ಸಾಲಮನ್ನಾವನ್ನು ಹಳದಿ ಕಣ್ಣಿನಿಂದ ನೋಡುವುದು ಸಲ್ಲ: ಶಾಸಕ ಎ.ಟಿ.ರಾಮಸ್ವಾಮಿ

Update: 2018-07-11 13:14 GMT

ಬೆಂಗಳೂರು, ಜು. 11: ‘ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 34 ಸಾವಿರ ಕೋಟಿ ರೂ.ರೈತರ ಸಾಲಮನ್ನಾ ಮಾಡಿದ್ದು, ಇದನ್ನು ಹಳದಿ ಕಣ್ಣಿನಿಂದ ನೋಡಬಾರದು ಎಂದು ಮನವಿ ಮಾಡಿದ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ, ರೈತರ ಸಂಪೂರ್ಣ ಸಾಲಮನ್ನಾ ಭರವಸೆ ನೀಡಿದ್ದು ನಿಜ. ಭರವಸೆ ಈಡೇರಿಸಲು ಐದು ವರ್ಷ ಕಾಲಾವಕಾಶವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ಸಾಲಮನ್ನಾ ಯೋಜನೆ ಪರಿಷ್ಕರಣೆ ಮಾಡಬೇಕು. ಇದು ಎಲ್ಲ ರೈತರಿಗೂ ಅನುಕೂಲ ಆಗಬೇಕು. ಅಲ್ಲದೆ, ಪಡಿತರ ಚೀಟಿದಾರರಿಗೆ 7 ಕೆಜಿ ಅಕ್ಕಿ ಮುಂದುವರಿಸಬೇಕು. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿದರು.

ಉತ್ತಮ ಆಡಳಿತ ನೀಡಲು ಹೆಚ್ಚು ಕಾರ್ಯಕ್ರಮಗಳನ್ನು ಘೋಷಿಸಬೇಕು. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರಕಾರ ಗಮನಹರಿಸಬೇಕು. ಕಾವೇರಿ ನೀರು ನಿರ್ವಹಣಾ ಸಮಿತಿ ರಚನೆಯಾಗಿರುವ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಆಸ್ಥೆ ವಹಿಸಬೇಕೆಂದು ಒತ್ತಾಯಿಸಿದರು.

