ಬಿ.ಎ. ಮೊಹಿದಿನ್ ಕಂಡ ದೇವರಾಜ ಅರಸು

Update: 2018-07-10 10:11 GMT

ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ, 1977 ರ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯವಾಗಿ ಸೋತು, ಕಾಂಗ್ರೆಸ್ ಪಕ್ಷವನ್ನೂ ಸೋಲಿಸಿದ್ದರು. ಆಗ ದೇಶದಾದ್ಯಂತ ಕಾಂಗ್ರೆಸ್ ವಿರೋಧಿ ಅಲೆ ಬೀಸುತ್ತಿತ್ತು.

ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಅರಸು ಅವರ ಸ್ವಾಮಿನಿಷ್ಠೆಯೋ, ಭಂಡಧೈರ್ಯವೋ, ಸೋತು ಸುಣ್ಣಾಗಿದ್ದ ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿಯವರನ್ನು ಕರ್ನಾಟಕಕ್ಕೆ ಕರೆತಂದು ಮರುಚುನಾವಣೆಯ ಕಣಕ್ಕಿಳಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸ್ಪರ್ಧೆಯ ಕಾರಣಕ್ಕೆ, 1978ರ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮರುಚುನಾವಣೆ, ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ಮಟ್ಟಿಗೆ ಐತಿಹಾಸಿಕ ಚುನಾವಣೆ. ಇತಿಹಾಸದ ಪುಟಗಳಲ್ಲಿ ದಾಖಲಾದ ಮಹತ್ವದ ಚುನಾವಣೆ. ಕಂಗೆಟ್ಟಿದ್ದ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಚುನಾವಣೆ. ಆ ಕಾರಣಕ್ಕಾಗಿಯೇ ದೇಶ-ವಿದೇಶಗಳ ಸುದ್ದಿಮಾಧ್ಯಮಗಳ ಸಂತೆಯೇ ಅಲ್ಲಿ ನೆರೆದಿತ್ತು. ಎಲ್ಲರ ಚಿತ್ತ ಚಿಕ್ಕಮಗಳೂರಿನತ್ತ ನೆಟ್ಟಿತ್ತು.

ಇಂದಿರಾರನ್ನು ಕರ್ನಾಟಕಕ್ಕೆ ಕರೆತರುವ ಮೂಲಕ ದೇವರಾಜ ಅರಸು ಚರ್ಚೆಯ ಕೇಂದ್ರಬಿಂದುವಾಗಿದ್ದರು. ಇಂದಿರಾ ಗಾಂಧಿಯವರ ರಾಜಕೀಯ ಜೀವನದ ಅಳಿವು ಉಳಿವಿನ ಪ್ರಶ್ನೆ ಅರಸು ಅವರ ಕೈಯಲ್ಲಿತ್ತು. ಕರ್ನಾಟಕದ ಮತದಾರರ ಮೇಲೆ ಅರಸರಿಗೆ ನಂಬಿಕೆ ಇತ್ತು. ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಅರಸು ಪ್ರತಿಷ್ಠಿತ ಚಿಕ್ಕಮಗಳೂರು ಮರುಚುನಾವಣೆಯ ಉಸ್ತುವಾರಿಯನ್ನು ಯುವ ಕಾಂಗ್ರೆಸ್ ಕಾರ್ಯುಕರ್ತರಿಗೆ ಒಪ್ಪಿಸಿದ್ದರು. ಅಂತಹ ಯುವಕರ ಪೈಕಿ ಅದಾಗತಾನೆ ಶಾಸಕರಾಗಿದ್ದ, ರಾಜಕಾರಣಕ್ಕೇ ಹೊಸಬರಾಗಿದ್ದ 40 ವರ್ಷದ ಬಿ.ಎ. ಮೊಹಿದಿನ್ ಕೂಡ ಒಬ್ಬರು.

ಇದು ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ, ಅಪಸ್ವರಕ್ಕೆ ಕಾರಣವಾಗಿತ್ತು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಕ್ಕಲಿಗರು ಹಾಗೂ ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಮೊಹಿದಿನ್ ಪ್ರತಿನಿಧಿಸುವ ಅಲ್ಪಸಂಖ್ಯಾತ ಸಮುದಾಯದ ಸಂಖ್ಯೆ ತೀರಾ ಕಡಿಮೆ ಇದ್ದು, ಎಲ್ಲರ ಕಣ್ಣುರಿಗೆ ಕಾರಣವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್‌ನ ಅಗ್ರಗಣ್ಯ ನಾಯಕಿಯನ್ನು ಕರ್ನಾಟಕಕ್ಕೆ ಕರೆತಂದು ಸೋಲಿಸಲು ಹೂಡಿರುವ ಹುನ್ನಾರವಿದೆಂಬ ಪುಕಾರು ಹಬ್ಬಿತ್ತು. ಇದು ಇಂದಿರಾ ಗಾಂಧಿಯವರ ಕಿವಿಗೂ ಬಿದ್ದಿತ್ತು. ಅವರು ಹಲವು ಮುಖಂಡರ ಬಳಿ ಈ ಬಗ್ಗೆ ಪ್ರಸ್ತಾಪಿಸಿದ್ದೂ ಆಗಿತ್ತು.

