ಮೈತ್ರಿ ಸರಕಾರ ಕುರುಡರು, ಕುಂಟರನ್ನು ಹೊತ್ತು ಸಾಗಿದಂತೆ ನಡೆಯುತ್ತಿದೆ: ಶಾಸಕ ಗೋವಿಂದ ಕಾರಜೋಳ
ಬೆಂಗಳೂರು, ಜು. 11: ‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಕುರುಡರು, ಕುಂಟರನ್ನು ಹೊತ್ತು ಸಾಗಿದಂತೆ ನಡೆಯುತ್ತಿದೆ. ಇನ್ನು ಈ ಸರಕಾರ ಮಂಡಿಸಿದ ಬಜೆಟ್ ಬಗ್ಗೆ ಮಾತನಾಡುವುದು ಎಂದರೆ ಆಯುಧವಿಲ್ಲದೆ ಯುದ್ಧಕ್ಕೆ ಹೋದಂತೆ ಆಗುತ್ತದೆ’ ಎಂದು ಬಿಜೆಪಿ ಉಪನಾಯಕ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಿಂದ ರಾಜ್ಯಕ್ಕೆ ದೊರೆಯುತ್ತಿರುವ 257 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಆಲಮಟ್ಟಿ ಜಲಾಶಯದ ಮುಳುಗಡೆ ಪ್ರದೇಶಗಳನ್ನು ಪರಿಹಾರ ಮತ್ತು ಪುನರ್ವಸತಿಗೆ 50 ಸಾವಿರ ಕೋಟಿ ರೂ.ಮೀಸಲಿಡಬೇಕು. ಜತೆಗೆ ನೀರಾವರಿ ಯೋಜನೆ ಅನುಷ್ಠಾನಕ್ಕೆ 20 ಸಾವಿರ ಕೋಟಿ ರೂ.ಸೇರಿದಂತೆ ಒಟ್ಟು 70 ಸಾವಿರ ಕೋಟಿ ರೂ.ಮೀಸಲಿಡಬೇಕು. ನೀರಾವರಿ ಯೋಜನೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ತೆಂಗಿನ ಬೆಳೆ ನಾಶಕ್ಕೆ ಪರಿಹಾರ ಘೋಷಿಸಿರುವಂತೆ ದ್ರಾಕ್ಷಿ, ದಾಳಿಂಬೆ, ನಿಂಬೆ ಬೆಳೆಗಾರರಿಗೆ ಪರಿಹಾರ ಪ್ರಕಟಿಸಬೇಕು. ಮಕ್ಕಳ ಕೊರತೆ ನೆಪದಲ್ಲಿ ಯಾವುದೇ ಸರಕಾರಿ ಶಾಲೆಗಳನ್ನು ಬಂದ್ ಮಾಡಬಾರದು ಎಂದ ಅವರು, ಎಸ್ಸಿ-ಎಸ್ಟಿ ವರ್ಗದ ಮಕ್ಕಳಿಗೆ ವೈದ್ಯಕೀಯ/ಎಂಜಿನಿಯರಿಂಗ್ ಶಿಕ್ಷಣ ಕೊಡಿಸಲು ಆಸ್ಥೆ ವಹಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಯಡಿಯೂರಪ್ಪ, ಕೃಷ್ಣಾ ಮೇಲ್ದಂಡೆ ಯೋಜನೆಗೆ 50 ಸಾವಿರ ಕೋಟಿ ರೂ.ವೆಚ್ಚ ಮಾಡುವ ಘೋಷಣೆ ಮಾಡಿದ್ದ ಹಿಂದಿನ ಸರಕಾರ 8,500ಕೋಟಿ ರೂ.ಗಳನ್ನಷ್ಟೇ ವೆಚ್ಚ ಮಾಡಿದೆ. ಹೀಗೆ ಮುಂದುವರೆದರೆ ಇನ್ನೂ 25ವರ್ಷ ಕಳೆದರೂ ಯೋಜನೆ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ನೀರಾವರಿಗೆ ಆದ್ಯತೆ ನೀಡಬೇಕು ಎಂದು ಕೋರಿದರು.
ನೀರಾವರಿ ಬಾಂಡ್: ‘ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಇಚ್ಛಾಶಕ್ತಿ ಅಗತ್ಯ. ಹಿಂದಿನ ಸರಕಾರ ನೀರಾವರಿ ಯೋಜನೆಗಳ ಬಗ್ಗೆ ಆಸಕ್ತಿ ವಹಿಸಿಲ್ಲ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಂಪನ್ಮೂಲ ಕ್ರೋಡೀಕರಣಕ್ಕೆ ನೀರಾವರಿ ಬಾಂಡ್ ಯೋಜನೆ ಜಾರಿಗೆ ತನ್ನಿ’ ಎಂದು ಬಿಜೆಪಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಅರ್ಕಾವತಿ ಪುನಶ್ಚೇತನಕ್ಕೆ ‘ಥೇಮ್ಸ್’ ನದಿ ಮಾದರಿ ಯೋಜನೆ ರೂಪಿಸಲಾಗುವುದು. ಅಲ್ಲದೆ, ಆಲಮಟ್ಟಿ ಪ್ರದೇಶದ ಮುಳುಗಡೆ ಗ್ರಾಮಗಳನ್ನು ಸ್ಥಳಾಂತರಿಸದೆ ‘ನಾರ್ವೆ’ ಮಾದರಿ ತಡೆಗೋಡೆ ನಿರ್ಮಿಸಲಾಗುವುದು ಎಂದ ಹಿಂದಿನ ಸಚಿವರು ಹೇಳಿದ್ದರು. ಆದರೆ, ಅದೇನೂ ಆಗಲಿಲ್ಲ. ನಮಗೆ ಆಲಮಟ್ಟಿ ಮಾದರಿಯಲ್ಲೆ ಪರಿಹಾರ ಕಲ್ಪಿಸಬೇಕೆಂದು ಬಸವರಾಜ ಬೊಮ್ಮಾಯಿ ಕೋರಿದರು.