ಸರಕಾರ ಅನುದಾನ ಒದಗಿಸಿದರೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಚಿವ ಡಿ.ಸಿ ತಮ್ಮಣ್ಣ

Update: 2018-07-11 14:34 GMT

ಬೆಂಗಳೂರು, ಜು. 11: ರಾಜ್ಯ ಸರಕಾರ ಶೇ.100ರಷ್ಟು ಅಥವಾ ಕನಿಷ್ಠ 75 ರಷ್ಟು ಅನುದಾನವನ್ನು ಒದಗಿಸಿದರೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲು ಸಾಧ್ಯ ಎಂದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಬುಧವಾರ ಶೂನ್ಯ ವೇಳೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಸೌಲಭ್ಯದ ಬಗ್ಗೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಐವನ್ ಡಿಸೋಜ ಅವರು ಶಾಲಾ- ಕಾಲೇಜು ಆರಂಭವಾಗಿದ್ದರೂ ವಿದ್ಯಾರ್ಥಿಗಳಿಗೆ ಇನ್ನೂ ಉಚಿತ ಬಸ್ ಪಾಸ್ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ಸಚಿವ ತಮ್ಮಣ್ಣ ಅವರು 'ಸಾರಿಗೆ ಸಂಸ್ಥೆ 6 ಕೋಟಿ ರೂ. ಗಳ ನಷ್ಟ ಅನುಭವಿಸುತ್ತಿದೆ. ಕಳೆದ 5 ವರ್ಷಗಳಿಂದ ಸರಕಾರದಿಂದ ಬಾಕಿಯಿರುವ 5 ಕೋಟಿ ಹಣ ಕೂಡ ಬಂದಿಲ್ಲ. ಆರ್ಥಿಕ ಇಲಾಖೆ ತಡೆಹಿಡಿದಿದೆ' ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಸಚಿವರ ಉತ್ತರದಿಂದ ಗರಂ ಆದ ಕಾಂಗ್ರೆಸ್‌ನ ಎಸ್.ಆರ್. ಪಾಟೀಲ್ ಅವರು ಎರಡು ಸದನಗಳಲ್ಲೂ ಒಪ್ಪಿಗೆ ನೀಡಿದ್ದರೂ ತಡೆಹಿಡಿಯಲು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಏನು ಅಧಿಕಾರವಿದೆ ಎಂದು ಏರುದನಿಯಲ್ಲಿ ಪ್ರಶ್ನಿಸಿದರು.

ಒಂದು ಹಂತದಲ್ಲಿ ಸಚಿವ ತಮ್ಮಣ್ಣ ಅವರು '5 ವರ್ಷದಿಂದ ಬಾಕಿಯಿರುವ 500 ಕೋಟಿ ರೂ. ಹಣವನ್ನು ಯಾರು ಕೊಡುತ್ತಾರೆ, ನೀವು ಕೊಡುತ್ತೀರಾ' ಎಂದು ಬಿಜೆಪಿ ಸದಸ್ಯರತ್ತ ನೋಡುತ್ತಾ ಹೇಳಿದಾಗ ಬಿಜೆಪಿ ಸದ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಚಿವರ ಮಾತಿನಿಂದ ಕೆರಳಿದ ಬಿಜೆಪಿಯ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಇತರ ಸದಸ್ಯರು ಒಮ್ಮೆಲೆ ಎದ್ದು ನಿಂತು ಸಚಿವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಸದನ ದಿಕ್ಕು ತಪ್ಪುತ್ತಿದ್ದುದನ್ನು ಕಂಡ ಸಭಾಪತಿ ಬಸವರಾಜ ಹೊರಟ್ಟಿಯವರು ಸದಸ್ಯರನ್ನು ಸಮಾಧಾನಪಡಿಸಿ ಸದನಕ್ಕೆ ನಾಳೆ ಉತ್ತರ ನೀಡುವಂತೆ ಸಚಿವರಿಗೆ ಸೂಚಿಸಿ, ವಿಷಯಕ್ಕೆ ತೆರೆಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News