ಆದರೆ ದೇವರಾಜ ಅರಸು ಮಾತ್ರ ಇದಾವುದಕ್ಕೂ ಧೃತಿಗೆಡದೆ, ಚಿಕ್ಕಮಗಳೂರು ಮರುಚುನಾವಣೆಯ ಉಸ್ತುವಾರಿಗೆ ಮೊಹಿದಿನ್ನಂತಹ ಯುವಕರೆ ಸೂಕ್ತ ವ್ಯಕ್ತಿಗಳೆಂದು ನಿರ್ಧರಿಸಿದ್ದರು. ಅಷ್ಟೇ ಅಲ್ಲದೆ, ಮೊಹಿದಿನ್ಗೆ ಚಿಕ್ಕಮಗಳೂರು ಜಿಲ್ಲೆಯ ಇಂಚಿಂಚೂ ಗೊತ್ತು. ಯುವಕ ಓಡಾಡಿ ಗೆಲುವು ತಂದುಕೊಡುತ್ತಾನೆಂಬ ನಂಬಿಕೆ ಇದೆ. ಇಂದಿರಾರನ್ನು ಗೆಲ್ಲಿಸಿಕೊಂಡು ಬರುವ ಉತ್ಸಾಹ, ಹುಮ್ಮಸ್ಸು ಎರಡೂ ಆತನಲ್ಲಿದೆ ಎಂದು ವಿರೋಧಿಗಳ ಬಾಯಿ ಮುಚ್ಚಿಸಿದ್ದರು.

ಅರಸು ನಂಬಿಕೆಗೆ ದ್ರೋಹ ಬಗೆಯದ ಮೊಹಿದಿನ್ ಇಂದಿರಾ ಗಾಂಧಿಯವರನ್ನು ಗೆಲ್ಲಿಸುವಲ್ಲಿ ಶಕ್ತಿಮೀರಿ ಶ್ರಮಿಸಿದ್ದರು. ಹಾಗೆಯೇ ರಾಜ್ಯ ರಾಜಕಾರಣದ ಮುಂಚೂಣಿಗೂ ಬಂದಿದ್ದರು.

ಅಂದಿನ ಬಿಸಿರಕ್ತದ ಅರಸರ ಅಚ್ಚುಮೆಚ್ಚಿನ ತರುಣ ಮೊಹಿದಿನ್ ಜನಿಸಿದ್ದು 1937ರಲ್ಲಿ. ಬೆಂಗಳೂರಿನ ಸಂಜಯನಗರದಲ್ಲಿ ವಾಸವಾಗಿರುವ ಅವರನ್ನು, ದೇವರಾಜ ಅರಸು ಅವರ ಬಗ್ಗೆ ಕೇಳುತ್ತಿದ್ದಂತೆ, ‘ಅರಸರ ಮೂಸೆಯಲ್ಲಿ ಹುಟ್ಟಿದ ರಾಜಕೀಯ ಕೂಸು ನಾನು’ ಎಂದು ಮಾತಿನ ಉಮೇದಿಗಿಳಿದರು.
ರಾಜ್ಯ ಸರಕಾರ ಅರಸು ಶತಮಾನೋತ್ಸವವನ್ನು ಆಚರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, ‘ದೇವರಾಜ ಅರಸು ರಾಜ್ಯ ಕಂಡ ಅಪರೂಪದ ರಾಜಕಾರಣಿ. ಅವರ ಶತಮಾನೋತ್ಸವವನ್ನು ವರ್ಷವಿಡೀ ಆಚರಿಸುತ್ತಿರುವುದು ಸ್ವಾಗತಾರ್ಹ. ಅನುಕರಣೀಯ. ಆದರೆ ಇದು ಒಣ ಆಡಂಬರ ಆಗಬಾರದು. ಅರಸು ಅವರ ಚಿಂತನೆ, ಕಾರ್ಯಕ್ರಮಗಳು, ಆಡಳಿತಾತ್ಮಕ ನಿರ್ಧಾರಗಳು ಎಲ್ಲದರ ಬಗ್ಗೆ ಚರ್ಚೆಯಾಗಬೇಕು. ಇದು ಮುಂದಿನ ಜನಾಂಗಕ್ಕೂ ಈ ಸರಕಾರಕ್ಕೂ ದಿಕ್ಸೂಚಿಯಾಗಬೇಕು. ಈ ದಿಸೆಯಲ್ಲಿ ಅರಸು ಶತಮಾನೋತ್ಸವವನ್ನು ಸರಕಾರ ರೂಪಿಸಬೇಕು. ಇದು ಯಶಸ್ಸಾಗಲಿ ಎಂಬುದು ನನ್ನ ಆಶಯ’ ಎಂದರು.

ನೀವು ದೇವರಾಜ ಅರಸು ಅವರನ್ನು ಮೊದಲ ಬಾರಿಗೆ ಕಂಡದ್ದು ಯಾವಾಗ, ಏನನ್ನಿಸಿತು?