‘ನಮಗೆ ಮೇಯುವ ಹೋರಿ ಬೇಕಿಲ್ಲ, ದುಡಿಯುವ ಎತ್ತುಗಳು ಬೇಕು. ಹೋರಿ ಸಂಸ್ಕೃತಿ ಕಾಯಕ ಸಂಸ್ಕೃತಿಯಲ್ಲ’ ಎಂದು ಭ್ರಷ್ಟರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಎ.ಟಿ.ರಾಮಸ್ವಾಮಿ, ಮೇಯುವ ಅಧಿಕಾರಿಗಳನ್ನು ಹೊರಗಟ್ಟಿ ಸೋರಿಕೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಶ್ರೀಮಂತರ ಬದಲಾಗಿ ಬಡವರ ದೃಷ್ಟಿಕೋನದಿಂದ ಅಭಿವೃದ್ಧಿ ಕಾರ್ಯಗಳನ್ನು ನೋಡಬೇಕಿದೆ. ನಮ್ಮ ದೇಶ ಬಡವರಿಂದ ತುಂಬಿದ ಶ್ರೀಮಂತ ರಾಷ್ಟ್ರ. ಸರಕಾರದ ಸೌಲಭ್ಯಗಳು ಜನರಿಗೆ ಉಚಿತವಾಗಿ ದೊರೆಯಬೇಕು. ಕೊಂಡು ಕೊಂಡೆ ಎಂಬ ಮನೋಭಾವ ಬರದಂತೆ ನೋಡಿಕೊಳ್ಳಬೇಕಿದೆ ಎಂದ ಅವರು, ವಿಪಕ್ಷವೂ ಸರಕಾರ ಹಳಿ ತಪ್ಪದಂತೆ ಕಣ್ಗಾವಲಿಡಬೇಕು ಎಂದು ಕೋರಿದರು. ಒಂದರಿಂದ 10ನೆ ತರಗತಿ ವರೆಗೆ ಆಂಗ್ಲಭಾಷೆ ಬೋಧನೆ ಮಾಡುವ ಸರಕಾರದ ಕ್ರಮ ಸ್ವಾಗತಾರ್ಹ. ಹಳ್ಳಿಗಾಡಿನ ಮಕ್ಕಳಿಗೂ ಇಂಗ್ಲಿಷ್ ಜ್ಞಾನ ಅನಿವಾರ್ಯ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿದ್ದು, ಒಳ್ಳೆಯ ಕಟ್ಟಡ ಕಟ್ಟಿದರೂ ವೈದ್ಯರಿಲ್ಲದಿದ್ದರೆ ಪ್ರಯೋಜನ ಆಗುವುದಿಲ್ಲ. 1ಸಾವಿರ ಜನರಿಗೆ ಒಬ್ಬ ವೈದ್ಯರಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಆದರೆ, 13 ಸಾವಿರ ಮಂದಿಗೆ ಒಬ್ಬ ವೈದ್ಯರಿದ್ದಾರೆ. ಆದುದರಿಂದ ತಜ್ಞ ವೈದ್ಯರ ಕೊರತೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ನಕಲಿ ಬಿಲ್ ನಿಲ್ಲಿಸಿ: ಕೇವಲ 18 ಸಾವಿರ ಮಂದಿ ಗುತ್ತಿಗೆ ಕಾರ್ಮಿಕರಿಂದ ಕೆಲಸ ಮಾಡಿಸಿ 44 ಸಾವಿರ ಮಂದಿಗೆ ಕಾರ್ಮಿಕರಿಗೆ ನಕಲಿ ಬಿಲ್ ಸೃಷ್ಟಿಸಿ ಜನರ ತೆರಿಗೆ ಹಣವನ್ನು ನುಂಗಿ ನೀರು ಕುಡಿದರೆ ಆಡಳಿತವೇ? ಎಂದು ಪ್ರಶ್ನಿಸಿದ ಅವರು, ಇಲ್ಲಿ ಮೇಲಾಧಿಕಾರಿಗಳು ಬದುಕಿದ್ದಾರೋ ಸತ್ತಿದ್ದಾರೋ? ಇದು ಪರಿಶುದ್ಧ ಆಡಳಿತ ಹೇಗೆ ಆಗುತ್ತದೆ. ಇಂತಹ ಖೊಟ್ಟಿ ಬಿಲ್‌ಗಳಿಗೆ ಕಡಿವಾಣ ಹಾಕಬೇಕು ಎಂದರು.

ಜೂಜು: ಸರಕಾರದ ನಿಯಮ ಉಲ್ಲಂಘಿಸಿ ಹಿಂದುಳಿದ ವರ್ಗಗಳ ಇಲಾಖೆ ಕಟ್ಟಡ ನಿರ್ಮಾಣ ಸೊಸೈಟಿಯ ಕಾರ್ಯ ನಿರ್ವಾಹಕ ನಿರ್ದೇಶಕ 10.50 ಕೋಟಿ ರೂ. ಸೊಸೈಟಿ ಹಣವನ್ನು ಅನಧಿಕೃತವಾಗಿ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಜೂಜಾಟ ಆಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪೆಗ್ಗೋ-ಕ್ವಾಟ್ರೋ..
‘ಅಬಕಾರಿ ತೆರಿಗೆ ಹೆಚ್ಚಳಕ್ಕೆ ನನಗೇನು ಬೇಸರವಿಲ್ಲ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟಕ್ಕೆ ಗುರಿ ನೀಡಿ ಮದ್ಯಪಾನ ಸಂಯಮ ಮಂಡಳಿಯೂ ಇರುವುದು ದ್ವಂದ್ವ. ಅಬಕಾರಿ ಬದಲಿಗೆ ಅನ್ಯಮೂಲಗಳಿಂದ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಬೇಕು. ಅಪ್ಪ ಕುಡುಕನಾಗಿದ್ದರೆ ಎಷ್ಟು ಭಾಗ್ಯಗಳನ್ನು ನೀಡಿದರೆ ಪ್ರಯೋಜನ ಆಗುವುದಿಲ್ಲ. ‘ಒಂದು ಪೆಗ್ಗೋ, ಎರಡು ಪೆಗ್ಗೋ ಅಥವಾ ಕ್ವಾಟ್ರೋ..’ ಎಂದು ಸದಸ್ಯರೊಬ್ಬರು ಪ್ರಶ್ನಿಸಿದ ಪ್ರಸಂಗವೂ ನಡೆಯಿತು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News