ಜು.14,15 ರಂದು ರಾಷ್ಟ್ರೀಯ ಬೌದ್ಧ ಸಮ್ಮೇಳನ

Update: 2018-07-11 13:17 GMT

ಬೆಂಗಳೂರು, ಜು.11: ಕರ್ನಾಟಕ ಬೌದ್ಧ ಸಮಾಜದ ವತಿಯಿಂದ 2562 ನೆ ಬುದ್ಧ ಪೂರ್ಣಿಮೆ ಹಾಗೂ ಅಂಬೇಡ್ಕರ್‌ರ 127 ನೆ ಜಯಂತಿಯ ಅಂಗವಾಗಿ ಜು.14 ಮತ್ತು 15 ರಂದು ಆಧುನಿಕ ಕಾಲಘಟ್ಟದಲ್ಲಿ ಬೌದ್ಧ ಧರ್ಮದ ಪ್ರಸುತ್ತತೆ, ಅಗತ್ಯತೆ ಮತ್ತು ಪ್ರಸರಣ ವಿಷಯದ ಕುರಿತು ರಾಷ್ಟ್ರಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಸಂಘಟನೆಯ ಕಾರ್ಯದರ್ಶಿ ಗೋವಿಂದರಾಜು, ಕಳೆದ ನಾಲ್ಕು ವರ್ಷಗಳಿಂದ ಹಲವಾರು ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದೇ ಮೊದಲ ಬಾರಿಗೆ ಎರಡು ದಿನಗಳ ರಾಷ್ಟ್ರೀಯ ಬೌದ್ಧ ಸಮ್ಮೇಳನವನ್ನು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ದೇಶದ ಹಲವು ಬೌದ್ಧ ಭಂತೇಜಿಗಳು, ಸಂಶೋಧಕರು, ಬಹುಜನ ಚಿಂತಕರು, ಹೋರಾಟಗಾರರು, ಬರಹಗಾರರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಮೊದಲ ದಿನದಂದು, ವಿಧಾನಸೌಧ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ, ಕಾಪೋರೇಷನ್ ವೃತ್ತದ ಮೂಲಕ ಪುರಭವನದವರೆಗೂ ‘ವಿಶ್ವ ಶಾಂತಿಗಾಗಿ ಬುದ್ಧನೆಡೆಗೆ ನಮ್ಮ ನಡಿಗೆ’ ಎಂಬ ಮಾನವ ಬಂಧುತ್ವ ಧರ್ಮ ರಥದೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕಡೆಗಳಿಂದ ಒಂದು ಸಾವಿರಕ್ಕಿಂತಲೂ ಅಧಿಕ ಜನರು ಬೌದ್ಧ ಧರ್ಮ ದೀಕ್ಷೆಯನ್ನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಹಾಗೂ ಬೌದ್ಧ ಸಂಘ ಮತ್ತು ಧರ್ಮಚಾರಿಗಳಿಗೆ, ಧರ್ಮಧೂತ, ಧರ್ಮಶ್ರೀ, ಧರ್ಮ ದೀಪ ಎಂಬ ರಾಷ್ಟ್ರೀಯ ಮತ್ತು ರಾಜ್ಯ ಪುರಸ್ಕಾರಗಳನ್ನ ನೀಡಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬುದ್ಧರ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನಾ ಮಾರ್ಗವನ್ನು ಜನರಿಗೆ ತಲುಪಿಸುತ್ತ, ಬಹುಜನರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಜಾಗೃತಿಯನ್ನು ಮೂಡಿಸಿ ಸಮ ಸಮಾಜದ ಪ್ರಬುದ್ಧ ಭಾರತವನ್ನು ನಿರ್ಮಾಣ ಮಾಡುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News