ನಾನಾಗ ಜಯನಗರದ ವಿಜಯಾ ಕಾಲೇಜಿನಲ್ಲಿ ಪದವಿ ಓದುತ್ತಿದ್ದೆ. ಕಾಲೇಜು ವಿದ್ಯಾರ್ಥಿಗಳೆಲ್ಲ ಸೇರಿ ಹಿಂದಿ ವಿರೋಧಿ ಚಳವಳಿಯನ್ನು ಹಮ್ಮಿಕೊಂಡಿದ್ದೆವು. ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳೆಲ್ಲ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸೇರಬೇಕೆಂದು ನಮ್ಮ ವಿದ್ಯಾರ್ಥಿ ನಾಯಕರು ಕರೆ ಕೊಟ್ಟಿದ್ದರು. ಇಡೀ ನಗರದ ಕಾಲೇಜುಗಳ ವಿದ್ಯಾರ್ಥಿಗಳೆಲ್ಲ ಅಲ್ಲಿದ್ದು, ಕೂಗಾಟ, ಕಿರುಚಾಟ ಜೋರಾಗಿತ್ತು. ಪೊಲೀಸರಿಂದ ಲಾಠಿ ಏಟೂ ಬಿದ್ದಿತ್ತು. ಆನಂತರ ನಾವು ಒಂದಷ್ಟು ಯುವಕರು ದೇವರಾಜ ಅರಸು ಅವರನ್ನು ನೋಡಲು ಹೋಗಿದ್ದೇವು. ಅದಾಗಲೇ ಸುದ್ದಿ ತಿಳಿದಿದ್ದ ಅರಸು, ‘ಚಳವಳಿ ಅಂದ್ರೆ ಇದೆಲ್ಲ ಇದ್ದದ್ದೆ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ. ನೀವು ನಿಮ್ಮ ವಯೋಸಹಜ ಉತ್ಸಾಹ ತೋರಿದ್ದೀರಿ’ ಎಂದವರು, ‘ಚಳವಳಿ, ಪ್ರತಿಭಟನೆ, ಧರಣಿಗಳು ಪ್ರಜಾಪ್ರಭುತ್ವದ ಭಾಗ, ಹಾಗೆಯೇ ಸಮಾಜದ ಶಾಂತಿ ಕಾಪಾಡಬೇಕಾದ್ದು ಪೊಲೀಸರ ಕರ್ತವ್ಯ’ ಎಂದು ಪ್ರಜಾಪ್ರಭುತ್ವದ ಪಾಠ ಹೇಳಿದ್ದರು. ಇದು ನಾನು ದೇವರಾಜ ಅರಸು ಅವರನ್ನು ಮೊದಲ ಬಾರಿಗೆ ಕಂಡಿದ್ದು. ಅವರ ಮಾತು ನಮ್ಮಂತಹ ಯುವಕರ ಮೇಲೆ ಭಾರೀ ಪ್ರಭಾವ ಬೀರಿತು. ಅವತ್ತೇ ಅವರ ಅಭಿಮಾನಿಯಾಗಿ ಹೋದೆ.

ರಾಜಕೀಯ ರಂಗಕ್ಕೆ ಬಂದಿದ್ದು ಮತ್ತು ಅರಸರ ಸಂಪರ್ಕಕ್ಕೆ ಬಂದದ್ದು ಹೇಗೆ ?

1969 ರಲ್ಲಿ ನಾವೆಲ್ಲ ಸಮಾಜವಾದಿ ಧೋರಣೆಗಳಿಗೆ ಒಳಗಾಗಿದ್ದ ಕಾಲ. ನಾನು, ಡಿ.ಬಿ. ಚಂದ್ರೇಗೌಡ ಸೇರಿದಂತೆ ಒಂದಷ್ಟು ಯುವಕರು ಕಾಂಗ್ರೆಸ್ ವಿರೋಧಿಗಳಾಗಿದ್ದೆವು. ಅದೇ ಸಮಯದಲ್ಲಿ ನಮ್ಮ ತಂದೆಯವರದ್ದು ಚಿಕ್ಕಮಗಳೂರಿನಲ್ಲಿ ಒಂದು ಹೋಟೆಲ್ ಇತ್ತು. ಅಲ್ಲಿಗೆ ಕೆ.ಎಚ್.ರಂಗನಾಥ್ ಬರುತ್ತಿದ್ದರು. ಅವರು ನಮ್ಮ ತಂದೆಯ ಬಹಳ ಒಳ್ಳೆಯ ಸ್ನೇಹಿತರು. ಆ ಕಡೆ ಬಂದಾಗ ಹೋಟೆಲ್‌ಗೆ ಬಂದು ಟೀ ಕುಡಿದು, ಸಿಗರೇಟ್ ಸೇದಿ ಒಂದಷ್ಟು ಹೊತ್ತು ರಾಜಕಾರಣ ಮಾತಾಡಿ ಹೋಗುವುದು ರೂಢಿಯಾಗಿತ್ತು. ಈ ಸಂದರ್ಭದಲ್ಲಿ ನಾವು ಕೆ.ಎಚ್.ರಂಗನಾಥ್‌ರ ವ್ಯಕ್ತಿತ್ವಕ್ಕೆ, ಮಾತಿನ ಮೋಡಿಗೆ ಒಳಗಾಗಿ ಹತ್ತಿರವಾಗಿದ್ದೆವು. ಇಂದಿರಾ ಗಾಂಧಿಯವರ ಪ್ರಗತಿಪರ ಧೋರಣೆಗಳಿಗೆ ಆಕರ್ಷಿತರಾಗಿ ಕಾಂಗ್ರೆಸ್ ಪಕ್ಷ ಸೇರಿದ್ದೆವು.

