ಭದ್ರಾ ಮೇಲ್ದಂಡೆ ಯೋಜನೆ: ಮಾನವೀಯ ನೆಲೆಯಲ್ಲಿ ಪರಿಹಾರಕ್ಕೆ ಪರಿಶೀಲನೆ; ಡಿಕೆಶಿ
ಬೆಂಗಳೂರು, ಜು. 10: ಭದ್ರಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನಕ್ಕೆ ಕೇಂದ್ರದ ನೂತನ ಭೂಸ್ವಾಧೀನ ಕಾಯ್ದೆಯನ್ವಯ ಪರಿಹಾರ ನೀಡಲಾಗಿದೆ. ಆದರೆ, ಮತ್ತಷ್ಟು ಹೆಚ್ಚಿಸುವ ಸಂಬಂಧ ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಗೂಳಿಹಟ್ಟಿ ಶೇಖರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಭದ್ರಾ ಯೋಜನೆಯಡಿ ಭೂಸ್ವಾಧೀನಕ್ಕೆ ಶೇ.100ರಷ್ಟು ಪರಿಹಾರ ಧನವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಪರಿಹಾರ ಧನ ವಿಳಂಬವಾಗಿರುವುದಕ್ಕೆ ಶೇ.12ರಷ್ಟು ಬಡ್ಡಿ ಸೇರಿ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಮಾನವೀಯ ನೆಲೆಯಲ್ಲಿ ಮತ್ತಷ್ಟು ಪರಿಹಾರ ಹೆಚ್ಚಳಕ್ಕೆ ಅವಕಾಶವಿಲ್ಲ. ಆದರೂ ಈ ಬಗ್ಗೆ ಬೇರೆ ರೂಪದಲ್ಲಿ ಪರಿಹಾರ ನೀಡುವ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದು ಶಿವಕುಮಾರ್ ಭರವಸೆ ನೀಡಿದರು.
‘ಶೂನ್ಯವೇಳೆಯಲ್ಲಿ 24 ಗಂಟೆ ಅವಧಿಯೊಳಗೆ ನಡೆದ ಘಟನೆಗಳ ಬಗ್ಗೆಯಷ್ಟೇ ಪ್ರಸ್ತಾಪಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹಳೆಯ ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸಬಹುದೆಂಬುದರ ಕುರಿತು ತಿಳುವಳಿಕೆಯನ್ನು ಎಲ್ಲ ಸದಸ್ಯರಿಗೆ ಕೊಡಿ’ ಎಂದು ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಮನವಿ ಮಾಡಿದರು.
‘ಭದ್ರಾ ಮೇಲ್ದಂಡೆ ಯೋಜನೆ ವಿಚಾರವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಸ್ಪೀಕರ್ ರಮೇಶ್‌ಕುಮಾರ್ ಅವಕಾಶ ಕಲ್ಪಿಸಿದ್ದು, 24 ಗಂಟೆಯೊಳಗೆ ನಡೆದ ವಿಚಾರದ ಬಗ್ಗೆ ಸ್ಪೀಕರ್ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಲಾಗುವುದು’
-ಎಂ.ಕೃಷ್ಣಾರೆಡ್ಡಿ ಉಪ ಸಭಾಧ್ಯಕ್ಷ