ಪತ್ತೆ ಮಾಡಿದ ಇಬ್ಬರು ಶಿಕ್ಷಕರು ಅಲ್ಲಿನ ವೀಡಿಯೊ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಇದನ್ನು ಬಹಳಷ್ಟು ಮಂದಿ ನೋಡಿರಲಿಲ್ಲ. ಶಾಲಾ ಆಡಳಿತ ಅವರನ್ನು ಹೊರಹಾಕಿತ್ತು. ಆ ಇಬ್ಬರು ಶಿಕ್ಷಕರು ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊಗಳನ್ನು ಹಾಕಿದ್ದರಿಂದ ಪ್ರಚಾರವಾಯಿತು ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ" ಎಂದು ವಿವರಿಸಿದ್ದಾರೆ.

ಆದರೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಪ್ರಾಚಾರ್ಯೆ, ಕ್ಯಾಮೆರಾ ಅಳವಡಿಸಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡಿ, ತಪ್ಪಿತಸ್ಥರನ್ನು ಹಿಡಿಯಲು ಸಹಕರಿಸುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News