ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನದ ಕುರಿತು ಚರ್ಚೆಗೆ ಶಾಸಕರ ಪಟ್ಟು

Update: 2018-07-11 14:42 GMT

ಬೆಂಗಳೂರು, ಜು.11: ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನದ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಪಕ್ಷಾತೀತವಾಗಿ ಶಾಸಕರು ಪಟ್ಟು ಹಿಡಿದ ಪ್ರಸಂಗ ವಿಧಾನಸಭೆಯಲ್ಲಿ ಬುಧವಾರ ಜರುಗಿತು.

ಭೋಜನ ವಿರಾಮದ ಬಳಿಕ ಬಿಜೆಪಿ ಹಿರಿಯ ಸದಸ್ಯ ಬಸವರಾಜ ಬೊಮ್ಮಾಯಿ ಮಾತನಾಡಿದ ಬಳಿಕ ಬಿಜೆಪಿ ಸದಸ್ಯ ಪಿ.ರಾಜೀವ್ ಭಡ್ತಿ ಮೀಸಲಾತಿ ಕಾಯ್ದೆ ಕುರಿತು ಚರ್ಚೆಗೆ ನಿಲುವಳಿ ಸೂಚನೆಯಡಿ ಅವಕಾಶ ಮಾಡಿಕೊಡುವಂತೆ ಸಲ್ಲಿಸಲಾಗಿದ್ದ ಮನವಿ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ರಾಜೂಗೌಡ, ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ ಸದಸ್ಯ ಅನ್ನದಾನಿ ಸೇರಿದಂತೆ ಇತರ ಸದಸ್ಯರು ದನಿಗೂಡಿಸಿದರು.

ಸಭಾಧ್ಯಕ್ಷರ ಪೀಠದಲ್ಲಿ ಆಸೀನರಾಗಿದ್ದ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಈ ಬಗ್ಗೆ ಸಭಾಧ್ಯಕ್ಷರು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅವರು ತೀರ್ಮಾನ ನೀಡಿದ ನಂತರ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು. ಆದರೆ, ಅವರ ಮಾತು ಪೂರ್ಣಗೊಳ್ಳುವ ಮೊದಲೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ, ಈ ವಿಚಾರದ ಕುರಿತು ಚರ್ಚೆಗೆ ಸರಕಾರ ಸಿದ್ಧವಾಗಿದ್ದು, ಉತ್ತರವನ್ನು ನೀಡುತ್ತೇವೆ. ಸ್ಪೀಕರ್ ಈ ವಿಷಯವನ್ನು ಯಾವ ರೂಪದಲ್ಲಿ ಚರ್ಚೆಗೆ ಅವಕಾಶ ನೀಡುತ್ತಾರೆ ನೋಡೋಣ. ಸ್ಪೀಕರ್ ತಡೆ ಹಿಡಿದಿರುವ ವಿಷಯದ ತೀರ್ಪನ್ನು ಉಪ ಸಭಾಧ್ಯಕ್ಷರು ಹೇಗೆ ನೀಡಲು ಸಾಧ್ಯ ಎಂದರು.

ಆಗ ಎದ್ದು ನಿಂತ ವಿಪಕ್ಷ ನಾಯಕ ಯಡಿಯೂರಪ್ಪ, ನಮ್ಮ ಪಕ್ಷದಲ್ಲಿರುವ 104 ಶಾಸಕರು ಅನೇಕ ವಿಷಯಗಳ ಕುರಿತು ಮಾತನಾಡಬೇಕು. ಅದಕ್ಕೆ ಸಮಯ ಬೇಕು, ಆದರೆ, ಚರ್ಚೆಗೆ ಹೆಚ್ಚಿನ ಸಮಯ ನೀಡುತ್ತಿಲ್ಲ. ಸ್ಪೀಕರ್ ಬಂದ ನಂತರ ಅಧಿವೇಶನವನ್ನು ಮೂರು ದಿನ ವಿಸ್ತರಣೆ ಮಾಡಿ ಎಂದು ಆಗ್ರಹಿಸಿದರು.

ನಂತರ ಮಾತು ಮುಂದುವರೆಸಿದ ಕೃಷ್ಣ ಭೈರೇಗೌಡ, ಹೆಚ್ಚಿನ ಶಾಸಕರಿಗೆ ಮಾತನಾಡಲು ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದಲೆ ನಿನ್ನೆ ರಾತ್ರಿ 9 ಗಂಟೆಯವರೆಗೆ ಸದನ ನಡೆಸಲಾಗಿದೆ. ಇವತ್ತು ನಡೆಸೋಣ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಎ.ಎಸ್.ನಡಹಳ್ಳಿ, 9 ಗಂಟೆಯವರೆಗೆ ನಾವು ಯಾಕೆ ಕೂರಬೇಕು? ಎರಡು ದಿನ ಸದನ ಮುಂದೂಡಿ ಎಂದರು. ಇದಕ್ಕೆ ತಿರುಗೇಟು ನೀಡಿದ ಕೃಷ್ಣ ಭೈರೇಗೌಡ, ರಾತ್ರಿ 9 ಗಂಟೆಯವರೆಗೆ ಸದನ ನಡೆದರೆ ತಪ್ಪೇನು ಎಂದರು.

ಬಜೆಟ್ ಅಧಿವೇಶನ ನಡೆಯುತ್ತಿದೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಹಿರಿಯ ಸಚಿವರು ಯಾರೂ ಸದನದಲ್ಲಿ ಉಪಸ್ಥಿತರಿಲ್ಲ. ಸದನದ ಗಾಂಭೀರ್ಯತೆ ಎಷ್ಟರಮಟ್ಟಿಗೆ ಇದೆ ಎಂದು ವಿಪಕ್ಷದ ಉಪ ನಾಯಕ ಗೋವಿಂದ ಕಾರಜೋಳ ಕಿಚಾಯಿಸಿದರು. ಆನಂತರ ಯಡಿಯೂರಪ್ಪ ಹಾಗೂ ಉಪ ಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಮನವಿ ಮೇರೆಗೆ ಬಿಜೆಪಿ ಸದಸ್ಯರು ಧರಣಿಯನ್ನು ಕೈ ಬಿಟ್ಟು ತಮ್ಮ ಸ್ಥಾನಗಳಿಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News