1971 ರ ಪಾರ್ಲಿಮೆಂಟ್ ಚುನಾವಣಾ ಸಮಯ. ನಮ್ಮ ಚಿಕ್ಕಮಗಳೂರು ಸಿಟ್ಟಿಂಗ್ ಎಂಪಿ ಹುಚ್ಚೇಗೌಡರು ನಮ್ಮ ಯುವಕರ ಗುಂಪಿಗೆ ಸೇರದೆ ನಮ್ಮನ್ನು ದೂರ ಇಟ್ಟರು. ಅಷ್ಟೇ ಅಲ್ಲ, ಅಭ್ಯರ್ಥಿಯಾಗುವುದಿಲ್ಲ ಎಂದು ಸ್ಪರ್ಧೆಯಿಂದ ಹಿಂದೆ ಸರಿದರು. ಆಗ ದೇವರಾಜ ಅರಸು ಅವರು ಚಿಕ್ಕಮಗಳೂರಿಗೆ ಬಂದರು. ಬಂದವರೆ ನಮ್ಮ ಯುವಕರ ಗುಂಪನ್ನು ಕರೆದು ವಿಚಾರಿಸಿದರು. ಡಿ.ಬಿ. ಚಂದ್ರೇಗೌಡರಿಗೆ ‘ನೀನೇನು ಮಾಡುತ್ತಿದ್ದೀಯ’ ಎಂದರು. ಅವರು ‘ಲಾ ಓದಿ, ವಕೀಲ ವೃತ್ತಿ ಆರಂಭಿಸಿದ್ದೇನೆ’ ಎಂದರು. ಅಷ್ಟೇ, ಅರಸು ‘ಯೂ ಆರ್ ದಿ ಕ್ಯಾಂಡಿಡೇಟ್’ ಎಂದು ನಿಂತ ನಿಲುವಿನಲ್ಲಿಯೇ ಘೋಷಿಸಿಬಿಟ್ಟರು.

ಅರಸು ಅದ್ಯಾವ ಗಳಿಗೆಯಲ್ಲಿ ಅಭ್ಯರ್ಥಿ ಎಂದು ಘೋಷಿಸಿದರೋ, ಚಂದ್ರೇಗೌಡ ಗೆದ್ದು ಎಂಪಿಯಾದರು. ನಾನು ಅವರ ಹಿಂದೆ ಓಡಾಡುತ್ತಿದ್ದವನು ಯೂತ್ ಕಾಂಗ್ರೆಸ್ ಸೆಕ್ರೆಟರಿಯಾಗಿ ಅರಸುಗೆ ಹತ್ತಿರವಾದೆ.

ಅರಸು ಅವರಲ್ಲಿ ನೀವು ಕಂಡ ವಿಶೇಷವಾದ ಗುಣವೇನು ?

ಅವರ ಅದ್ಭುತವಾದ ಸೋಷಿಯಲ್ ಎಂಜಿನಿಯರಿಂಗ್. ಅದು 1972 ರ ವಿಧಾನಸಭಾ ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಟಿಕೆಟ್ ಹಂಚುವಾಗ ನಿಚ್ಚಳವಾಗಿ ಕಂಡಿತ್ತು. ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಕಾಣದಂತಹ ಸಾಮಾಜಿಕ ನ್ಯಾಯ ಮೊದಲ ಬಾರಿಗೆ ಚಾಲ್ತಿಗೆ ಬಂದಿತ್ತು. ಆಗ ಅವರು ಹೇಳಿದ ಮಾತು ನನ್ನ ಕಿವಿಯಲ್ಲಿನ್ನೂ ಇದೆ... ‘ನಾವು ಬಹುಸಂಖ್ಯಾತ ಜಾತಿಗಳ ವಿರುದ್ಧ ಅಲ್ಲ. ಆದರೆ ದೊಡ್ಡ ವರ್ಗ, ತುಳಿತಕ್ಕೆ ಒಳಗಾದ ವರ್ಗ, ಅಧಿಕಾರದ ಹತ್ತಿರಕ್ಕೂ ಬರದ ವರ್ಗ, ಇದಕ್ಕೆ ಅಧಿಕಾರ ಕೊಡುವುದು ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟಂತೆ’ ಎಂದಿದ್ದರು. ಅವರ ಆಶಯದಂತೆಯೇ ಗೆದ್ದ 163 ಶಾಸಕರಲ್ಲಿ 93 ಜನ ಹಿಂದುಳಿದ ವರ್ಗದಿಂದ ಬಂದವರಾಗಿದ್ದರು. ಇದು ಕಡಿಮೆ ಕ್ರಾಂತಿಯಲ್ಲ, ಇವತ್ತಿನವರೆಗೂ ಕಾಣಲಾಗಿಲ್ಲ.

