4800 ಪ್ರಾಧ್ಯಾಪಕರ ಹುದ್ದೆಗಳ ಭರ್ತಿ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಬೆಂಗಳೂರು, ಜು. 10: ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿದಂತೆ 4,800 ವಿವಿಧ ಹುದ್ದೆಗಳು ಖಾಲಿ ಇದ್ದು, ಆದ್ಯತೆ ಮೇಲೆ ಆ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಡಾ.ಉಮೇಶ್ ಯಾದವ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳು ಸೇರಿದಂತೆ 3,800 ಹುದ್ದೆಗಳು ಪದವಿ ಕಾಲೇಜುಗಳಲ್ಲಿ ಖಾಲಿ ಇವೆ. ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 1 ಸಾವಿರ ಹುದ್ದೆಗಳು ಖಾಲಿ ಇವೆ. ಪ್ರಾಂಶುಪಾಲರ ಹುದ್ದೆ ಖಾಲಿ ಇರುವ ಕಾಲೇಜುಗಳಲ್ಲಿ ಉಸ್ತುವಾರಿ ಪ್ರಾಂಶುಪಾಲರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ನಿಯೋಜನೆ ಬಗ್ಗೆ ಪರಿಶೀಲನೆ: ಉತ್ತರ ಕರ್ನಾಟಕದಲ್ಲಿ ನೇಮಕಗೊಂಡಿರುವ ಉಪನ್ಯಾಸಕರನ್ನು ಹಳೇ ಮೈಸೂರು ಭಾಗಕ್ಕೆ ನಿಯೋಜನೆ ಮೇಲೆ ಕಳುಹಿಸಿರುವ ಬಗ್ಗೆ ಪರಿಶೀಲನೆ ಮಾಡಿ ತುರ್ತು ಕ್ರಮ ಕೈಗೊಳ್ಳುವುದು ಎಂದು ಕಾಂಗ್ರೆಸ್ ಸದಸ್ಯ ಬಿ.ಸಿ.ಪಾಟೀಲ್ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದರು.
ನಮ್ಮ ಸರಕಾರ ಯಾವುದೇ ಉಪನ್ಯಾಸಕರನ್ನು ವರ್ಗಾವಣೆ ಮಾಡುವುದಾಗಲಿ, ಅನ್ಯಸೇವೆ ಮೇಲೆ ನಿಯೋಜನೆ ಮಾಡಿಲ್ಲ ಎಂದು ಸ್ಪಷ್ಟಣೆ ನೀಡಿದ ಅವರು, ಮಂಡ್ಯದ ಬಸರಾಳುವಿನಲ್ಲಿ ಇರುವ ಸರಕಾರಿ ಪ್ರೌಢಶಾಲೆ ಕಟ್ಟಡದಲ್ಲಿ ಪದವಿ ಕಾಲೇಜು ಪ್ರಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
‘ಎಲ್ಲ ವಿಶ್ವವಿದ್ಯಾಲಯಗಳ ಪದವಿ/ಸ್ನಾತಕೋತ್ತರ ಕೋರ್ಸ್‌ಗಳ ದಾಖಲಾತಿ, ಪರೀಕ್ಷಾ ವೇಳಾಪಟ್ಟಿ ಮತ್ತು ಫಲಿತಾಂಶ ಪ್ರಕಟಣೆಯಲ್ಲಿ ಏಕರೂಪತೆ ತರಲು ಸರಕಾರ ವೇಳಾಪಟ್ಟಿ ನಿಗದಿಪಡಿಸಿ ಆದೇಶಿಸಿದೆ. ಫಲಿತಾಂಶ ಪ್ರಕಟಣೆ ಮತ್ತು ಅಂಕಪಟ್ಟಿ ವಿತರಣೆಯಲ್ಲಿ ಉಂಟಾಗುವ ತೊಂದರೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’
-ಜಿ.ಟಿ.ದೇವೇಗೌಡ ಉನ್ನತ ಶಿಕ್ಷಣ ಸಚಿವ