ವಾರೆನ್ ಬಫೆಟ್ ಹಿಂದಿಕ್ಕಿ ವಿಶ್ವದ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಾರ್ಕ್ ಝುಕರ್‌ಬರ್ಗ್

Update: 2018-07-07 06:57 GMT

ನ್ಯೂಯಾರ್ಕ್, ಜು. 7 : ವಿಶ್ವದ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಅಮೆರಿಕಾದ ಖ್ಯಾತ ಉದ್ಯಮಿ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ಆ ಸ್ಥಾನವನ್ನು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಆಕ್ರಮಿಸಿದ್ದಾರೆ.

ಶುಕ್ರವಾರ ಫೇಸ್ ಬುಕ್ ಶೇರುಗಳ ಬೆಲೆ ಶೇ 2.4ರಷ್ಟು ಏರಿಕೆಯಾಗುತ್ತಿದ್ದಂತೆಯೇ ಝುಕರ್‌ಬರ್ಗ್ ಅವರು ಬಫೆಟ್ ಅವರನ್ನು ಹಿಂದಿಕ್ಕಿದ್ದು ಸದ್ಯ ಅವರು ಮೊದಲ ಎರಡು ಸ್ಥಾನಗಳಲ್ಲಿರುವ ಅಮೆಝಾನ್ ಸ್ಥಾಪಕ ಜೆಫ್ ಬೆಝೋಸ್ ಹಾಗೂ ಮೈಕ್ರೊಸಾಫ್ಟ್ ಸಹಸ್ಥಾಪಕ ಬಿಲ್ ಗೇಟ್ಸ್ ಅವರಿಗಿಂತ ಮಾತ್ರ ಹಿಂದಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ತಿಳಿಸಿದೆ.

ಇದೇ ಪ್ರಥಮ ಬಾರಿಗೆಂಬಂತೆ ತಂತ್ರಜ್ಞಾನ ಕ್ಷೇತ್ರಕ್ಕೆ ಸೇರಿರುವ ಮೂವರು ವಿಶ್ವದ ಪ್ರಥಮ ಮೂರು ಅತ್ಯಂತ ಶ್ರೀಮಂತ ವ್ಯಕ್ತಿಗಳಾಗಿದ್ದಾರೆ. ಝುಕರ್‌ಬರ್ಗ್ ಅವರ ಒಟ್ಟು ಆಸ್ತಿ ಮೌಲ್ಯ ಈಗ 81.6 ಬಿಲಿಯನ್ ಡಾಲರ್ ಆಗಿದ್ದು ಇದು ಬಫೆಟ್ ಅವರ ಒಟ್ಟು ಸಂಪತ್ತಿಗಿಂತ 373 ಮಿಲಿಯನ್ ಡಾಲರ್ ಅಧಿಕವಾಗಿದೆ. ಎಂಬತ್ತೇಳು ವರ್ಷದ ಬಫೆಟ್ ಅವರು ಬರ್ಕ್‌ಶೈರ್ ಹಾಥ್‌ವೇ ಇಂಕ್ ಇದರ ಅಧ್ಯಕ್ಷ ಹಾಗೂ ಸಿಇಒ ಆಗಿದ್ದಾರೆ.

ಮಾರ್ಚ್ ತಿಂಗಳಲ್ಲಿ ಫೇಸ್ ಬುಕ್ ಅನ್ನು ಕಾಡಿದ್ದ ಡಾಟಾ ಪ್ರೈವೆಸಿ ವಿವಾದದ ಸಂದರ್ಭ ಕಂಪೆನಿಯ ಶೇರುಗಳ ಬೆಲೆ 152.22 ಡಾಲರಿಗೆ ಕುಸಿದಿತ್ತು. ಶುಕ್ರವಾರ ಮಾರುಕಟ್ಟೆ ಮುಕ್ತಾಯ ಸಂದರ್ಭ ಫೇಸ್ ಬುಕ್ ಶೇರು ಬೆಲೆ ದಾಖಲೆ ರೂ 203.23 ತಲುಪಿತ್ತು.

ಒಮ್ಮೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ ಬಫೆಟ್ ಅವರು ತಮ್ಮ ಸಂಸ್ಥೆಯ 290 ಮಿಲಿಯನ್ ಶೇರುಗಳನ್ನು ಬಿಲ್ ಗೇಟ್ಸ್ ಫೌಂಡೇಶನ್ನಿಗೆ ದಾನ ಮಾಡಿದ್ದು ಅವುಗಳ ಈಗಿನ ಬೆಲೆ 50 ಬಿಲಿಯನ್ ಡಾಲರ್ ಗೂ ಅಧಿಕವಾಗಿದೆ. ಅವರ ಸಮಾಜಮುಖಿ ದೇಣಿಗೆಗಳಿಂದಲೇ ಅವರಲ್ಲಿರುವ ಆಸ್ತಿ ಪ್ರಮಾಣ ಕುಸಿಯುತ್ತಿದೆ. ಫೇಸ್ ಬುಕ್ ಸ್ಥಾಪಕ ಕೂಡ ತಮ್ಮ ಜೀವಿತಾವಧಿಯಲ್ಲಿ ಸಂಸ್ಥೆಯ ಶೇ 99ರಷ್ಟು ಶೇರುಗಳನ್ನು ದಾನ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News