ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಬಗ್ಗೆ ಮುಖ್ಯಮಂತ್ರಿಯಿಂದ ಜು.12ರಂದು ಅಧಿಕೃತ ಘೋಷಣೆ: ಸಚಿವ ತಮ್ಮಣ್ಣ
Update: 2018-07-11 19:54 IST
ಬೆಂಗಳೂರು, ಜು. 11: ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿವೇಶನದಲ್ಲಿ ಜು.12ರಂದು ಅಧಿಕೃತ ಘೋಷಣೆ ಮಾಡಲಿದ್ದಾರೆಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ತೀರ್ಮಾನಕ್ಕೆ ಎಚ್‌ಡಿಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೆ ಈ ಸಂಬಂಧ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದರು.
ರಾಜ್ಯದಲ್ಲಿ ಬಸ್ ಪ್ರಮಾಣದ ಟಿಕೆಟ್ ದರ ಹೆಚ್ಚಳದ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ. ಜನರಿಗೆ ಹೊರೆ ಹೇರಲು ಸರಕಾರ ಮುಂದಾಗುವುದಿಲ್ಲ ಎಂದು ತಮ್ಮಣ್ಣ, ಟಿಕೆಟ್ ದರ ಏರಿಕೆ ಸಂಬಂಧ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಣೆ ನೀಡಿದರು.