ಆದರೆ ಆ ಹಿಂದುಳಿದ ವರ್ಗವೇ ಅರಸು ಅವರಿಗೆ ಕೈ ಕೊಟ್ಟು ಗುಂಡೂರಾವ್‌ಗೆ ಬೆಂಬಲಿಸಿತಲ್ಲ ?

ನೀವು ನಂಬಲ್ಲ... ಅರಸು, ರಾಜಕೀಯದಲ್ಲಿ ಇದೆಲ್ಲ ಇದ್ದದ್ದೆ ಬಿಡು ಎಂದಿದ್ದರು. ಅವರಿಗೆ ಆ ಬಗ್ಗೆ ಕಿಂಚಿತ್ತೂ ಬೇಸರವಿರಲಿಲ್ಲ. ‘ಆ ವರ್ಗಕ್ಕೆ ಮಾತನಾಡುವ ಶಕ್ತಿ ಕಲ್ಪಿಸಿಕೊಟ್ಟಿದ್ದೇನೆ. ಅವರು ಇನ್ನು ಸುಮ್ಮನಿರುವುದಿಲ್ಲ. ಅದು ನನ್ನ ವಿರುದ್ಧವಾದರೂ ಸರಿ’ ಎಂದಿದ್ದರು. ನೋಡಿ, ಅರಸು ಅವರು ಅವತ್ತು ಆ ವರ್ಗಕ್ಕೆ ಅಧಿಕಾರ ಕಲ್ಪಿಸಿಕೊಟ್ಟಿದ್ದರಿಂದಲೇ ಇವತ್ತು ಕರ್ನಾಟಕದಲ್ಲಿ ನಾಲ್ಕು ಹಿಂದುಳಿದ ವರ್ಗದ ನಾಯಕರು ಮುಖ್ಯಮಂತ್ರಿಯಾಗುವಂತಾಯಿತು.

1992 ರಲ್ಲಿ ವೀರಪ್ಪ ಮೊಯ್ಲಿ ಈ ರಾಜ್ಯದ ಮುಖ್ಯಮಂತ್ರಿಯಾದಾಗ ನಾನು ವಿಧಾನ ಪರಿಷತ್‌ನಲ್ಲಿ, ‘ಬೇರ್ ಫೂಟ್ ವ್ಯಕ್ತಿ ಮುಖ್ಯಮಂತ್ರಿಯಾಗುವಂತಾಯಿತು. ಇದು ಅರಸು ಕೊಟ್ಟ ಕೊಡುಗೆ’ ಎಂದು ಹೇಳಿದ್ದೆ. ಅದು ಶಾಸನಸಭೆಯ ಕಡತಗಳಲ್ಲಿ ದಾಖಲಾಗಿದೆ. ಬಂಗಾರಪ್ಪ, ಧರಂಸಿಂಗ್ ಮತ್ತು ಇತ್ತೀಚಿನ ಸಿದ್ದರಾಮಯ್ಯ... ಎಲ್ಲರೂ ಅರಸುರವರ ಸಾಮಾಜಿಕ ನ್ಯಾಯದ ಕೊಡುಗೆಯೇ. ಇದು ಈ ಶತಮಾನೋತ್ಸ ಸಂದರ್ಭದಲ್ಲಿ ಚರ್ಚೆಯಾಗಬೇಕು.

ಅವರನ್ನು ಹತ್ತಿರದಿಂದ ಬಲ್ಲವರು ನೀವು, ಮರೆಯಲಾರದಂತಹ ನೆನಪುಗಳಿದ್ದರೆ ಹೇಳಿ...

