ಮುಖ್ಯ ನ್ಯಾಯಮೂರ್ತಿಗಳೇ 'ಮಾಸ್ಟರ್ ಆಫ್ ದಿ ರೋಸ್ಟರ್': ಸುಪ್ರೀಂ ಕೋರ್ಟ್ ತೀರ್ಪು

Update: 2018-07-06 06:29 GMT

ಹೊಸದಿಲ್ಲಿ, ಜು.6: ಮುಖ್ಯ ನ್ಯಾಯಮೂರ್ತಿಗಳು 'ಮಾಸ್ಟರ್ ಆಫ್ ದಿ ರೋಸ್ಟರ್' ಆಗಿದ್ದು, ವಿವಿಧ ಪ್ರಕರಣಗಳನ್ನು ವಿವಿಧ ಪೀಠಗಳಿಗೆ ವಹಿಸುವ ಅಧಿಕಾರ ಹೊಂದಿದ್ದಾರೆಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ.

ವಿವಿಧ ಪ್ರಕರಣಗಳನ್ನು ವಿವಿಧ ಪೀಠಗಳಿಗೆ ವಹಿಸುವ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ಹಿರಿಯ ನ್ಯಾಯಾಧೀಶರುಗಳ ಸಮಿತಿಯೊಂದಕ್ಕೆ ನೀಡಬೇಕು ಎಂದು ಕೋರಿ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಅವರು ಸಲ್ಲಿಸಿರುವ ಅಪೀಲಿನ ಮೇಲಿನ ವಿಚಾರಣೆ ನಡೆಸಿದ ನ್ಯಾಯಾಲಯ ಮೇಲಿನಂತೆ ತೀರ್ಪು ನೀಡಿದೆ.

ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸರಕಾರ ಶಾಂತಿ ಭೂಷಣ್ ಅವರ ಅಪೀಲಿಗೆ ತನ್ನ  ವಿರೋಧ ವ್ಯಕ್ತಪಡಿಸಿ ಇದು ಗೊಂದಲಕ್ಕೆ ಕಾರಣವಾಗಬಹುದೆಂದು ಹೇಳಿತ್ತು.

ಜನವರಿಯಲ್ಲಿ ಸುಪ್ರೀಂ ಕೋರ್ಟಿನ ನಾಲ್ಕು ಮಂದಿ ಹಿರಿಯ ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಸಿಡಿದೆದ್ದು, ಬಹಿರಂಗವಾಗಿ ಈ ವರ್ಷದ ಜನವರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಂತರದ ಬೆಳವಣಿಗೆಯಲ್ಲಿ ಎಪ್ರಿಲ್ ತಿಂಗಳಲ್ಲಿ ಕೂಡ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಕೂಡ ಮುಖ್ಯ ನ್ಯಾಯಮೂರ್ತಿಯೇ 'ಮಾಸ್ಟರ್ ಆಫ್ ದಿ ರೋಸ್ಟರ್' ಎಂದು ಹೇಳಿ ನಾಲ್ಕು ಮಂದಿ ಹಿರಿಯ ನ್ಯಾಯಾಧೀಶರು ಎತ್ತಿದ ಆಕ್ಷೇಪಣೆಗೆ ತನ್ನ ಉತ್ತರ ನೀಡಿತ್ತು.

ಶಾಂತಿ ಭೂಷಣ್ ತಮ್ಮ ಅಪೀಲಿನಲ್ಲಿ ಮಾಸ್ಟರ್ ಆಫ್ ದಿ ರೋಸ್ಟರ್ ತನ್ನ ವಿವೇಚನಾಧಿಕಾರವನ್ನು ಸ್ವೇಚ್ಛಾಚಾರದಿಂದ ಉಪಯೋಗಿಸಿ ಕೆಲವೊಂದು ನಿರ್ದಿಷ್ಟ ಪ್ರಕರಣಗಳನ್ನು ನಿರ್ದಿಷ್ಟ ಪೀಠಕ್ಕೆ ನೀಡುವಂತಾಗಬಾರದು ಎಂದಿದ್ದರು.

ನ್ಯಾಯಾಧೀಶರುಗಳ ನಡುವೆ  ಒಗ್ಗಟ್ಟು ಅಗತ್ಯವಾಗಿದ್ದು  ಶಾಂತಿ ಭೂಷಣ್ ಅವರ ಮನವಿಯನ್ನು ಒಪ್ಪಿದಲ್ಲಿ ಯಾರು ಯಾವ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕೆಂಬುದರ ಬಗ್ಗೆ ನ್ಯಾಯಾಧೀಶರುಗಳಲ್ಲಿ ಗೊಂದಲವೇರ್ಪಡುವ ಸಾಧ್ಯತೆಯಿದೆ. ಆದುದರಿಂದ ಈ ಕಾರ್ಯವನ್ನು ಸಿಜೆಐ ಒಬ್ಬರೇ ಮಾಡಬೇಕು. ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಹೇಳಿದ್ದರು.

ಶಾಂತಿ ಭೂಷಣ್  ಅವರ ಪರವಾಗಿ ದುಷ್ಯಂತ ದವೆ ಮತ್ತು ಪ್ರಶಾಂತ್  ಭೂಷಣ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News