ಜೆಡಿಎಸ್ ವಿರುದ್ಧ ಅಪಪ್ರಚಾರ ನಿಲ್ಲಿಸದಿದ್ದರೆ ಸುದ್ದಿವಾಹಿನಿ ಕಚೇರಿ ಮುಂದೆ ಪ್ರತಿಭಟನೆ: ಜೆಡಿಎಸ್ ಮುಖಂಡ ಪ್ರಕಾಶ್
ಬೆಂಗಳೂರು, ಜು.10: ಜೆಡಿಎಸ್ ಪಕ್ಷ ಹಾಗೂ ಪಕ್ಷದ ನಾಯಕರನ್ನು ಗುರಿಯಾಗಿಸಿ ಕೆಲವು ಕನ್ನಡ ಸುದ್ದಿ ವಾಹಿನಿಗಳು ತೇಜೋವಧೆ ಮಾಡುತ್ತಿವೆ. ಇದನ್ನು ಈ ಕೂಡಲೇ ನಿಲ್ಲಿಸದಿದ್ದರೆ, ತೇಜೋವಧೆ ಮಾಡುತ್ತಿರುವ ಸುದ್ದಿವಾಹಿನಿಗಳ ವಿರುದ್ಧ ಸಾಂವಿಧಾನಿಕ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಪ್ರಕಾಶ್ ಹೇಳಿದರು.
ಮಂಗಳವಾರ ನಗರದ ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮಗೆ ಎಲ್ಲ ಸುದ್ದಿವಾಹಿನಿಗಳ ಮೇಲೆ ವಿಶೇಷವಾದ ಗೌರವವಿದೆ. ರಾಜಕೀಯ ಪಕ್ಷಗಳು ಹಾಗೂ ಸರಕಾರ ಎಡವಿದಾಗ ಮಾಧ್ಯಮಗಳು ಟೀಕಿಸುವುದು ಸಹಜ. ಅದು ಮಾಧ್ಯಮದ ಹಕ್ಕು ಕೂಡಾ ಹೌದು. ಆದರೆ, ಕೆಲವು ಸುದ್ದಿವಾಹಿನಿಗಳ ಹಿರಿಯ ಸುದ್ದಿವಾಚಕರು ಹಾಗೂ ರಾಜಕೀಯ ವಿಶ್ಲೇಷಕರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ರೈತರ ಸಾಲ ಮನ್ನಾ ವಿಚಾರದಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿವೆ ಎಂದು ದೂರಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಮೃದುಸ್ವಭಾವ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರಿದರೇ ತಪ್ಪು ಸಂದೇಶ ಬಿತ್ತರ ಮಾಡುತ್ತಿರುವ ಸುದ್ದಿವಾಹಿನಿಗಳ ವಿರುದ್ಧ ಸಾಂವಿಧಾನಿಕ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಕೆಲವು ಸುದ್ದಿವಾಹಿನಿಗಳು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಹಾಗೂ ಬಜೆಟ್‌ನಲ್ಲಿ ಘೋಷಿಸಿರುವ ರೈತರ ಸಾಲ ಮನ್ನಾ ಮತ್ತು ಇಂಧನ ದರ ಏರಿಕೆ ಮುಂದಿಟ್ಟುಕೊಂಡು ನಕಾರಾತ್ಮಕವಾಗಿ ಟೀಕಿಸುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿವೆ. ಇಂತಹ ಸುದ್ದಿಗಳಿಂದಾಗಿ ಜನರ ಮನದಲ್ಲಿ ಆಡಳಿತ ವಿರೋಧಿ ಮನೋಭಾವ ಮೂಡುತ್ತಿದ್ದು, ಪಕ್ಷದ ವರ್ಚಿಸ್ಸಿಗೆ ಧಕ್ಕೆ ಆಗುತ್ತಿದೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ನಮ್ಮ ಪಕ್ಷ ಹಾಗೂ ಪಕ್ಷದ ನಾಯಕರ ಬಗ್ಗೆ ಪ್ರಚೋದನಕಾರಿಯಾಗಿ ಸುದ್ದಿ ಬಿತ್ತರಿಸುತ್ತಿರುವ ಕೆಲವು ಸುದ್ದಿ ವಾಹಿನಿಗಳ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಜೆಡಿಎಸ್‌ನ ಸ್ಥಳೀಯ ಮಟ್ಟದ ಕಾರ್ಯಕರ್ತರು ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿ, ವಾಹಿನಿಗಳು ಪಕ್ಷ ಹಾಗೂ ವರಿಷ್ಠರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವಂತಹ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ಈ ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಸುದ್ದಿವಾಹಿನಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 4ವರ್ಷಗಳು ಕಳೆದಿವೆ. ಯಾರೊಬ್ಬರ ಖಾತೆಗೂ ನಯಾಪೈಸ ಜಮೆಯಾಗಿಲ್ಲ. ಆದರೂ ಸಹ ಕೆಲ ಮಾಧ್ಯಮಗಳು ಪ್ರಧಾನಿ ಮೋದಿಯನ್ನು ಪ್ರಶಂಸಿಸಿ ಸುದ್ದಿ ಬಿತ್ತರ ಮಾಡುತ್ತವೆ’
- ಪಿ.ಪ್ರಕಾಶ್, ಜೆಡಿಎಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