'ಪ್ರಾಥಮಿಕ ಶಿಕ್ಷಣ ಸಚಿವರು ಯಾರೆಂದು ಅರ್ಥವಾಗುತ್ತಿಲ್ಲ'
ಬೆಂಗಳೂರು, ಜು. 10: ಸಿದ್ದರಾಮಯ್ಯ ನೇತೃತ್ವದ ಸರಕಾರದ ಬದಲಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಆಡಳಿತಕ್ಕೆ ಬಂದಿದ್ದು, ಶಿಕ್ಷಣ ಸಚಿವರೂ ಬದಲಾಗಿದ್ದಾರೆ. ಆದರೆ, ಮಾಜಿ ಸಚಿವ ತನ್ವೀರ್ ಸೇಠ್ ಅವರು ಉತ್ತರ ನೀಡಿದರೆ ಹೇಗೆ? ಎಂದು ಬಿಜೆಪಿ ಸದಸ್ಯರು ತನ್ವೀರ್ ಸೇಠ್ ಕಾಲೆಳೆದ ಪ್ರಸಂಗ ನಡೆಯಿತು.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಶಿಕ್ಷಣ ಸಚಿವರ ಬೆಂಬಲಕ್ಕೆ ನಿಂತ ತನ್ವೀರ್ ಸೇಠ್ ಪೂರಕ ಮಾಹಿತಿ ನೀಡಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಅರವಿಂದ ಲಿಂಬಾವಳಿ, ಸಚಿವರನ್ನು ಬಿಟ್ಟು ಸದಸ್ಯರು ಉತ್ತರ ಕೊಡುತ್ತಿದ್ದಾರೆ. ಮಂತ್ರಿಗಳ್ಯಾರು ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸಿ.ಟಿ.ರವಿ, ‘ಮಂತ್ರಿ ಸ್ಥಾನ ಕಳೆದುಕೊಂಡ ನೋವಿನಲ್ಲಿ ತನ್ವೀರ್ ಸೇಠ್ ಉತ್ತರ ಹೇಳಿಕೊಂಡು ಕಳೆದುಕೊಳ್ಳುತ್ತಿದ್ದಾರೆ’ ಎಂದು ಛೇಡಿಸಿದರು. ‘ಸೇಠ್ ಅವರನ್ನು ಮಂತ್ರಿಯನ್ನಾಗಿ ಏಕೆ ಮಾಡುತ್ತಿಲ್ಲ ಎಂಬುದು ನನಗೆ ಗೊತ್ತಿಲ್ಲ ಎಂದು ಲಿಂಬಾವಳಿ ಧ್ವನಿಗೂಡಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ, ತನ್ವೀರ್ ಸೇಠ್ ಅವರು ಆ ಇಲಾಖೆಯನ್ನು ಮುನ್ನಡೆಸಿದ್ದು, ಅವರು ಉತ್ತರ ಕೊಡುತ್ತಿಲ್ಲ. ಪೂರಕವಾದ ಮಾಹಿತಿಯನ್ನು ನೀಡುತ್ತಿದ್ದಾರೆ ಅಷ್ಟೆ ಎಂದು ಸ್ಪಷ್ಟಣೆ ನೀಡಿದರು. ಬಳಿಕ ಮಾತನಾಡಿದ ತನ್ವೀರ್ ಸೇಠ್, ಎರಡೂವರೆ ಸಾವಿರ ಸರಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯಾಬಲದ ಆಧಾರದ ಮೇಲೆ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು ಎಂದರು.