ಫಿಫಾ ವಿಶ್ವಕಪ್: ಬೆಲ್ಜಿಯಂ ಬಿರುಗಾಳಿಗೆ ಬ್ರೆಝಿಲ್ ತಂಡ ಔಟ್

Update: 2018-07-07 02:30 GMT

ರಷ್ಯಾ, ಜು. 7: ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದ ಬೆಲ್ಜಿಯಂ, ಫಿಫಾ ವಿಶ್ವಕಪ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ 2-1 ಜಯ ಸಾಧಿಸುವ ಮೂಲಕ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಎದುರಿಸುವ ಅರ್ಹತೆ ಪಡೆದುಕೊಂಡಿದೆ.

ಕೊನೆಕ್ಷಣದಲ್ಲಿ ಬ್ರೆಝಿಲ್ ಪ್ರತಿರೋಧ ತೋರಿದರೂ ಕಾಲ ಮಿಂಚಿತ್ತು. ಫೆರ್ನಾಂಡಿನೊ ಅವರ ಆರಂಭಿಕ ಗೋಲು ಹಾಗೂ ಕೆವಿನ್ ಡಿ ಬ್ರಿಯಾನ್ ಅವರ ಅದ್ಭುತ ಗೋಲುಗಳು 1986ರ ಬಳಿಕ ಎರಡನೇ ಬಾರಿಗೆ ಬೆಲ್ಜಿಯಂ ತಂಡ ಅಂತಿಮ ನಾಲ್ಕರ ಘಟ್ಟ ತಲುಪಲು ನೆರವಾಯಿತು. ನಾಲ್ಕು ವಿಶ್ವಕಪ್ ಟೂರ್ನಿಗಳ ಕ್ವಾರ್ಟರ್ ಫೈನಲ್ ಹಂತದಲ್ಲಿ ಮೂರನೇ ಬಾರಿಗೆ ಬ್ರೆಝಿಲ್ ತಂಡವನ್ನು ಮನೆಗೆ ಕಳುಹಿಸಿದ ಸಾಧನೆ ಮಾಡಿತು.

ಪಂದ್ಯದುದ್ದಕ್ಕೂ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಬ್ರೆಝಿಲ್ಗೆ ಗೋಲು ಗಳಿಸುವ ಅವಕಾಶಗಳು ಮೇಲಿಂದ ಮೇಲೆ ಬಂದರೂ, ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸುವಲ್ಲಿ ಬ್ರೆಝಿಲ್ ಆಟಗಾರರು ವಿಫಲರಾದರು. ಪಂದ್ಯ ಮುಗಿಯಲು 14 ನಿಮಿಷ ಇದ್ದಾಗ ಬದಲಿ ಆಟಗಾರ ರೆನಾಟೊ ಆಗಸ್ಟೊ ಅವರು ಫಿಲಿಫ್ ಕುಟಿನ್ಹೊ ಅವರ ಕ್ರಾಸ್ ಹೊಡೆತವನ್ನು ಗೋಲಾಗಿ ಪರಿವರ್ತಿಸಿದರು.

ಕಝಾನ್ ಅರಾನಾದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳ ಬೆಂಬಲದಿಂದ ಉತ್ತೇಜಿತರಾದ ಬ್ರೆಝಿಲಿಯನ್ನರು ಪಂದ್ಯ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ರೊಬೆರ್ಟೊ ಫಿರ್ಮಿನೊಮ ಆಗಸ್ಟೊ ಮತ್ತು ಕುಟಿನೊ ಸ್ಕೋರ್ ಸಮಗೊಳಿಸುವ ಅವಕಾಶಗಳನ್ನು ಕೈಚೆಲ್ಲಿದರು.

13ನೇ ನಿಮಿಷದಲ್ಲಿ ಬೆಲ್ಜಿಯಂ ಅದೃಷ್ಟದ ಗೋಲು ಗಳಿಸಿತು. ಫೆನಾಂಡಿನೊ ಅವರ ಭುಜದ ಬಳಿಯಿಂದ ಚೆಂಡು ನೆಟ್‌ನ ಮೂಲೆ ಸೇರಿತು. ಆದರೆ 31ನೇ ನಿಮಿಷಲ್ಲಿ ಗಳಿಸಿದ 2ನೇ ಗೋಲು ಫುಟ್‌ಬಾಲ್‌ನ ಪ್ರತಿಹೋರಾಟದ ಅದ್ಭುತ ನಿದರ್ಶನ ಎಂಬಂತಿತ್ತು. ಬೆಲ್ಜಿಯಂ ಗೋಲ್‌ ಕೀಪರ್ ಥಿಬಾಟ್ ಕರ್ಟೊಯಿಸ್ ಅದ್ಭುತ ಪ್ರದರ್ಶನ ನೀಡಿ ಹಲವು ಸಂಭಾವ್ಯ ಗೋಲುಗಳನ್ನು ತಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News