ಕಡಲೆ ಬೆಳೆಗಾರರಿಗೆ 70 ಕೋಟಿ ರೂ.ಬಿಡುಗಡೆ: ಸಚಿವ ಶಿವಶಂಕರರೆಡ್ಡಿ

Update: 2018-07-10 14:40 GMT

ಬೆಂಗಳೂರು, ಜು.10: ಕಡಲೆ ಬೆಳೆಗಾರರಿಗೆ 250 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಪಾವತಿಸಬೇಕಿದೆ. ಇತ್ತೀಚೆಗೆ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಲಾಗಿತ್ತು. ಈಗ 70 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆಂದು ಮಾಹಿತಿ ಸಿಕ್ಕಿದೆ ಎಂದು ಕೃಷಿ ಸಚಿವ ಎಚ್.ಎನ್.ಶಿವಶಂಕರ ರೆಡ್ಡಿ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ಜಗದೀಶ್ ಶೆಟ್ಟರ್ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಅವರು ಮಾತನಾಡಿದರು. ಎರಡು ವರ್ಷಗಳ ಹಿಂದೆ ಕಡಲೆ ಬೆಲೆ ಕುಸಿತಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಧ್ಯಪ್ರವೇಶಿಸಿ 500 ಕೋಟಿ ರೂ.ಗಳಿಗೆ ಕಡಲೆಯನ್ನು ಖರೀದಿ ಮಾಡಿತ್ತು. ಈ ಪೈಕಿ 250 ಕೋಟಿ ರೂ.ಗಳನ್ನು ರೈತರಿಗೆ ಪಾವತಿ ಮಾಡಲಾಗಿದೆ. ಉಳಿದ 250 ಕೋಟಿ ರೂ.ಪಾವತಿಗೆ ಬಾಕಿಯಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಕೇಂದ್ರ ಕೃಷಿ ಸಚಿವರು ಬೆಂಗಳೂರಿಗೆ ಬಂದಿದ್ದಾಗ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಅವರು ನಾಫೆಟ್ ಸಂಸ್ಥೆಗೆ ಕರೆ ಮಾಡಿ ಹಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಪೈಕಿ 70 ಕೋಟಿ ರೂ.ಗಳನ್ನು ಈಗ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಶಿವಶಂಕರ ರೆಡ್ಡಿ ತಿಳಿಸಿದರು.

ಅಧಿವೇಶನ ಮುಕ್ತಾಯಗೊಂಡ ಬಳಿಕ ನಾನು ಮತ್ತೆ ಹೊಸದಿಲ್ಲಿಗೆ ತೆರಳುತ್ತಿದ್ದು, ನೀವು ನಮ್ಮ ಜೊತೆ ಬಂದು ಕೈ ಜೋಡಿಸಿದರೆ ರೈತರಿಗೆ ನ್ಯಾಯ ದೊರಕಿಸಿ ಕೊಡಬಹುದು ಎಂದು ಜಗದೀಶ್ ಶೆಟ್ಟರ್ ಅವರನ್ನು ಶಿವಶಂಕರ ರೆಡ್ಡಿ ಆಹ್ವಾನಿಸಿದರು. ಇದಕ್ಕೆ ಜಗದೀಶ್ ಶೆಟ್ಟರ್ ಸಹಮತ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News