ಡಿಎಸ್ಪಿಯಾಗಿದ್ದ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಗೆ ಕಾನ್ಸ್ ಟೇಬಲ್ ಆಗಿ ಹಿಂಭಡ್ತಿ!

Update: 2018-07-10 07:22 GMT

ಚಂಡೀಗಡ, ಜು.11: ಭಾರತದ ಮಹಿಳಾ ಟ್ವೆಂಟಿ-20 ತಂಡದ ನಾಯಕಿ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಕ್ರಿಕೆಟರ್ ಹರ್ಮನ್‌ಪ್ರೀತ್ ಕೌರ್ ಅವರ ಬಿಎ ಪದವಿ ಪ್ರಮಾಣಪತ್ರ ನಕಲಿ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಕಾರಣದಿಂದ ನಾಲ್ಕು ತಿಂಗಳ ಹಿಂದೆ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿ ನೇಮಕಗೊಂಡಿದ್ದ ಕೌರ್‌ಗೆ ಕಾನ್ಸ್‌ಸ್ಟೇಬಲ್ ಆಗಿ ಹಿಂಭಡ್ತಿ ನೀಡಲು ಪಂಜಾಬ್ ಸರಕಾರ ನಿರ್ಧರಿಸಿದೆ.

‘‘ಮೀರತ್‌ನ ಚೌಧರಿ ಚರಣ್ ಸಿಂಗ್ ಯುನಿವರ್ಸಿಟಿಯಿಂದ ಪಡೆದಿರುವ ಪದವಿ ಪ್ರಮಾಣಪತ್ರ ನಕಲಿ ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ನನ್ನ ಕೋಚ್ ನನ್ನನ್ನು ಯುನಿವರ್ಸಿಟಿಗೆ ಸೇರಿಸಿದ್ದರು. ಅಲ್ಲಿ ಪರೀಕ್ಷೆಗಳು ಸಮಸ್ಯೆಯಿಲ್ಲದೆ ನಡೆದಿತ್ತು. ನಾನು ಅಲ್ಲಿ ಪದವಿ ಪೂರೈಸಿದ್ದೇನೆ’’ ಎಂದು ಸರಕಾರಕ್ಕೆ ಕೌರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕೌರ್‌ರನ್ನು ಕಾನ್ಸ್‌ಸ್ಟೇಬಲ್ ಹುದ್ದೆಗೆ ಹಿಂಭಡ್ತಿ ನೀಡಲು ನಿರ್ಧರಿಸಿದ್ದಾರೆ. ಕೌರ್ ತನ್ನ ವಿದ್ಯಾರ್ಹತೆ ಪೂರೈಸುವ ತನಕ ಡಿಎಸ್ಪಿ ಹುದ್ದೆಗೆ ನೇಮಕಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಪಂಜಾಬ್ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ಕೌರ್ ಸಲ್ಲಿಸಿದ್ದ ಬಿಎ ಡಿಗ್ರಿ ಸರ್ಟಿಫಿಕೇಟ್‌ಗಳನ್ನು ಪರಿಶೀಲನೆಗಾಗಿ ಪಂಜಾಬ್ ಪೊಲೀಸ್ ಇಲಾಖೆಯು ಮೀರತ್ ವಿವಿಗೆ ಕಳುಹಿಸಿಕೊಟ್ಟಾಗ ಅದು ನಕಲಿ ಎಂಬ ವಿಷಯ ಗೊತ್ತಾಗಿತ್ತು. 2011ರಲ್ಲಿ ಕೌರ್ ಡಿಗ್ರಿ ಪೂರೈಸಿರುವುದಕ್ಕೆ ಯಾವುದೇ ಸಾಕ್ಷಿಯಿಲ್ಲ. ವಿವಿ ದಾಖಲೆಗಳಲ್ಲಿ ಕೌರ್ ವಿವಿಗೆ ದಾಖಲಾಗಿರುವ ಸಂಖ್ಯೆ ಪತ್ತೆಯಾಗಿಲ್ಲ ಎಂದು ತನಿಖೆಯಿಂದ ಗೊತ್ತಾಗಿದೆ.

 ಕೌರ್ ವಿರುದ್ಧ ಪಂಜಾಬ್ ಸರಕಾರ ಪೋರ್ಚರಿ ಕೇಸ್ ದಾಖಲಿಸಿದರೆ ಅವರು ಅರ್ಜುನ ಪ್ರಶಸ್ತಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಸರಕಾರ ಯಾವುದೇ ಪ್ರಕರಣ ದಾಖಲಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಕೌರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಕೌರ್ ಸಾಧನೆಯನ್ನು ಪರಿಗಣಿಸಿದ ಪಂಜಾಬ್ ಸಿಎಂ ಜು.2017ರಲ್ಲಿ ಕ್ರೀಡಾಕೋಟಾದಡಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದ ಕೊಡುಗೆ ನೀಡಿದ್ದರು. ಪಂಜಾಬ್ ಸರಕಾರ ಆಫರ್ ನೀಡಿದಾಗ ಕೌರ್ ಪಶ್ಚಿಮ ರೈಲ್ವೆಯಲ್ಲಿ ಕಚೇರಿ ಅಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರೈಲ್ವೆ ಇಲಾಖೆಯೊಂದಿಗೆ 5 ವರ್ಷಗಳ ಗುತ್ತಿಗೆಗೆ ಸಹಿ ಹಾಕಿದ್ದ ಕೌರ್‌ನ್ನು ಸೇವೆಯಿಂದ ಮುಕ್ತ್ತಗೊಳಿಸಲು ರೈಲ್ವೆ ಇಲಾಖೆ ನಿರಾಕರಿಸಿತ್ತು. ಆಗ ಪಂಜಾಬ್ ಸಿಎಂ ರೈಲ್ವೆ ಮಂತ್ರಿ ಪಿಯೂಷ್ ಗೋಯೆಲ್ ಮೊರೆ ಹೋಗಿ ಸಮಸ್ಯೆ ಬಗೆಹರಿಸಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಕೌರ್ ಪಂಜಾಬ್‌ನ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News