ಅವರ ಆಹಾರ ಸಂಸ್ಕೃತಿ ಬಗ್ಗೆ ಹೇಳಲೇಬೇಕು. ನನ್ನದು ಮಂಗಳೂರು. ಅರಸು ಮಂಗಳೂರಿಗೆ ಬಂದರೆ ಮಂಗಳೂರಿಗರಾಗೋರು. ‘ನೋಡಪ್ಪ ನನಗೆ ಊಟಕ್ಕೆ ಕುಸುಲಕ್ಕಿ ಗಂಜಿ, ಚಟ್ನಿ, ಕಾಣೆ ಮೀನು ಇರಲಿ’ ಅನ್ನೋರು. ಊಟಕ್ಕೆ ಕೂತರೆ ಸಂತೃಪ್ತಿಯಾಗಿ ಊಟ ಮಾಡೋರು. ಇನ್ನು ಬಿಜಾಪುರಕ್ಕೆ ಹೋದರೆ, ಜೋಳದ ರೊಟ್ಟಿ, ಖಾರ ಚಟ್ನಿ, ತುಪ್ಪ, ಕೆನೆ ಮೊಸರು ಕಂಪಲ್ಸರಿ. ಉತ್ತರ ಕರ್ನಾಟಕದ ಮಂದಿಯೊಂದಿಗೇ ಬೆರೆತು ಬಿಡೋರು. ಹಾಗೆಯೇ ಅವರ ತವರೂರು ಹುಣಸೂರು, ಮೈಸೂರು ಕಡೆಗೆ ಬಂದರೆ, ರಾಗಿ ಮುದ್ದೆ, ಸೊಪ್ಪಿನ ಸಾರು ಇಷ್ಟಪಟ್ಟು ಉಣ್ಣೋರು. ಇದು ಏನನ್ನು ತೋರಿಸುತ್ತೆ ಗೊತ್ತಾ... ಆಯಾಯ ಪ್ರದೇಶಗಳ ಜನಗಳ ಜೊತೆ ಬೆರೆಯುವ ಮೂಲಕ ಆಯಾಯ ಸಂಸ್ಕೃತಿುನ್ನು ಅರಿಯುತ್ತಿದ್ದರು. ಅವರೊಂದಿಗೆ ಬೆರೆತು ಅವರ ಹೃದಯದೊಳಕ್ಕೇ ಇಳಿಯುತ್ತಿದ್ದರು. ಇದು ನಾನು ಕಂಡ ಅರಸು ಅವರ ವಿಶಿಷ್ಟ ಗುಣ.

ಕಡೂರು ಎಂಎಲ್‌ಎ ಹೊನ್ನಪ್ಪ ಒಂದ್ ಸಲ ಓಡೋಡಿ ಬಂದು ಅರಸು ಅವರ ಕಾಲಿಗೆ ಬಿದ್ದು, ‘ನಿಮ್ಮನ್ನು ನಂಬಿ ಮಗಳ ಮದುವೆ ಮಾಡ್ತಿದ್ದೀನಿ’ ಅಂದ. ಅದಕ್ಕೆ ಅರಸು ‘ಅದಕ್ಕೇನಂತೆ ಬರ್ತಿನಿ ಬಿಡು’ ಎಂದರು. ‘ಅಯ್ಯೋ ಅದಕ್ಕಲ್ಲ, ಅಳಿಯನ ಮನೆ ಕಡೆಯೋರು ಭಾರೀ ಶ್ರೀಮಂತರು. ಅವರಿಗೆ ತಕ್ಕಂತೆ ಮದುವೆ ಮಾಡಿಕೊಡಬೇಕು, ಖರ್ಚಿಗೆ 50 ಸಾವಿರ ಬೇಕು’ ಅಂದ. ಆಗ ಅರಸು, ‘ಏ ಮೊಹಿದಿನ್, ಆ ದೇಸಾಯಿಗೇಳಿ 50 ಸಾವಿರ ಕೊಡ್ಸು’ ಅಂದರು.

ಅವರು ಕೊಟ್ಟರು, ಇವನು ಮದುವೆ ಮಾಡಿದ, ಆಯ್ತು. ಆ ಆರ್.ಎಂ. ದೇಸಾಯಿ ಅಂದನಲ್ಲ, ಆತ ಅರಸು ಕೇಳಿದಾಗೆಲ್ಲ ಹಣ ಕೊಟ್ಟರೂ, ಅರಸು ಅವರ ಅಧಿಕಾರವನ್ನು ಎಂದೂ ದುರುಪಯೋಗಪಡಿಸಿಕೊಳ್ಳದ, ಸ್ವಾರ್ಥಕ್ಕೆ ಬಳಸಿಕೊಳ್ಳದ ವ್ಯಕ್ತಿ. ಅವರು ಒಂದರ್ಥದಲ್ಲಿ ಅರಸು ಆರಾಧಕರು. ಕೇಳಿದಾಗೆಲ್ಲ ಕಾಸು ಕೊಟ್ಟರೂ, ಅರಸರಿಂದ ಏನನ್ನೂ ಬಯಸದವರು. ಆದರೆ ದೂರದಿಂದ ನೋಡುವವರಿಗೆ ಅರಸು ಭ್ರಷ್ಟ. ಭ್ರಷ್ಟಾಚಾರ ಹುಟ್ಟಿದ್ದೇ ಅರಸು ಕಾಲದಲ್ಲಿ ಎಂದು ಅಪಖ್ಯಾತಿ ಅಂಟಿಕೊಂಡಿತು.

ಅರಸು ದೊಡ್ಡ ಅಳಿಯ ಮೋಹನ್ ಜೊತೆ ನಾವೊಂದಿಷ್ಟು ಜನ ಆಗಾಗ ಕೂತು ಮಾತನಾಡುವುದುಂಟು. ಒಂದು ಸಲ ಹೀಗೆ ಮಾತನಾಡುತ್ತಿದ್ದಾಗ ಮೋಹನ್, ‘ನೋಡಿ ಸ್ವಾಮಿ ನಿಮ್ಮ ಬುದ್ಧಿಯವರ ಕೊಡುಗೆ..’ ಎಂದು ಒಂದು ನೋಟಿಸ್ ತೋರಿಸಿದರು. ಅದು ಅರಸರು ಕಲ್ಲಹಳ್ಳಿಯ ಜಮೀನನ್ನು ಭೂ ಅಭಿವೃದ್ಧಿ ಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದು, ಆ ಸಾಲ ಈಗ ಬೆಟ್ಟದಷ್ಟು ಬೆಳೆದು ತೀರಿಸಲಾಗದ ಮಟ್ಟಕ್ಕೆ ಬಂದಿತ್ತು. ಅರಸು ಏನೆಂದು ನಮಗೆ ಗೊತ್ತು, ಅರ್ಥವಾಯಿತು. ಆದರೆ ನಾಡಿನ ಜನಕ್ಕೆ ?

