ತಾಯಿಯ ಮೃತದೇಹವನ್ನು ಬೈಕ್‌ಗೆ ಕಟ್ಟಿ ಮರಣೋತ್ತರ ಪರೀಕ್ಷೆಗೆ ಒಯ್ದ ಪುತ್ರ !

Update: 2018-07-11 05:13 GMT

ಭೋಪಾಲ್, ಜು. 11: ಯುವಕನೊಬ್ಬ ತನ್ನ ತಾಯಿಯ ಮೃತದೇಹವನ್ನು ಮೋಟರ್‌ಸೈಕಲ್‌ಗೆ ಕಟ್ಟಿಕೊಂಡು ಮರಣೋತ್ತರ ಪರೀಕ್ಷೆಗೆ ಒಯ್ಯುವ ದೃಶ್ಯಾವಳಿಯನ್ನು ಒಳಗೊಂಡ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟಿಕಂಘರ್ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃತದೇಹ ಒಯ್ಯಲಾಗಿದ್ದು, ಈ ಘಟನೆ ಆಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಮಸ್ತಾಪುರ ಗ್ರಾಮದ ಕನ್ವರ್‌ಬಾಯಿ ಎಂಬ ಮಹಿಳೆಗೆ ರವಿವಾರ ಹಾವು ಕಡಿದಿತ್ತು. ಆಕೆಯನ್ನು ಮೋಹನ್‌ಗಢದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟರು. ದೇಹವನ್ನು 35 ಕಿಲೋಮೀಟರ್ ದೂರದ ಟಿಕಂಘರ್ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಯ್ಯುವಂತೆ ಪೊಲೀಸರು ಈಕೆಯ ಪುತ್ರ ರಾಜೇಶ್‌ಗೆ ಸೂಚಿಸಿದ್ದರು. ಆದರೆ ಆಡಳಿತ ವ್ಯವಸ್ಥೆ ರಾಜೇಶ್‌ಗೆ ಶವವಾಹನ ಒದಗಿಸಿರಲಿಲ್ಲ.
ಇದರಿಂದ ಅನಿವಾರ್ಯವಾಗಿ ರಾಜೇಶ್ ತನ್ನ ತಾಯಿಯ ಶವವನ್ನು ಮೋಟರ್‌ಸೈಕಲ್‌ಗೆ ಕಟ್ಟಿ ಸಂಬಂಧಿಯೊಬ್ಬನ ನೆರವಿನೊಂದಿಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಿದ ಎನ್ನಲಾಗಿದೆ. ಆದರೆ ಮೃತದೇಹವನ್ನು ವಾಪಾಸು ತರಲು ಜಿಲ್ಲಾ ಆಸ್ಪತ್ರೆ ಈತನಿಗೆ ಶವವಾಹನ ಒದಗಿಸಿತ್ತು.

"ರಾಜೇಶ್ ತಾಯಿಗೆ ಹಾವು ಕಡಿತ ತಕ್ಷಣ ಆಕೆಯನ್ನು ದೇವಾಲಯಕ್ಕೆ ಕರೆದೊಯ್ದಲ್ಲಿ ಗುಣಮುಖಳಾಗುತ್ತಾಳೆ ಎಂಬ ನಂಬಿಕೆಯಿಂದ ಆಕೆಯನ್ನು ದೇವಾಲಯಕ್ಕೆ ಕರೆದೊಯ್ಯಲು ನಿರ್ಧರಿಸಿದ್ದ. ಆದರೆ ಬಳಿಕ ಮನಸ್ಸು ಬದಲಾಯಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ" ಎಂದು ಜಿಲ್ಲಾಧಿಕಾರಿ ಅಭಿಜಿತ್ ಅಗರ್‌ವಾಲ್ ಘಟನೆ ಬಗ್ಗೆ ವಿವರ ನೀಡಿದ್ದಾರೆ.

108ಗೆ ಕರೆ ಮಾಡಿದ್ದರೆ ಜಿಲ್ಲಾ ಆಸ್ಪತ್ರೆಯೇ ಶವವಾಹನಕ್ಕೆ ವ್ಯವಸ್ಥೆ ಮಾಡುತ್ತಿತ್ತು ಎಂದು ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾಗಿ ಜಿಲ್ಲಾಧಿಕಾರಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News