ವಿವಾಹದ ವಿಡಿಯೋ ಶೂಟ್ ವೇಳೆ ಮುರಿದು ಬಿದ್ದ ಮರದ ರೆಂಬೆ: ನವದಂಪತಿ ಅದೃಷ್ಟವಶಾತ್ ಪಾರು

Update: 2018-07-09 11:58 GMT

ನ್ಯೂಯಾರ್ಕ್, ಜು.9: ನಗರದ ಫ್ರೆಡೋನಿಯಾ ಎಂಬಲ್ಲಿ ತಮ್ಮ ವಿವಾಹದ ನಂತರ ವೀಡಿಯೋ ಶೂಟ್ ನಲ್ಲಿ ಭಾಗವಹಿಸುತ್ತಿದ್ದ ದಂಪತಿ ಮರವೊಂದರ ದೊಡ್ಡ ಗೆಲ್ಲೊಂದು ತಮ್ಮ ಮೇಲೆ ಬೀಳುವುದರಿಂದ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡಿದ್ದಾರೆ. ಈ ಘಟನೆಯ ವೀಡಿಯೋವೊಂದನ್ನು ಫ್ರೆಡ್ಡಿ ಹೆರ್ನಾಂಡೆಝ್ ಫೊಟೋಗ್ರಾಫಿ ಆ್ಯಂಡ್ ಮೀಡಿಯಾ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಅದಕ್ಕೆ `ನ್ಯೂಲಿ ವೆಡ್ಸ್ ನಿಯರ್ ಡೆತ್ ಎಕ್ಸ್‍ಪೀರಿಯನ್ಸ್' ಎಂದು ಶೀರ್ಷಿಕೆ ನೀಡಿದ್ದಾರೆ.

ತಮ್ಮ ಪ್ರೇಮ ಕಥೆಯನ್ನು ನವದಂಪತಿಗಳಾದ ಚೆಯೆನ್ನ್ ಹಾಗೂ ಲುಕಸ್ ಕೊಪೆಸ್ಚೆಕ ತಮ್ಮ ವಿವಾಹದ ವೀಡಿಯೋಗಾಗಿ ಹೇಳಿಕೊಳ್ಳುತ್ತಿದ್ದಾಗಲೇ ಈ ಘಟನೆ ನಡೆದಿದೆ. ಮಾತನಾಡುವುದರಲ್ಲೇ ತಲ್ಲೀನರಾಗಿದ್ದ ಅವರು ಮರದ ಮೇಲಿನಿಂದ ಏನೋ ಸದ್ದಾಗುತ್ತಿದೆ ಎಂದು ಮೇಲೆ ನೋಡಿದಾಗ ಒಂದು ದೊಡ್ಡ ರೆಂಬೆ ಮುರಿಯುವ ಹಂತದಲ್ಲಿತ್ತು. ಅರೆ ಕ್ಷಣದಲ್ಲಿ ಇಬ್ಬರೂ ಅಲ್ಲಿಂದೆದ್ದು ಮುಂದಕ್ಕೆ ಹಾರಿದ್ದು, ಮರದ ರೆಂಬೆ ಅವರು ಕುಳಿತಿದ್ದ ಸ್ಥಳದಲ್ಲಿಯೇ ಬಂದು ಬಿದ್ದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

``ಈ ದಂಪತಿಯ ಪ್ರೇಮ ಈ ಮರಕ್ಕಿಂತಲೂ ಗಟ್ಟಿಯಾಗಿರುತ್ತದೆ,'' ಎಂದು ಫೇಸ್ ಬುಕ್ ನಲ್ಲಿ ಅವರ ವೀಡಿಯೋ ಮೇಲ್ಗಡೆ ಬರೆಯಲಾಗಿದೆ.

ಈ ದಂಪತಿಯ ವಿವಾಹ ಜೂನ್ 30ರಂದು ನಡೆದಿತ್ತು. ಅವರು ಪ್ರಾಣಾಪಾಯದಿಂದ ಕೂದಲೆಳೆಯ ಅಂತರದಿಂದ ಪಾರಾದ ಈ ಘಟನೆಯ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಪ್ರತಿಕ್ರಿಯಿಸಿ ದಂಪತಿ ಸುರಕ್ಷಿತರಾಗಿದ್ದಾರೆಂಬುದೇ ದೊಡ್ಡ ಸಂಗತಿ ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News