ಥಾಯ್ಲೆಂಡ್ ಗುಹೆಯಲ್ಲಿ ಮುಳುಗುಗಾರ ಮೃತ

Update: 2018-07-06 15:23 GMT

ಬ್ಯಾಂಕಾಕ್ (ಥಾಯ್ಲೆಂಡ್), ಜು. ೬: ಥಾಯ್ಲೆಂಡ್‌ನ ಮೇ ಸಾಯಿಯಲ್ಲಿರುವ ಪ್ರವಾಹಪೀಡಿತ ಗುಹೆಯೊಂದರ ಒಳಗೆ ಸಿಕ್ಕಿಹಾಕಿಕೊಂಡಿರುವ 12 ಬಾಲಕರು ಮತ್ತು ಅವರ ಫುಟ್ಬಾಲ್ ಕೋಚ್‌ನ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ ಥಾಯ್ಲೆಂಡ್ ಸೇನೆಯ ಮಾಜಿ ಮುಳುಗುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಅನಿರೀಕ್ಷಿತ ಘಟನೆಯಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ.

ಗುಹೆಯ ಇದೇ ದಾರಿಯಲ್ಲಿ ಬಾಲಕರು ಮತ್ತು ಅವರ ಕೋಚನ್ನು ಹೊರಗೆ ತರುವ  ಯೋಜನೆಯ ಕಾರ್ಯಸಾಧುತ್ವದ ಬಗ್ಗೆಯೂ ಪ್ರಶ್ನೆಗಳು ಹುಟ್ಟಿಕೊಂಡಿವೆ.

11 ಮತ್ತು 16 ವರ್ಷಗಳ ನಡುವಿನ ಬಾಲಕರಲ್ಲಿ ಹೆಚ್ಚಿನವರಿಗೆ ಈಜಲು ಗೊತ್ತಿಲ್ಲ ಹಾಗೂ ನೀರಿನೊಳಗೆ ಮುಳುಗಿ ಚಲಿಸುವ ಅಭ್ಯಾಸವೂ ಇಲ್ಲ. ಹಾಗಾಗಿ, ಇಂಥ ಪರಿಸ್ಥಿತಿಯಲ್ಲಿ ಅವರನ್ನು ಹೇಗೆ ಹೊರತರುವುದು ಎನ್ನುವ ಗಂಭೀರ ಚಿಂತೆ ಎಲ್ಲರನ್ನೂ ಕಾಡುತ್ತಿದೆ.

‘‘ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಮುಂದೆ ಬಂದ ನೌಕಾಪಡೆಯ ಮಾಜಿ ಮುಳುಗುಗಾರರೊಬ್ಬರು ಶುಕ್ರವಾರ ಮುಂಜಾನೆ 2 ಗಂಟೆಗೆ ಮೃತಪಟ್ಟಿದ್ದಾರೆ’’ ಎಂದು ಚಿಯಾಂಗ್ ರೈ ಪ್ರಾಂತದ ಡೆಪ್ಯುಟಿ ಗವರ್ನರ್ ಪಸಕಾರ್ನ್ ಬೂನ್ಯಲಕ್ ಗುಹೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಅವರು ಥಾಮ್ ಲುವಾಂಗ್ ಗುಹೆಯಿಂದ ಹೊರಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.

‘‘ಅವರು ಹೊರಗೆ ಬರುತ್ತಿದ್ದಾಗ ಪ್ರಜ್ಞೆ ತಪ್ಪಿದರು. ಅವರನ್ನು ಹೊರಗೆ ತರಲು ಅವರ ಸ್ನೇಹಿತ ಪ್ರಯತ್ನಿಸಿದರು’’ ಎಂದರು.

 11 ತಾಸುಗಳ ಸುದೀರ್ಘ ಗುಹಾ ಪ್ರಯಾಣ!

ಈ ಮುಳುಗುಗಾರರು ಆಮ್ಲಜನಕದ ಸಿಲಿಂಡರ್‌ಗಳನ್ನು ತರಲು ಹಾಗೂ ಮುಂಚೂಣಿ ಕಾರ್ಯಾಚರಣೆ ನೆಲೆ ಹಾಗೂ ಮಕ್ಕಳು ಮತ್ತು ಕೋಚ್ ಆಶ್ರಯ ಪಡೆದಿರುವ ಕೆಸರಿನ ದಿಬ್ಬಗಳ ನಡುವಿನ ದಾರಿಯಲ್ಲಿ ಗುರುತುಗಳನ್ನು ಸ್ಥಾಪಿಸಲು ಹೋಗಿದ್ದರು.

ಗುಹೆಯ ಹೊರಗಿನಿಂದ ಒಳಗೆ ಮಕ್ಕಳು ಮತ್ತು ಕೋಚ್ ಇದ್ದಲ್ಲಿಗೆ ಹೋಗಿ ಹಿಂದಕ್ಕೆ ಬರಲು ಅನುಭವಿ ಮುಳುಗುಗಾರರಿಗೂ ೧೧ ತಾಸುಗಳ ಬೇಕು.

2 ವಾರಗಳಿಂದ ಗುಹೆಯ ಒಳಗಿರುವ ತಂಡ

‘ವೈಲ್ಡ್ ಬೋರ್ಸ್’ ತಂಡವು ಎರಡು ವಾರಗಳ ಹಿಂದೆ ಫುಟ್ಬಾಲ್ ಅಭ್ಯಾಸದ ಬಳಿಕ ಗುಹೆಯ ಒಳಗೆ ಹೋದ ಬಳಿಕ ಹಿಂದೆ ಬಂದಿಲ್ಲ. ಆ ವೇಳೆಗೆ ಸುರಿದ ಭಾರೀ ಮಳೆಯಿಂದಾಗಿ ಉಕ್ಕಿದ ಪ್ರವಾಹದ ನೀರು ಗುಹೆಯ ಒಳಗೆ ಪ್ರವೇಶಿಸಿತ್ತು.

ಸೋಮವಾರ ಇಂಗ್ಲೆಂಡ್‌ನ ಮುಳುಗುಗಾರರ ತಂಡವೊಂದು ಗುಹೆಯನ್ನು ಪ್ರವೇಶಿಸಿ ಗುಂಪನ್ನು ಪತ್ತೆಹಚ್ಚಿತ್ತು. ಅಲ್ಲಿ ಪ್ರತಿದಿನ ಭಾರೀ ಮಳೆ ಸುರಿಯುತ್ತಿದ್ದು ಅವರನ್ನು ಹೊರಗೆ ತರುವುದು ಭಾರೀ ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ.

ಅನುಭವಿ ಮುಳುಗುಗಾರರೇ ಸತ್ತಿರುವಾಗ....

ಅನುಭವಿ ಮುಳುಗುಗಾರರಿಗೇ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗದಿರುವಾಗ ಬಾಲಕರು ಹೇಗೆ ಹೊರಬರಲು ಸಾಧ್ಯ ಎಂಬ ಪ್ರಶ್ನೆಗೆ, ಮಕ್ಕಳಿಗಾಗಿ ತಾವು ಹೆಚ್ಚಿನ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಥಾಯ್ ಸೀಲ್ ಕಮಾಂಡರ್ ಅಪಾಕೋರ್ನ್ ಯೂಕಾಂಗ್‌ಕೇವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News