ಅವರಿಂದ ನೀವು ಕಲಿತದ್ದೇನು, ಇವತ್ತಿನ ರಾಜಕಾರಣಿಗಳು ಕಲಿಯಬೇಕಾದ್ದೇನು ?

ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಮುಖ್ಯವಾಗಿ ಸಾಮಾಜಿಕವಾಗಿ ಹಿಂದುಳಿದವರ ಬಗ್ಗೆ ದೇವರಾಜ ಅರಸು ಅವರಲ್ಲಿ ವಿಶೇಷ ಕಾಳಜಿ ಮತ್ತು ಕಳಕಳಿ ಇತ್ತು. ಅಧಿಕಾರ ಎಷ್ಟು ದಿನ ಎಂಬುದು ಮುಖ್ಯವಲ್ಲ, ಏನು ಮಾಡಿದೆ ಅನ್ನುವುದು ಮುಖ್ಯ ಎಂದು ಯಾವಾಗಲೂ ಹೇಳುತ್ತಿದ್ದರು. ದುರ್ಬಲರ ಕೈಗೆ ಅಧಿಕಾರ ನೀಡಬೇಕು, ಅವರ ದನಿಗೆ ಬೆಲೆ ಬರಬೇಕು, ಸಮ ಸಮಾಜ ನಿರ್ಮಾಣವಾಗಬೇಕು- ಅದೇ ನನ್ನ ಕನಸು ಎನ್ನುತ್ತಿದ್ದರು. ಬಡವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ, ಜೇಬಿನಲ್ಲಿ ಇದ್ದುದನ್ನು ಕೈ ಎತ್ತಿ ಕೊಡುತ್ತಿದ್ದರು. ನನ್ನ ಬಳಿಗೆ ಅವರು ಬರಬೇಕಾಗಿಲ್ಲ, ಅವರಿರುವ ಜಾಗಕ್ಕೆ ನಾನೇ ಹೋಗುತ್ತೇನೆ ಎನ್ನುತ್ತಿದ್ದರು, ಹೋಗುತ್ತಿದ್ದರು. ಅದು ಪ್ರಚಾರಕ್ಕಾಗಿ, ಪ್ರತಿಷ್ಠೆಗಾಗಿ, ಆಡಂಬಕ್ಕಾಗಿ ಮಾಡಿದ್ದಲ್ಲ. ಸ್ವಾರ್ಥ ಇರಲಿಲ್ಲ. ದೌರ್ಬಲ್ಯಗಳಿದ್ದವು, ಆದರೆ ತತ್ವ-ಸಿದ್ಧಾಂತಗಳನ್ನು ಬಲಿ ಕೊಡಲಿಲ್ಲ. ಇದನ್ನು ಇವತ್ತಿನ ರಾಜಕಾರಣಿಗಳು ಅಳಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ನಿಮ್ಮದು ಚಿಕ್ಕಮಗಳೂರು, ಬಂಟ್ವಾಳದಿಂದ ಸ್ಪರ್ಧಿಸಿದ್ದು, ಗೆದ್ದಿದ್ದು ಹೇಗೆ?

