ಹತ್ತು ದಿನಗಳಲ್ಲಿ 10 ಸಾವಿರ ಶಾಲಾ ಶಿಕ್ಷಕರ ನೇಮಕ: ಪ್ರಾಥಮಿಕ ಶಿಕ್ಷಣ ಸಚಿವ ಮಹೇಶ್
ಬೆಂಗಳೂರು, ಜು. 10: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇನ್ನು ಹತ್ತು ದಿನಗಳಲ್ಲಿ 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸುಭಾಷ್ ಗುತ್ತೇದಾರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, 10 ಸಾವಿರ ಪದವೀಧರ ಶಾಲಾ ಶಿಕ್ಷಕರನ್ನು ನೇಮಕಾತಿ ಶೀಘ್ರದಲ್ಲೆ ಪೂರ್ಣಗೊಳಿಸಲಿದ್ದು, ರಾಜ್ಯದಲ್ಲಿನ ಶಿಕ್ಷಕರ ಸಮಸ್ಯೆ ಪರಿಹಾರ ಕಲ್ಪಿಸಲಾಗುವುದು ಎಂದರು.
ರಾಜ್ಯದಲ್ಲಿ ಒಟ್ಟು 25,600 ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಿದ್ದು, ಆ ಪೈಕಿ ಪ್ರಾಥಮಿಕ ಶಾಲೆಗಳಲ್ಲಿ 12,500 ಹಾಗೂ ಪ್ರೌಢಶಾಲೆಗಳಲ್ಲಿ 3,100ಹುದ್ದೆಗಳು ಸೇರಿದಂತೆ ಒಟ್ಟು 15,600 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಸ್ಥಳಾಂತರ: ರಾಜ್ಯದ 58 ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆಯಿದ್ದು, ವಿದ್ಯಾರ್ಥಿಗಳು ಹೆಚ್ಚಿರುವ ಮತ್ತು ಅಗತ್ಯವಿರುವ ಕಡೆಗಳಿಗೆ ಅಂತಹ ಕಾಲೇಜುಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಸದಸ್ಯ ಎಸ್.ಟಿ.ಸೋಮಶೇಖರ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಪದವಿ ಪೂರ್ವ ಕಾಲೇಜುಗಳನ್ನು ಸ್ಥಳಾಂತರದ ವೇಳೆ ಆಡಳಿತ ಹಾಗೂ ವಿಪಕ್ಷಗಳ ಕ್ಷೇತ್ರಗಳೆಂಬ ಭೇದ-ಭಾವ ಮಾಡುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸ್ಥಳಾಂತರ ಮಾಡಲಾಗುವುದು ಎಂದ ಸಚಿವ ಮಹೇಶ್, ಬೆಂಗಳೂರಿನ ತಾವರೆಕೆರೆಯಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗಿರಿ ಭತ್ತೆ
‘ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ 21 ಶಾಲೆಗಳ ಶಿಕ್ಷಕರಿಗೆ ‘ಗಿರಿ ಭತ್ತೆ’ ನೀಡಲು ಪರಿಶೀಲಿಸಲಾಗುವುದು. ಆದರೆ, ಬೆಟ್ಟದ ತಪ್ಪಲಿನಲ್ಲಿರುವ ಶಾಲೆಗಳಲ್ಲಿ ಗಿರಿ ಭತ್ತೆ ನೀಡಲು ಅವಕಾಶವಿಲ್ಲ. ಅಲ್ಲದೆ, ಕೊಡಗು ಜಿಲ್ಲೆ ಸಹಿತ ಮಲೆನಾಡಿನ ಗ್ರಾಮೀಣ ಭಾಗದ ಶಿಕ್ಷಕರಿಗೂ ಗಿರಿ ಭತ್ತೆ ನೀಡುವ ಸಂಬಂಧ ಸಿಎಂ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು’
-ಎನ್.ಮಹೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