ಅಸ್ತಿತ್ವದಲ್ಲಿಲ್ಲದ ಜಿಯೋ ಇನ್‍ಸ್ಟಿಟ್ಯೂಟ್ ಗೆ ಶ್ರೇಷ್ಠ ವಿದ್ಯಾಸಂಸ್ಥೆ ಮಾನ್ಯತೆ: ಕೇಂದ್ರದ ವಿರುದ್ಧ ವ್ಯಾಪಕ ಟೀಕೆ

Update: 2018-07-10 08:02 GMT

ಹೊಸದಿಲ್ಲಿ, ಜು.10: ರಿಲಯನ್ಸ್ ಫೌಂಡೇಶನ್ ನ ಜಿಯೋ ಇನ್‍ಸ್ಟಿಟ್ಯೂಟ್ ಅನ್ನು 6 `ಇನ್‍ಸ್ಟಿಟ್ಯೂಶನ್ಸ್ ಆಫ್ ಎಮಿನೆನ್ಸ್' (ಶ್ರೇಷ್ಠ ವಿದ್ಯಾಸಂಸ್ಥೆ) ನಲ್ಲಿ ಒಂದಾಗಿ ಆಯ್ದುಕೊಂಡಿರುವ ಸರಕಾರದ ಕ್ರಮ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧೆಡೆ ಭಾರೀ ಟೀಕೆಗೆ ಗುರಿಯಾಗಿದೆ.

ಆಡಳಿತ ಬಿಜೆಪಿ ಅನಗತ್ಯವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತವರ ಪತ್ನಿ ನೀತಾ ಅಂಬಾನಿ ಅವರಿಗಾಗಿ  ಈ ಕ್ರಮ ಕೈಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.

"ಇನ್ನೂ ಅಸ್ತಿತ್ವಕ್ಕೆ ಬಾರದ ಜಿಯೋ ಇನ್‍ಸ್ಟಿಟ್ಯೂಟ್ ಅನ್ನು ಎಮಿನೆಂಟ್ ಇನ್‍ಸ್ಟಿಟ್ಯೂಟ್ ಎಂದು ಗುರುತಿಸಲಾಗಿದೆ. ಯಾವ ಆಧಾರದಲ್ಲಿ ಈ ರೀತಿ ಮಾಡಲಾಗಿದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಸೋಮವಾರ ಟ್ವಿಟರ್ ನಲ್ಲಿ ಜಿಯೋ ಇನ್‍ಸ್ಟಿಟ್ಯೂಟ್ ಸುದ್ದಿಯೇ ಹರಿದಾಡಿತ್ತು. ಹಲವಾರು ಶೈಕ್ಷಣಿಕ ತಜ್ಞರೂ ಸರಕಾರದ ಕ್ರಮವನ್ನು ಪ್ರಶ್ನಿಸಿದ್ದರು. ಆದರೆ  'ಇನ್‍ಸ್ಟಿಟ್ಯೂಶನ್ಸ್ ಆಫ್ ಎಮಿನೆನ್ಸ್'ಗಳನ್ನು ಆಯ್ಕೆ ಮಾಡಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ ತನ್ನ ಆಯ್ಕೆಯನ್ನು ಸಮರ್ಥಿಸಿದ್ದು, ಜಿಯೋ ಇನ್‍ಸ್ಟಿಟ್ಯೂಟ್ ಅನ್ನು ಹೊಸ ಮತ್ತು ಪ್ರಸ್ತಾವಿತ ಸಂಸ್ಥೆಗಳ ಗ್ರೀನ್ ಫೀಲ್ಡ್ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

ಯುಜಿಸಿ 'ಇನ್‍ಸ್ಟಿಟ್ಯೂಶನ್ಸ್ ಆಫ್ ಎಮಿನೆನ್ಸ್ ಡೀಮ್ಡ್ ಟು ಬಿ ಯುನಿವರ್ಸಿಟೀಸ್ ರೆಗ್ಯುಲೇಶನ್ಸ್ 2017' ಇದರ ಅನ್ವಯ ಸಚಿವಾಲಯ 10 ಖಾಸಗಿ ಹಾಗೂ ಅಷ್ಟೇ ಸಂಖ್ಯೆಯ ಸರಕಾರಿ ಸಂಸ್ಥೆಗಳನ್ನು ಆಯ್ಕೆ ಮಾಡಬೇಕಿದ್ದು ಅವುಗಳೂ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಚಾರಗಳಲ್ಲಿ ಸಂಪೂರ್ಣ ಸ್ವಾಯತ್ತತೆ ಹೊಂದಿರುತ್ತವೆ.

ಸರಕಾರಿ ರಂಗದ ಸಂಸ್ಥೆಗಳ ಐಐಟಿ, ದಿಲ್ಲಿ, ಬಾಂಬೆ, ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್ ಆಯ್ಕೆ ಮಾಡಿದ್ದರೆ, ಖಾಸಗಿ ರಂಗದಲ್ಲಿ ಮಣಿಪಾಲದ ಮಾಹೆ, ಬಿಟ್ಸ್, ಪಳನಿ ಹಾಗೂ ಜಿಯೋ ಇನ್‍ಸ್ಟಿಟ್ಯೂಟ್ ಆಯ್ಕೆ ಮಾಡಲಾಗಿತ್ತು. ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ರೂ 1000 ಕೋಟಿಯಷ್ಟು ಧನಸಹಾಯ ಒದಗಿಸಲಾಗುವುದಾದರೆ ಖಾಸಗಿ ಸಂಸ್ಥೆಗಳಿಗೆ ಇದು ದೊರೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News