ಹುಟ್ಟಿ ಬೆಳೆದದ್ದು ಚಿಕ್ಕಮಗಳೂರು. ಅಪ್ಪನ ಹೋಟೆಲ್ ಇದ್ದದ್ದು ಚಿಕ್ಕಮಗಳೂರು. ಬೆಂಗಳೂರಲ್ಲಿ ಪದವಿ ಮುಗಿಸಿ ಕೃಷಿಕನಾಗಬೇಕೆಂದು ಮತ್ತೆ ಊರಿಗೆ ಹೋದೆ. ಕೆಲವೇ ವರ್ಷಗಳಲ್ಲಿ ಕೃಷಿ ಸಾಧ್ಯವಿಲ್ಲವೆನ್ನಿಸಿ, ಎಲ್ಲವನ್ನು ಮಾರಿ, ನನ್ನ ಸಮುದಾಯದ ಜನರಿರುವ ಮಂಗಳೂರಿಗೆ ಬಂದೆ. ಆದರೆ ದೇವರಾಜ ಅರಸು ಅವರು ನನಗೆ 1978 ರಲ್ಲಿ ಬಂಟ್ವಾಳದಿಂದ ಸ್ಪರ್ಧಿಸಲು ಟಿಕೆಟ್ ನೀಡಿದರು. ಅಲ್ಲಿ ನನ್ನ ಪರಿಚಯದವರಿಲ್ಲ, ಚುನಾವಣಾ ಅನುಭವವಿಲ್ಲ, ದುಡ್ಡಿಲ್ಲ, ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆರೆಸೆಸ್‌ನ ರುಕ್ಮಯ ಪೂಜಾರಿ ನನ್ನೆದುರು ಅಭ್ಯರ್ಥಿಯಾಗಿದ್ದಾರೆ. ದೇಶಾದ್ಯಂತ ಕಾಂಗ್ರೆಸ್ ವಿರೋಧಿ ಅಲೆ ಇದೆ. ಮೇಲ್ನೋಟಕ್ಕೇ ಹೇಳಬಹುದು, ಸೋಲು ನಮಗೆ ಕಟ್ಟಿಟ್ಟ ಬುತ್ತಿ ಅಂತ. ಆದರೆ ಅರಸು ಮಾತ್ರ, ‘ಚುನಾವಣಾ ಪ್ರಚಾರಕ್ಕೆ ನಾನು ಬರ್ತಿನಿ, ಅದೃಶ್ಯ ಮತದಾರರಿದ್ದಾರೆ, ಅವರು ನಿನ್ನನ್ನು ಗೆಲ್ಲಿಸುತ್ತಾರೆ’ ಎಂದರು. ನೋಡಿದರೆ ಅರಸು ಹೇಳಿದಂತೆಯೇ ನಾನು ಗೆದ್ದಿದ್ದೆ, ಅದೂ 16 ಸಾವಿರ ಮತಗಳ ಅಂತರದಿಂದ.

ಅಲ್ಪಸಂಖ್ಯಾತರಿಗೆ ರಾಜಕೀಯ ಶಕ್ತಿ ಕೊಟ್ಟ ವ್ಯಕ್ತಿ, ದೇಶದಲ್ಲಿ ಒಬ್ಬನೇ ಒಬ್ಬ- ಅದು ದೇವರಾಜ ಅರಸು. 1972ರಲ್ಲಿ 15 ಮಂದಿಗೆ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ಕೊಟ್ಟರು, 12 ಜನ ಗೆದ್ದು ಶಾಸಕರಾದರು. 1978 ರಲ್ಲಿ 15 ಜನರನ್ನು ಆಯ್ದು ಟಿಕೆಟ್ ಕೊಟ್ಟರು, 12 ಶಾಸಕರು ಗೆದ್ದಿದ್ದರು. ಇಲ್ಲಿಯವರೆಗೆ ಯಾವ ಪಾರ್ಟಿಯಿಂದಲೂ ಈ ರೀತಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿದ್ದು, ಗೆಲ್ಲಿಸಿದ್ದು ಆಗಿಲ್ಲ. ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ಮತ್ತು ನಾಡಿನಲ್ಲಿ ಕೋಮುಸಾಮರಸ್ಯ ಕಾಪಾಡಲು ಅರಸು ಶಕ್ತಿಮೀರಿ ಶ್ರಮಿಸಿದ್ದಾರೆ.

ಅರಸು ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕ್ರಮ ಹೇಗೆ?

ಬಸವಣ್ಣನಂತಹ ಕ್ರಾಂತಿಕಾರಿಯನ್ನು ಕಂಡ ನಾಡು ನಮ್ಮದು. ಆ ಬಸವಣ್ಣನ ತತ್ವಗಳನ್ನು ಜಾರಿಗೆ ತಂದ ನಿಜವಾದ ನಾಯಕ ಅರಸು. ಅವರ ಮಂತ್ರಿಮಂಡಲವೇ ಅನುಭವ ಮಂಟಪ. ಅವರ ಭೂ ಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಹಾವನೂರು ಆಯೋಗ ಜಾರಿಗೆ ತಂದದ್ದು, ಋಣ ಪರಿಹಾರ... ಕಾರ್ಯಕ್ರಮಗಳನ್ನು ಇಂದಿನ ಪೀಳಿಗೆಯ ಯುವಕರಿಗೆ, ಅದರಲ್ಲೂ ಹಿಂದುಳಿದ ವರ್ಗದ ಯುವ ಜನತೆಗೆ ತಿಳಿಸಿ ಕೊಡುವಂತಹ ಕೆಲಸ ಮಾಡಿದರೆ, ಅರಸು ಜನಮನದಲ್ಲಿ ಜೀವಂವಾಗಿ ಉಳಿಯುತ್ತಾರೆ, ಉಳಿಯುವಂತಾಗಲಿ.

1 ಆಗಸ್ಟ್ 2015ರಿಂದ ಆಗಸ್ಟ್ 2016ರವರೆಗೆ ಕರ್ನಾಟಕ ಸರಕಾರ ದೇವರಾಜ ಅರಸು ಶತಮಾನೋತ್ಸವನ್ನು ಆಚರಿಸಿತು.

Writer - ಸಂದರ್ಶನ: ಬಸು ಮೇಗಲಕೇರಿ

contributor

Editor - ಸಂದರ್ಶನ: ಬಸು ಮೇಗಲಕೇರಿ

contributor

Similar News