×
Ad

ಪಡಿತರ ವ್ಯವಸ್ಥೆ ಸುಧಾರಣೆಗೆ ಅಧಿವೇಶನ ಬಳಿಕ ಜಿಲ್ಲಾವಾರು ಶಾಸಕರ ಸಭೆ: ಸಚಿವ ಝಮೀರ್‌ ಅಹ್ಮದ್

Update: 2018-07-11 19:30 IST

ಬೆಂಗಳೂರು, ಜು.11: ರಾಜ್ಯಾದ್ಯಂತ ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಪ್ರಸಕ್ತ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬಳಿಕ ಜು.15ರ ನಂತರ ಜಿಲ್ಲಾವಾರು ಶಾಸಕರ ಸಭೆಯನ್ನು ಕರೆದು ಸಮಗ್ರವಾಗಿ ಚರ್ಚೆ ನಡೆಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝೆಡ್. ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಸವರಾಜ ಬೊಮ್ಮಾಯಿ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಡವರಿಗೆ ವಿತರಿಸಬೇಕಾದ ಸುಮಾರು ಒಂದು ಲಕ್ಷ ಕ್ವಿಂಟಾಲ್ ಅಕ್ಕಿ, ಗೋಧಿ ಗೋದಾಮುಗಳಲ್ಲಿ ಕೊಳೆಯುತ್ತಿದೆ ಎಂದರು.

ಬಡವರಿಗೆ ಸಿಗಬೇಕಾದ ಆಹಾರ ಧಾನ್ಯಗಳು ಹಾಳಾಗುತ್ತಿದೆ. ರಾಜ್ಯಾದ್ಯಂತ ನೀವು ಪ್ರವಾಸ ಮಾಡಿ ನೋಡಿ, ಬೇಕಾದರೆ ನಾನು ನಿಮ್ಮ ಜೊತೆ ಬರುತ್ತೇನೆ. ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ನೋಡೋಣ ಎಂದು ಯಡಿಯೂರಪ್ಪ ಮಾಡಿದ ಮನವಿಗೆ ಸ್ಪಂದಿಸಿ, ಝಮೀರ್‌ ಅಹ್ಮದ್‌ ಖಾನ್ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಈ ಅಧಿವೇಶನ ಮುಕ್ತಾಯಗೊಂಡ ನಂತರ ಪ್ರತಿ ದಿನ ಎರಡು ಜಿಲ್ಲೆಗಳ ಶಾಸಕರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪಡಿತರ ವ್ಯವಸ್ಥೆಯನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ಗೋದಾಮುಗಳಲ್ಲಿ ಅಕ್ಕಿ, ಗೋಧಿ ಸರಬರಾಜು ಆಗದೆ ಹಾಗೆ ಉಳಿದಿರುವ ಕುರಿತು ನನಗೂ ಹಲವು ದೂರುಗಳು ಬಂದಿವೆ ಎಂದು ಝಮೀರ್‌ ಅಹ್ಮದ್‌ ಖಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News